HOMENews

ಸಾಲಿಗ್ರಾಮ ತಾಲೂಕು ಶಿಕ್ಷಕರ ಸಂಘ: ಅವಿರೋಧವಾಗಿ ಐದು ನಿರ್ದೇಶಕರ ಆಯ್ಕೆ

ವರದಿ :-ವಡ್ಡರಕೊಪ್ಪಲು ಶಿವರಾಮು.

ಕೆ ಆರ್ ನಗರ. ಏ. 15:- ಸಾಲಿಗ್ರಾಮ ತಾಲೂಕು ಮಟ್ಟದಲ್ಲಿ ಹೊಸದಾಗಿ ಸ್ಥಾಪಿತವಾಗಿರುವ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆಯಲ್ಲಿ ಎಸ್.ಆರ್. ನಾಗೇಶ್ ಅವರ ನೇತೃತ್ವದಲ್ಲಿ ಐದು ಮಂದಿ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿರುವುದು ಶಿಕ್ಷಕರ ವಲಯದಲ್ಲಿ ಸಂತಸದ ವಾತಾವರಣವನ್ನು ಉಂಟುಮಾಡಿದೆ.

ಕೆ.ಆರ್. ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘವು ಇತ್ತೀಚೆಗೆ ಸಾಲಿಗ್ರಾಮ ತಾಲೂಕಾಗಿ ವಿಭಜನೆಯಾದ ಹಿನ್ನೆಲೆ, ಪ್ರತ್ಯೇಕ ಸಂಘವನ್ನು ಸ್ಥಾಪಿಸಲಾಗಿದೆ. ಈ ಹೊಸ ಸಂಘದ ಮೊದಲನೇ ವರ್ಷದ ಆಡಳಿತ ಮಂಡಳಿಯ ನಿರ್ದೇಶಕರ ಆಯ್ಕೆ ಪ್ರಕ್ರಿಯೆ ಸುಗಮವಾಗಿ ನಡೆಯಿತು. ಸ್ಪರ್ಧೆಯಿಲ್ಲದೆ ಎಲ್ಲಾ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿರುವುದು ಸಂಘದ ಏಕತೆ ಮತ್ತು ಸಹಕಾರ ಮನೋಭಾವವನ್ನು ತೋರಿಸುತ್ತದೆ.

ನೂತನವಾಗಿ ಆಯ್ಕೆಯಾದ ನಿರ್ದೇಶಕರಾಗಿ ಎಸ್.ಆರ್. ನಾಗೇಶ್, ಆರ್. ನಾಗೇಶ, ಜಿ.ಎ. ನಾಗರಾಜ್, ಎಂ.ಡಿ. ಪಾಂಡು, ಎಸ್.ಡಿ. ಸವಿತ ಹಾಗೂ ಪಿ. ಮಮತಾ ಅವರನ್ನು ಘೋಷಿಸಲಾಯಿತು. ಇವರಲ್ಲಿ ಕೆಲವರು ಹಲವು ವರ್ಷಗಳಿಂದ ಶಿಕ್ಷಕರ ಸೇವೆಯಲ್ಲಿ ತೊಡಗಿಸಿಕೊಂಡು ಸಂಘಟನಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿರುವುದು ಗಮನಾರ್ಹವಾಗಿದೆ.

ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಆರ್. ಕೃಷ್ಣಪ್ಪ, ಬಿ.ಆರ್.ಸಿ. ವೆಂಕಟೇಶ್, ಸರ್ಕಾರಿ ನೌಕರರ ಸಂಘದ ನಿರ್ದೇಶಕರು, ಶಿಕ್ಷಕರ ಸಂಘದ ಪದಾಧಿಕಾರಿಗಳು ಹಾಗೂ ತಾಲೂಕಿನ ಅನೇಕ ಶಿಕ್ಷಕರು ನೂತನ ನಿರ್ದೇಶಕರಿಗೆ ಅಭಿನಂದನೆ ಸಲ್ಲಿಸಿದರು. ಸಂಘದ ಬೆಳವಣಿಗೆಗೆ ಹಾಗೂ ಶಿಕ್ಷಕರ ಹಿತಾಸಕ್ತಿಗಾಗಿ ಈ ನಿರ್ದೇಶಕರು ಸಮರ್ಥವಾಗಿ ಕಾರ್ಯನಿರ್ವಹಿಸುವ ವಿಶ್ವಾಸ ವ್ಯಕ್ತಪಡಿಸಿದರು.

ಹೊಸ ಸಂಘದ ಮೂಲಕ ಶಿಕ್ಷಕರ ಸಮಸ್ಯೆಗಳ ಪರಿಹಾರ, ಶಿಕ್ಷಣದ ಗುಣಮಟ್ಟ ಹೆಚ್ಚಿಸುವುದು ಹಾಗೂ ಶಿಕ್ಷಕರ ಹಕ್ಕುಗಳ ರಕ್ಷಣೆಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ನೂತನ ನಿರ್ದೇಶಕರು ಭರವಸೆ ನೀಡಿದ್ದಾರೆ.

ಸಾಲಿಗ್ರಾಮ ತಾಲೂಕಿನಲ್ಲಿ ಶಿಕ್ಷಕರ ಸಂಘದ ಈ ಅವಿರೋಧ ಆಯ್ಕೆ ಪ್ರಕ್ರಿಯೆ ಸಂಘಟನೆಯ ಬಲವನ್ನು ಮತ್ತಷ್ಟು ಹೆಚ್ಚಿಸುವ ದಿಕ್ಕಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.

Leave a Reply