HOMENews

ಗರ್ಭಿಣಿ ನರ್ಸ್ ಆ* ಹ* ಪ್ರಕರಣ: ಅತ್ತೆ : ಮಾವನ ಕಿರುಕುಳ ಆರೋಪದಡಿ ನಾಲ್ವರು ಬಂಧನ

ಶಿವಮೊಗ್ಗ, ಏಪ್ರಿಲ್ 4: ಕುಟುಂಬದೊಳಗಿನ ಕಿರುಕುಳ ಮತ್ತೊಮ್ಮೆ ಒಂದು ಜೀವನವೆ ಕೊನೆ ಅಗುವ ದುರಂತಕ್ಕೆ ಕಾರಣವಾದ ದುರ್ಘಟನೆ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಹೊಡಬಟ್ಟೆ ಗ್ರಾಮದಲ್ಲಿ ನಡೆದಿದೆ. ಸುಮಾರು ನಾಲ್ಕು ತಿಂಗಳ ಗರ್ಭಿಣಿಯಾಗಿದ್ದ ಸ್ಟಾಫ್ ನರ್ಸ್ ಒಬ್ಬರು ಆ* ಹ* ಗೆ ಶರಣಾದ ಪ್ರಕರಣವು ಭಾರೀ ಚರ್ಚೆಗೆ ಗ್ರಾಸವಾಗಿದೆ.

ಮೃತ ಮಹಿಳೆಯನ್ನು ಶ್ವೇತಾ (30) ಎಂದು ಗುರುತಿಸಲಾಗಿದೆ. ಅವರು ಖಾಸಗಿ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಕಳೆದ ಮಾರ್ಚ್ 29ರಂದು ಮನೆಯಲ್ಲಿ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆ* ಹ* ಗೆ ಯತ್ನಿಸಿದ್ದರು. ತಕ್ಷಣವೇ ಅವರನ್ನು ಸಾಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು. ನಂತರ ಗಂಭೀರ ಸ್ಥಿತಿಯ ಹಿನ್ನೆಲೆಯಲ್ಲಿ ಮಣಿಪಾಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶ್ವೇತಾ ಮೃ*ಪಟ್ಟಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ಮೃತಳ ಪೋಷಕರು ಗಂಭೀರ ಆರೋಪಗಳನ್ನು ಹೊರಹಾಕಿದ್ದಾರೆ. ಮಗಳಿಗೆ ಮದುವೆಯಾದ ನಂತರದಿಂದಲೇ ಅತ್ತೆ–ಮಾವನಿಂದ ನಿರಂತರ ಕಿರುಕುಳ ನೀಡಲಾಗುತ್ತಿತ್ತು ಎಂದು ಆರೋಪಿಸಿದ್ದಾರೆ. ಮನೆ ಬಿಟ್ಟು ಹೋಗುವಂತೆ ಒತ್ತಡ ಹಾಕಲಾಗುತ್ತಿತ್ತು, ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಲಾಗುತ್ತಿತ್ತು ಎಂಬುದಾಗಿ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಇದೇ ಕಾರಣದಿಂದ ಆತ್ಮಹತ್ಯೆಗೆ ತಳ್ಳಲಾಗಿದೆ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಪ್ರಕರಣದ ಕುರಿತು ಸೊರಬ ಪೊಲೀಸ್ ಠಾಣೆಯಲ್ಲಿ ಆರು ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ತನಿಖೆ ಆರಂಭಿಸಿದ ಪೊಲೀಸರು ಪ್ರಮುಖ ಆರೋಪಿಗಳಾದ ಅತ್ತೆ ಜಾನಕಿ, ಮಾವ ಸಣ್ಣಪ್ಪ, ಹಿರಿಯ ಪುತ್ರ ಹೇಮಂತ್ ಹಾಗೂ ಸೊಸೆ ದಿವ್ಯರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಇನ್ನುಳಿದ ಆರೋಪಿಗಳ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.

ಪ್ರಾಥಮಿಕ ತನಿಖೆಯಲ್ಲಿ ಕುಟುಂಬ ಕಲಹ, ನಿರಂತರ ಕಿರುಕುಳ ಮತ್ತು ಗರ್ಭಿಣಿಯಾಗಿದ್ದರೂ ಮಾನಸಿಕ ಒತ್ತಡಕ್ಕೆ ಒಳಪಡಿಸಿರುವುದು ಈ ದುರಂತಕ್ಕೆ ಕಾರಣವಾಗಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಮೃತಳಿಂದ ಯಾವುದೇ ಡೈಯಿಂಗ್ ಡಿಕ್ಲರೇಶನ್ ಅಥವಾ ಬರಹದ ಹೇಳಿಕೆ ಲಭ್ಯವಿದೆಯೇ ಎಂಬುದನ್ನೂ ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಈ ಘಟನೆ ಗ್ರಾಮದಲ್ಲಿ ತೀವ್ರ ಆಘಾತ ಉಂಟುಮಾಡಿದ್ದು, ಮಹಿಳೆಯರ ಮೇಲೆ ನಡೆಯುತ್ತಿರುವ ಗೃಹ ಹಿಂಸಾಚಾರ ಪ್ರಕರಣಗಳ ಬಗ್ಗೆ ಮತ್ತೆ ಚರ್ಚೆ ಶುರುವಾಗಿದೆ. ಗರ್ಭಿಣಿ ಮಹಿಳೆಯೊಬ್ಬಳು ಇಂತಹ ಕಠಿಣ ನಿರ್ಧಾರ ತೆಗೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿರುವುದು ಸಮಾಜದ ಮನಸ್ಸನ್ನು ಕಲುಕಿದೆ.

ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಸಂಪೂರ್ಣ ತನಿಖೆಯ ನಂತರ ನಿಜಾಂಶ ಹೊರಬರುವ ನಿರೀಕ್ಷೆ ಇದೆ.

Leave a Reply