
ಹಾಸನ:- ಗಾಂಜಾ ಅಮಲಿನಲ್ಲಿ ಮಾನವೀಯತೆ ಮರೆತ ಯುವಕರ ಗುಂಪೊಂದು ಸ್ನೇಹಿತನನ್ನೇ ಅಪಹರಿಸಿ, ಕ್ರೂರವಾಗಿ ಹಲ್ಲೆ ನಡೆಸಿ ಕೊಂದು, ಬಳಿಕ ಶವವನ್ನು ಸುಟ್ಟು ಸಾಕ್ಷ್ಯ ನಾಶಕ್ಕೆ ಯತ್ನಿಸಿರುವ ಭಯಾನಕ ಘಟನೆ ಹಾಸನ ಜಿಲ್ಲೆಯ ನಿಟ್ಟೂರು ಸಮೀಪದ ಹಂಗರಹಳ್ಳಿಯ ತೋಟದ ಮನೆಯಲ್ಲಿ ಬೆಳಕಿಗೆ ಬಂದಿದೆ. ಈ ಪ್ರಕರಣವು ಜಿಲ್ಲೆಯಾದ್ಯಂತ ಆತಂಕ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ.
ಅರಸೀಕೆರೆ ತಾಲೂಕಿನ ಕಾಡಯ್ಯನಕೊಪ್ಪಲು ನಿವಾಸಿಯಾದ ವರುಣ್ (22) ಕೊಲೆಯಾದ ಯುವಕನಾಗಿದ್ದು, ಹಣಕಾಸು ವಿಚಾರದಲ್ಲಿ ಉಂಟಾದ ವೈಷಮ್ಯವೇ ಈ ದುರಂತಕ್ಕೆ ಕಾರಣವಾಗಿರುವುದಾಗಿ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಶಶಾಂಕ್, ಸತೀಶ್, ಕಿರಣ್, ಅಭಿ, ಜೀವನ್, ಚೇತನ್, ಪೃಥ್ವಿಕ್ ಮತ್ತು ಗಜ ಅಲಿಯಾಸ್ ಪ್ರಜ್ವಲ್ ವಿರುದ್ಧ ಕೊಲೆ ಆರೋಪದಡಿ ಪ್ರಕರಣ ದಾಖಲಾಗಿದೆ.
ಮಾಹಿತಿ ಪ್ರಕಾರ, ಮಾರ್ಚ್ 10ರಂದು ವರುಣ್ ನಾಪತ್ತೆಯಾಗಿದ್ದು, ಇದೇ ವೇಳೆ ಆತನ ಸ್ನೇಹಿತ ಲೋಹಿತ್‌ನನ್ನೂ ಆರೋಪಿಗಳು ಅಪಹರಿಸಿ ಹಂಗರಹಳ್ಳಿಯ ತೋಟದ ಮನೆಯಲ್ಲಿ ಕಟ್ಟಿಹಾಕಿದ್ದರು. ಹಣಕಾಸು ವಿಚಾರದಲ್ಲಿ ಉಂಟಾದ ಗಲಾಟೆ ಹಿನ್ನೆಲೆ ಇಬ್ಬರ ಮೇಲೂ ಕ್ರೂರ ಹಲ್ಲೆ ನಡೆಸಲಾಗಿದೆ. ಈ ವೇಳೆ ಗಾಯಗೊಂಡಿದ್ದ ಲೋಹಿತ್ ಹೇಗೋ ಅಲ್ಲಿಂದ ತಪ್ಪಿಸಿಕೊಂಡು ಪಾರಾಗಿದ್ದು, ಬಳಿಕ ಈ ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದಾನೆ.
ಇನ್ನೊಂದೆಡೆ, ವರುಣ್ ಮೇಲೆ ಆರೋಪಿಗಳು ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಗೈದಿದ್ದಾರೆ. ಬಳಿಕ ಘಟನೆ ಮುಚ್ಚಿಹಾಕಲು ಯತ್ನಿಸಿದ ದುಷ್ಟರು, ಶವವನ್ನು ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ಜೇನುಕಲ್ಲು ಸಿದ್ದೇಶ್ವರಸ್ವಾಮಿ ಬೆಟ್ಟದ ತಪ್ಪಲಿಗೆ ಕೊಂಡೊಯ್ದು ಸಂಪೂರ್ಣ ಸುಟ್ಟು ಹಾಕಿ ಪರಾರಿಯಾಗಿದ್ದಾರೆ. ಈ ಕೃತ್ಯವು ಘಟನೆಗೆ ಇನ್ನಷ್ಟು ಕ್ರೂರತೆ ಮತ್ತು ನಿಗೂಢತೆಯನ್ನು ಹೆಚ್ಚಿಸಿದೆ.
ಇತ್ತ ಮಾರ್ಚ್ 15ರಂದು ವರುಣ್ ತಾಯಿ ಕಲಾವತಿ ಅವರು ಪುತ್ರ ನಾಪತ್ತೆಯಾಗಿರುವ ಕುರಿತು ಗಂಡಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ನಾಪತ್ತೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದು, ತನಿಖೆ ವೇಳೆ ಹತ್ಯೆ ನಡೆದಿರುವುದು ಬೆಳಕಿಗೆ ಬಂದಿದೆ.
ಮಾರ್ಚ್ 19ರಂದು ಹಾಸನ ತಾಲೂಕಿನ ದುದ್ದ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಪೊಲೀಸರು ತ್ವರಿತ ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಉಳಿದ ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ.
ಈ ಪ್ರಕರಣದ ಗಂಭೀರತೆಯನ್ನು ಮನಗಂಡು ವಿಶೇಷ ತನಿಖಾ ತಂಡವನ್ನು ರಚಿಸಲಾಗಿದ್ದು, ಅಪಹರಣದಿಂದ ಹತ್ಯೆವರೆಗೆ ನಡೆದ ಘಟನೆಗಳ ಸಂಪೂರ್ಣ ವಿವರ ಸಂಗ್ರಹಿಸುವ ಕಾರ್ಯ ನಡೆಯುತ್ತಿದೆ. ಗಾಂಜಾ ಅಮಲು ಮತ್ತು ದುರ್ವ್ಯಸನಗಳಿಂದ ಯುವಕರು ತಪ್ಪು ದಾರಿಗೆ ಹೋಗುತ್ತಿರುವುದು ಈ ಪ್ರಕರಣದಿಂದ ಮತ್ತೊಮ್ಮೆ ಸ್ಪಷ್ಟವಾಗಿದ್ದು, ಸಮಾಜದಲ್ಲಿ ಆತಂಕ ಹೆಚ್ಚಿಸಿದೆ. ಪೊಲೀಸರು ಆರೋಪಿಗಳನ್ನು ಕಾನೂನಿನ ಕಠಿಣ ಕ್ರಮಕ್ಕೆ ಒಳಪಡಿಸುವುದಾಗಿ ತಿಳಿಸಿದ್ದು, ಪೋಷಕರು ತಮ್ಮ ಮಕ್ಕಳ ಸ್ನೇಹ ಬಳಗ ಹಾಗೂ ಚಟುವಟಿಕೆಗಳ ಮೇಲೆ ಹೆಚ್ಚಿನ ಗಮನ ಹರಿಸುವ ಅಗತ್ಯವಿದೆ ಎಂಬ ಸಂದೇಶವೂ ಈ ಪ್ರಕರಣ ನೀಡುತ್ತಿದೆ.





