HOMENews

ಹುಣಸೂರು ಚಿನ್ನದಂಗಡಿ ದರೋಡೆ ಪ್ರಕರಣಕ್ಕೆ ತಿರುವು: ನಾಲ್ವರು ಬಂಧನ, ಉಳಿದವರಿಗಾಗಿ ತೀವ್ರ ಶೋಧ

ಮೈಸೂರು, ಮಾ.09:- ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ಹಾಡಹಗಲೇ ನಡೆದ ಚಿನ್ನದಂಗಡಿ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರಿಗೆ ಮಹತ್ವದ ಸುಳಿವು ಸಿಕ್ಕಿದ್ದು, ಅಂತಾರಾಜ್ಯ ಕಳ್ಳರ ಗುಂಪಿನ ನಾಲ್ವರನ್ನು ಬಂಧಿಸಲಾಗಿದೆ. ಉಳಿದ ಆರೋಪಿಗಳ ಬಂಧನ ಹಾಗೂ ಸುಮಾರು 8 ಕೆಜಿ ಚಿನ್ನಾಭರಣ ವಶಪಡಿಸಿಕೊಳ್ಳಲು ಪೊಲೀಸರು ವಿವಿಧ ರಾಜ್ಯಗಳ ಪೊಲೀಸರ ಸಹಕಾರದೊಂದಿಗೆ ಶೋಧ ಕಾರ್ಯವನ್ನು ಮುಂದುವರೆಸಿದ್ದಾರೆ.


ಈ ಕುರಿತು ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಅವರು ಸೋಮವಾರ ತಮ್ಮ ಕಚೇರಿಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಹುಣಸೂರಿನ ಚಿನ್ನದಂಗಡಿಯಲ್ಲಿ ನಡೆದ ದರೋಡೆ ಪ್ರಕರಣದಲ್ಲಿ ಒಟ್ಟು 11 ಮಂದಿ ಅಂತಾರಾಜ್ಯ ಕಳ್ಳರು ಭಾಗಿಯಾಗಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಅವರು ತಿಳಿಸಿದರು.

ಪೊಲೀಸರು ಮೊದಲ ಹಂತದಲ್ಲಿ ಚೋಟು ಸಿಂಗ್ ಮತ್ತು ಪಂಕಜ್ ಸಿಂಗ್ ಎಂಬ ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ದರೋಡೆಗೆ ಇನ್ನೂ ಹಲವು ಮಂದಿ ಸೇರಿಕೊಂಡಿರುವುದು ತಿಳಿಯಿತು. ನಂತರ ದೊರೆತ ಮಾಹಿತಿಯ ಆಧಾರದ ಮೇಲೆ ಹರ್ಮನ್ ಮತ್ತು ಸೋನು ಸಿಂಗ್ ಎಂಬ ಮತ್ತಿಬ್ಬರನ್ನು ಬಂಧಿಸಲಾಗಿದ್ದು, ಈವರೆಗೆ ಒಟ್ಟು ನಾಲ್ವರನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದರು.

ದರೋಡೆ ವೇಳೆ ಸುಮಾರು 8 ಕೆಜಿ ಚಿನ್ನಾಭರಣವನ್ನು ದೋಚಿಕೊಂಡು ಪರಾರಿಯಾಗಿರುವ ಆರೋಪಿಗಳು ವಿವಿಧ ರಾಜ್ಯಗಳಿಗೆ ತೆರಳಿರುವ ಸಾಧ್ಯತೆ ಇದ್ದು, ಉಳಿದ ಆರೋಪಿಗಳನ್ನು ಬಂಧಿಸಲು ವಿಶೇಷ ತಂಡಗಳನ್ನು ರಚಿಸಿ ತನಿಖೆ ಮುಂದುವರೆಸಲಾಗಿದೆ. ಚಿನ್ನಾಭರಣವನ್ನು ವಶಪಡಿಸಿಕೊಳ್ಳಲು ಸಹ ನಿರಂತರ ಪ್ರಯತ್ನ ನಡೆಯುತ್ತಿದೆ ಎಂದು ಎಸ್‌ಪಿ ತಿಳಿಸಿದರು.

ಆರೋಪಿಗಳು ದರೋಡೆಗೆ ಸೂಕ್ಷ್ಮ ಯೋಜನೆ

ತನಿಖೆಯಲ್ಲಿ ಬಹಿರಂಗವಾದ ಮಾಹಿತಿಯ ಪ್ರಕಾರ, ಈ ದರೋಡೆಗೆ ಮುನ್ನ ಆರೋಪಿಗಳು ಸೂಕ್ಷ್ಮವಾಗಿ ಯೋಜನೆ ರೂಪಿಸಿದ್ದರು. ಒಡಿಶಾದ ಕಟಕ್ ಜೈಲಿನಿಂದ ತಪ್ಪಿಸಿಕೊಂಡಿದ್ದ ಒಬ್ಬ ಆರೋಪಿ ಇತರರೊಂದಿಗೆ ಕೈಜೋಡಿಸಿ ಈ ಕೃತ್ಯಕ್ಕೆ ಸಂಚು ರೂಪಿಸಿದ್ದಾನೆ. ಎಲ್ಲಾ ಆರೋಪಿಗಳೂ ಹೊರ ರಾಜ್ಯದವರಾಗಿದ್ದು, ಹುಣಸೂರಿನಲ್ಲಿರುವ ಒಂದು ಲಾಡ್ಜ್‌ನಲ್ಲಿ ತಂಗಿ ಹಲವು ದಿನಗಳ ಕಾಲ ದರೋಡೆಗೆ ಪೂರ್ವಭಾವಿ ಸಿದ್ಧತೆ ನಡೆಸಿದ್ದರು.

ಪೊಲೀಸರ ಕೈಗೆ ಸಿಕ್ಕದಂತೆ ಇರಲು ಆರೋಪಿಗಳು ತಮ್ಮ ವೈಯಕ್ತಿಕ ಮೊಬೈಲ್‌ಗಳನ್ನು ಬಳಸದೇ, ಸಿಕ್ಕಸಿಕ್ಕ ಸ್ಥಳಗಳಲ್ಲಿ ಲಭ್ಯವಿದ್ದ ಉಚಿತ ವೈ-ಫೈ ಸೇವೆಯನ್ನು ಬಳಸಿಕೊಂಡು ಪರಸ್ಪರ ಸಂಪರ್ಕದಲ್ಲಿದ್ದರು. ಈ ಕಾರಣದಿಂದ ತನಿಖೆ ಸ್ವಲ್ಪ ಸವಾಲಿನದಾಗಿತ್ತು. ಆದರೂ ತಾಂತ್ರಿಕ ಮಾಹಿತಿ ಹಾಗೂ ವಿವಿಧ ರಾಜ್ಯಗಳ ಪೊಲೀಸರ ಸಹಾಯದಿಂದ ಆರೋಪಿಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಎಸ್‌ಪಿ ವಿವರಿಸಿದರು.

ದುಷ್ಕರ್ಮಿಗಳ ಮತ್ತೊಂದು ದರೋಡೆ ಪ್ರಕರಣ ಪತ್ತೆ

ಇದೇ ವೇಳೆ ಬಿಳಿಕೆರೆ ಪೊಲೀಸ್ ಠಾಣೆ ವ್ಯಾಪ್ತಿಯ ಗದ್ದಿಗೆ ಬಳಿ ಇರುವ ಪೆಟ್ರೋಲ್ ಬಂಕ್‌ನಲ್ಲಿ ನಡೆದ ದರೋಡೆ ಪ್ರಕರಣವನ್ನೂ ಪೊಲೀಸರು ಪತ್ತೆಹಚ್ಚಿದ್ದಾರೆ. ಕಾರಿನಲ್ಲಿ ಬಂದಿದ್ದ ದುಷ್ಕರ್ಮಿಗಳು ಪೆಟ್ರೋಲ್ ಬಂಕ್‌ನಿಂದ ಹಣ ದೋಚಿಕೊಂಡು ಪರಾರಿಯಾಗಿದ್ದ ಪ್ರಕರಣದಲ್ಲಿ ಐದು ಮಂದಿಯನ್ನು ಬಂಧಿಸಲಾಗಿದೆ.

ಈ ಪ್ರಕರಣದ ಪ್ರಮುಖ ಆರೋಪಿ ಲಕ್ಷ್ಮಣ್ ಎಂಬಾತ ಮಂಡ್ಯ ಮೂಲದವನಾಗಿದ್ದು, ಆತ ಮಂಡ್ಯ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ವೇಳೆ ಚನ್ನಪಟ್ಟಣ ಮತ್ತು ಹಾಸನ ಮೂಲದ ನಾಲ್ವರು ಆರೋಪಿಗಳೊಂದಿಗೆ ಜೈಲಿನಲ್ಲೇ ದರೋಡೆ ಸಂಚು ರೂಪಿಸಿದ್ದಾನೆ. ಬಳಿಕ ಜೈಲಿನಿಂದ ಬಿಡುಗಡೆಯಾದ ನಂತರ ಅವರು ಸೇರಿ ಪೆಟ್ರೋಲ್ ಬಂಕ್‌ನಲ್ಲಿ ದರೋಡೆ ನಡೆಸಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ ಎಂದು ಎಸ್‌ಪಿ ತಿಳಿಸಿದರು.
ಕಳೆದ ಎರಡು ತಿಂಗಳಲ್ಲಿ ಹಲವು ಪ್ರಕರಣ ಪತ್ತೆ

ಕಳೆದ ಎರಡು ತಿಂಗಳ ಅವಧಿಯಲ್ಲಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದ ಹಲವು ಕಳ್ಳತನ ಮತ್ತು ದರೋಡೆ ಪ್ರಕರಣಗಳನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಈ ಅವಧಿಯಲ್ಲಿ 2 ರಾಬರಿ, 7 ಮನೆ ಕಳ್ಳತನ ಹಾಗೂ 8 ಸಾಮಾನ್ಯ ಕಳ್ಳತನ ಪ್ರಕರಣಗಳನ್ನು ಭೇದಿಸಲಾಗಿದ್ದು, ಸುಮಾರು 30 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ಹೇಳಿದರು.
ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಹಾಗೂ ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸಲು ಪೊಲೀಸ್ ಇಲಾಖೆ ಕಠಿಣ ಕ್ರಮಗಳನ್ನು ಮುಂದುವರೆಸಲಿದೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

Leave a Reply