HOMENews

ಜಾಗತಿಕ ಉದ್ಯೋಗ ಸವಾಲುಗಳಿಗೆ ತಳಮಟ್ಟದ ನವೀನತೆ ಅಗತ್ಯ: ತಜ್ಞರ ಅಭಿಪ್ರಾಯ

ಮೈಸೂರು:- 2030ರ ವೇಳೆಗೆ ಜಗತ್ತಿನಾದ್ಯಂತ ಸುಮಾರು 800 ಮಿಲಿಯನ್ ಜನರು ಉದ್ಯೋಗಕ್ಕಾಗಿ ಎದುರು ನೋಡಲಿದ್ದಾರೆ. ಇಷ್ಟು ದೊಡ್ಡ ಸಂಖ್ಯೆಯ ಜನರಿಗೆ ಉದ್ಯೋಗಾವಕಾಶಗಳನ್ನು ಒದಗಿಸುವುದು ಸರ್ಕಾರಗಳು ಹಾಗೂ ಉದ್ಯೋಗ ಕ್ಷೇತ್ರಕ್ಕೆ ಮಾತ್ರ ಸಾಧ್ಯವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ತಳಮಟ್ಟದ ನವೀನ ಪ್ರಯತ್ನಗಳು ಹಾಗೂ ಸಹಸೃಜನ (Co-creation) ಮಾದರಿಗಳ ಅನುಸರಣೆ ಅತ್ಯಂತ ಅಗತ್ಯವಾಗಿದೆ ಎಂದು ರಾಕುಟೆನ್ ಇಂಡಿಯಾ ಎಂಟರ್ಪ್ರೈಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕ ಹಾಗೂ ಬೆಂಗಳೂರು ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿಯ ಅಂತರರಾಷ್ಟ್ರೀಯ ವ್ಯಾಪಾರ ತಜ್ಞರ ಸಮಿತಿಯ ಸಹಾಧ್ಯಕ್ಷರಾದ ಶಮಂತ್ ಎಸ್.ಎನ್. ತಿಳಿಸಿದರು.


ಮೈಸೂರಿನ ಎಸ್ಡಿಎಂ ಇನ್ಸ್ಟಿಟ್ಯೂಟ್ ಫಾರ್ ಮ್ಯಾನೇಜ್ಮೆಂಟ್ ಡೆವಲಪ್ಮೆಂಟ್ (SDMIMD) ವತಿಯಿಂದ ಆಯೋಜಿಸಲಾದ “ಸಮಕಾಲೀನ ನವೀನತೆ, ಒಳಗೊಳ್ಳಿಕೆ ಮತ್ತು ಪರಿಣಾಮ” (Contemporary Contexts in Innovation, Inclusion and Impact) ಕುರಿತ ಪ್ರಥಮ ಅಂತರರಾಷ್ಟ್ರೀಯ ಕೇಸ್ ಸಂಮೇಳದಲ್ಲಿ ಮುಖ್ಯ ಭಾಷಣ ಮಾಡಿದರು.
ಸಂಮೇಳದಲ್ಲಿ ಮಾತನಾಡಿದ ಅವರು, ಜಪಾನ್ನ ಉದ್ಯಮ ಪರಿಸರದ ಉದಾಹರಣೆಗಳನ್ನು ನೀಡಿ ವಿಶ್ಲೇಷಣಾತ್ಮಕ ಮಾಹಿತಿಯನ್ನು ಹಂಚಿಕೊಂಡರು. ಜಪಾನ್ನಲ್ಲಿ ಸ್ಥಳೀಯ ಆಡಳಿತ ಸಂಸ್ಥೆಗಳು ನವೀನತೆ ಕೇಂದ್ರಗಳನ್ನು (Innovation Hubs) ನಿರ್ಮಿಸಿ ವಿವಿಧ ಕ್ಷೇತ್ರಗಳಿಗೆ ಬಲವಾದ ವೇದಿಕೆಯನ್ನು ಒದಗಿಸುತ್ತವೆ. ಈ ಪರಿಸರದಲ್ಲಿ ವೆಂಚರ್ ಕ್ಯಾಪಿಟಲ್ ಹೂಡಿಕೆದಾರರು, ತಂತ್ರಜ್ಞ ಹೂಡಿಕೆದಾರರು ಹಾಗೂ ಏಂಜಲ್ ಹೂಡಿಕೆದಾರರು ಸಕ್ರಿಯವಾಗಿ ಭಾಗವಹಿಸುತ್ತಾರೆ ಎಂದು ಹೇಳಿದರು.


ಜಪಾನ್ನ “ಕೈರೆಟ್ಸು” (Keiretsu) ಉದ್ಯಮ ಮಾದರಿಯನ್ನು ಉಲ್ಲೇಖಿಸಿದ ಅವರು, ಸ್ಥಾಪಿತ ಉದ್ಯಮಗಳು ಮತ್ತು ಹೊಸ ಸ್ಟಾರ್ಟ್ಅಪ್ ಸಂಸ್ಥೆಗಳು ಪರಸ್ಪರ ಸಹಕಾರದ ಮೂಲಕ ಬೆಳೆಯಲು ಅವಕಾಶ ಸಿಗುತ್ತದೆ. ಈ ರೀತಿಯ ಸಹಯೋಗದಿಂದ ಹೊಸ ಉದ್ಯಮಗಳು ವೇಗವಾಗಿ ವಿಸ್ತರಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಇಂದಿನ ಸ್ಟಾರ್ಟ್ಅಪ್ ಪರಿಸರವನ್ನು ವಿಶ್ಲೇಷಿಸಿದ ಶಮಂತ್ ಎಸ್.ಎನ್., ಅನೇಕ ಸ್ಟಾರ್ಟ್ಅಪ್ ಸಂಸ್ಥೆಗಳು ಆರಂಭವಾದ ಎರಡು ಅಥವಾ ಮೂರು ವರ್ಷಗಳಲ್ಲೇ ಸ್ಥಗಿತಗೊಳ್ಳುತ್ತಿರುವುದನ್ನು ಗಮನಿಸಬಹುದು. ಮಾರುಕಟ್ಟೆಯ ಅಗತ್ಯಗಳನ್ನು ಸಮರ್ಪಕವಾಗಿ ಅರ್ಥಮಾಡಿಕೊಳ್ಳದೇ ಉತ್ಪನ್ನಗಳು ಮತ್ತು ವ್ಯವಹಾರ ಮಾದರಿಗಳನ್ನು ರೂಪಿಸುವುದೇ ಇದರ ಪ್ರಮುಖ ಕಾರಣವಾಗಿದೆ ಎಂದು ಹೇಳಿದರು. ಯಾವುದೇ ಹೊಸ ಉತ್ಪನ್ನ ಅಥವಾ ಸೇವೆಯನ್ನು ವ್ಯಾಪಕವಾಗಿ ಪರಿಚಯಿಸುವ ಮೊದಲು ಸಮಗ್ರವಾಗಿ ಪರೀಕ್ಷಿಸಿ ದೃಢೀಕರಿಸುವುದು ಅಗತ್ಯವೆಂದು ಅವರು ಒತ್ತಿ ಹೇಳಿದರು.
ಸಂಮೇಳದ ಉದ್ಘಾಟನಾ ಭಾಷಣ ಮಾಡಿದ ಡಾ.(ಲೆಫ್ಟಿನೆಂಟ್ ಕರ್ನಲ್) ಎಸ್.ಎನ್. ಪ್ರಸಾದ್ ಅವರು, ಕೇಸ್ ಅಧ್ಯಯನಗಳು ವಿಶೇಷ ಸ್ವರೂಪ ಹೊಂದಿದ್ದು, ವಿಮರ್ಶಾತ್ಮಕ ಚಿಂತನೆ, ಸಹಕಾರಾತ್ಮಕ ಸಮಸ್ಯೆ ಪರಿಹಾರ ಹಾಗೂ ನವೀನ ಪರಿಹಾರಗಳನ್ನು ಉತ್ತೇಜಿಸುತ್ತವೆ ಎಂದು ಹೇಳಿದರು.
ನಿರ್ವಹಣಾ ಶಿಕ್ಷಣದಲ್ಲಿ ಕೇಸ್ ಅಧ್ಯಯನಗಳ ಪಾತ್ರ ಮಹತ್ವದ್ದಾಗಿದ್ದು, ಶಿಕ್ಷಕರು ಕೇಸ್ಗಳನ್ನು ರೂಪಿಸುವ ಮತ್ತು ವಿದ್ಯಾರ್ಥಿಗಳಿಗೆ ಪರಿಚಯಿಸುವ ವಿಧಾನವೇ ಪರಿಣಾಮಕಾರಿ ಕಲಿಕೆಗೆ ಮುಖ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.


ಸಮಾರೋಪ ಸಮಾರಂಭದಲ್ಲಿ ಭಾರತೀಯ ನಿರ್ವಹಣಾ ಸಂಸ್ಥೆ ಬೆಂಗಳೂರು (ಐಐಎಂ-ಬೆಂಗಳೂರು)ಯ ಸಂಕರ್ಷಣ್ ಬಸು ಮಾತನಾಡಿ, ಸಮಗ್ರ ಕೇಸ್ ವಿಶ್ಲೇಷಣೆ ನಿರ್ವಹಣಾ ತಿಳುವಳಿಕೆಯನ್ನು ಬಲಪಡಿಸುವುದರ ಜೊತೆಗೆ ಅನ್ವಯಾತ್ಮಕ ಅಧ್ಯಯನಕ್ಕೆ ಸಹಕಾರಿಯಾಗಿದೆ ಎಂದು ಹೇಳಿದರು.
“ದಿ ಕೇಸ್ ಇಕೋಸಿಸ್ಟಮ್” ವಿಷಯದ ಕುರಿತು ನಡೆದ ಪ್ಯಾನೆಲ್ ಚರ್ಚೆಯಲ್ಲಿ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಟೆಕ್ನಾಲಜಿ ನಾಗ್ಪುರ, ಬಿರ್ಲಾ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಟೆಕ್ನಾಲಜಿ ಹಾಗೂ ಎಸ್ಡಿಎಂ ಇನ್ಸ್ಟಿಟ್ಯೂಟ್ ಫಾರ್ ಮ್ಯಾನೇಜ್ಮೆಂಟ್ ಡೆವಲಪ್ಮೆಂಟ್ ಸಂಸ್ಥೆಗಳ ತಜ್ಞರು ಭಾಗವಹಿಸಿದರು.

ಇದರ ಜೊತೆಗೆ ಕೇಸ್ ಬರವಣಿಗೆ, ಬೋಧನಾ ಟಿಪ್ಪಣಿಗಳು, ಸಂಶೋಧನಾ ವಿಧಾನಗಳು ಹಾಗೂ ಪ್ರಕಟಣೆಯ ಮಾರ್ಗಗಳನ್ನು ಒಳಗೊಂಡ ಕಾರ್ಯಾಗಾರವೂ ಆಯೋಜಿಸಲಾಗಿತ್ತು.

Leave a Reply