ಪ್ರೀತಿಸಿ ಮದುವೆಯಾದ ಹೆಂಡತಿಗೆ ಪತಿಯೇ ಅಂತ್ಯ: ಗೋವನಕೊಪ್ಪದಲ್ಲಿ ನಡುರಸ್ತೆಯಲ್ಲಿ ಕ್ರೂರ ಹ*, ಗ್ರಾಮ ಬೆಚ್ಚಿಬಿದ್ದದ್ದು

ಬೆಳಗಾವಿ, ಮಾ. 23: ಪ್ರೀತಿ ಮದುವೆಯಿಂದ ಆರಂಭವಾದ ದಾಂಪತ್ಯ ಜೀವನವು ಕ್ರೂರ ಅಂತ್ಯ ಕಂಡಿರುವ ದುರ್ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಗೋವನಕೊಪ್ಪ ಗ್ರಾಮದಲ್ಲಿ ನಡೆದಿದೆ. ಗಂಡನೇ ತನ್ನ ಹೆಂಡತಿಯನ್ನು ನಡುರಸ್ತೆಯಲ್ಲಿ ಕಲ್ಲಿನಿಂದ ಜಜ್ಜಿ ಹ*ಗೈದಿರುವ ಘಟನೆ ಗ್ರಾಮಸ್ಥರನ್ನು ಬೆಚ್ಚಿಬೀಳುವಂತೆ ಮಾಡಿದೆ. ಈ ಪ್ರಕರಣ ಸಂಬಂಧ ದೊಡವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮೃತಳನ್ನು ಶಿವಕ್ಕ ಜೋಡಳ್ಳಿ (33) ಎಂದು ಗುರುತಿಸಲಾಗಿದೆ. ಆರೋಪಿಯಾಗಿರುವ ಪತಿ ಬಸವರಾಜ ಜೋಡಳ್ಳಿ, ವೃತ್ತಿಯಿಂದ ಡ್ರೈವರ್ ಆಗಿದ್ದು, ಹಲವು ವರ್ಷಗಳ ಹಿಂದೆ ಇಬ್ಬರೂ ಪರಸ್ಪರ ಪ್ರೀತಿಸಿ ಅಂತರ್ಜಾತಿ ವಿವಾಹವಾಗಿದ್ದರು. ಶಿವಕ್ಕಳ ಮೊದಲ ಗಂಡ ಅಕಾಲಿಕವಾಗಿ ಮೃತಪಟ್ಟ ನಂತರ, ಬಸವರಾಜನೊಂದಿಗೆ ಅವಳು ಜೀವನ ಆರಂಭಿಸಿದ್ದಳು. ಆದರೆ ಕಳೆದ ಕೆಲವು ವರ್ಷಗಳಿಂದ ಇವರ ದಾಂಪತ್ಯ ಜೀವನದಲ್ಲಿ ಕಲಹಗಳು ಹೆಚ್ಚಾಗಿದ್ದವು ಎಂದು ಸ್ಥಳೀಯರು ತಿಳಿಸಿದ್ದಾರೆ.
ಮಾಹಿತಿ ಪ್ರಕಾರ, ಗಂಡನ ಕಿರುಕುಳಕ್ಕೆ ಬೇಸತ್ತ ಶಿವಕ್ಕ ತನ್ನಿಬ್ಬರು ಮಕ್ಕಳೊಂದಿಗೆ ಮಠವೊಂದರಲ್ಲಿ ಪ್ರತ್ಯೇಕವಾಗಿ ವಾಸವಾಗುತ್ತಿದ್ದಳು. ತನ್ನ ಮಗಳನ್ನು ಪತಿಯ ಮನೆಯಲ್ಲಿ ಬಿಟ್ಟಿದ್ದ ಶಿವಕ್ಕ, ಮಗಳ ಆರೈಕೆ ಸರಿಯಾಗಿ ನಡೆಯುತ್ತಿಲ್ಲವೆಂಬ ವಿಚಾರದಲ್ಲಿ ಅತ್ತೆಯೊಂದಿಗೆ ಫೋನ್ ಮೂಲಕ ವಾಗ್ವಾದ ನಡೆಸಿದ್ದಳು. ಇದೇ ವಿಚಾರವನ್ನು ಕಾರಣ ಮಾಡಿಕೊಂಡು ಬಸವರಾಜ್ ಪತ್ನಿಯ ಮೇಲೆ ಅನುಮಾನ ಬೆಳೆಸಿಕೊಂಡಿದ್ದಾನೆ.
ಘಟನೆಯ ದಿನ ಬೆಳಗ್ಗೆ ಸುಮಾರು 7:30ರ ಸುಮಾರಿಗೆ ಶಿವಕ್ಕ ಮಲಗಿದ್ದಾಗಲೇ ಬಸವರಾಜ್ ಅವಳನ್ನು ಎಳೆದೊಯ್ದು ಮನೆ ಹೊರಗೆ ತಂದಿದ್ದಾನೆ. ಮೊದಲು ಹಲ್ಲೆ ನಡೆಸಿ, ನಂತರ ಚಾ*ವಿನಿಂದ ಇರಿದು, ಕೊನೆಯಲ್ಲಿ ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಕೊ*ಗೈದಿದ್ದಾನೆ. ಈ ದೃಶ್ಯವನ್ನು ಕಂಡ ಕೆಲವರು ಭಯದಿಂದ ದೂರ ನಿಂತು ನೋಡುತ್ತಿದ್ದರು. ಕೆಲವೇ ಕ್ಷಣಗಳಲ್ಲಿ ಘಟನೆ ರಕ್ತಪಾತದ ದುರಂತವಾಗಿ ಮಾರ್ಪಟ್ಟಿತು.
ಪ್ರತ್ಯಕ್ಷದರ್ಶಿಗಳ ಹೇಳಿಕೆಯ ಪ್ರಕಾರ, ದಂಪತಿಗಳ ನಡುವೆ ಆಗಾಗ ಜಗಳಗಳು ನಡೆಯುತ್ತಿದ್ದು, ಹಲವು ಬಾರಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದ ಘಟನೆಗಳೂ ಇವೆ. ಜಗಳದ ಕಾರಣದಿಂದ ಬಸವರಾಜ್ ಕೆಲವು ಕಾಲ ಊರನ್ನು ಬಿಟ್ಟು ಹೋಗಿದ್ದನು. ಇತ್ತೀಚೆಗೆ ಗ್ರಾಮಕ್ಕೆ ಮರಳಿದ ನಂತರಮತ್ತೆ ಕಲಹಗಳು ಆರಂಭವಾಗಿದ್ದವು. ಕಳೆದ ಎರಡು-ಮೂರು ವರ್ಷಗಳಿಂದ ಇಬ್ಬರೂ ಬೇರೆ ಬೇರೆಯಾಗಿ ವಾಸಿಸುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಈ ದಂಪತಿಗೆ ಇಬ್ಬರು ಗಂಡು ಮಕ್ಕಳು ಹಾಗೂ ಒಬ್ಬಳು ಹೆಣ್ಣು ಮಗಳು ಇದ್ದಾಳೆ. ಸದ್ಯ ಹೆಣ್ಣು ಮಗಳು ತನ್ನ ತಾಯಿಯ ಸಂಬಂಧಿಕರ ಬಳಿ ಇರುವುದಾಗಿ ತಿಳಿದುಬಂದಿದೆ. ಈ ಘಟನೆಯಿಂದ ಮಕ್ಕಳ ಭವಿಷ್ಯ ಅನಿಶ್ಚಿತವಾಗಿದ್ದು, ಗ್ರಾಮಸ್ಥರು ಕಳವಳ ವ್ಯಕ್ತಪಡಿಸಿದ್ದಾರೆ.
ಘಟನೆಯ ಮಾಹಿತಿ ತಿಳಿದು ದೊಡವಾಡ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಆರೋಪಿಯನ್ನು ಬಂಧಿಸಿ ವಿಚಾರಣೆ ಮುಂದುವರಿಸಲಾಗಿದೆ.
ಕುಟುಂಬ ಕಲಹ, ಅನುಮಾನ ಮತ್ತು ಕೋಪದ ಅತಿರೇಕ ಹೇಗೆ ಭೀಕರ ಅಂತ್ಯಕ್ಕೆ ದಾರಿ ಮಾಡಿಕೊಡುತ್ತದೆ ಎಂಬುದಕ್ಕೆ ಈ ಘಟನೆ ಉದಾಹರಣೆಯಾಗಿದ್ದು, ಗ್ರಾಮದಲ್ಲಿ ಶೋಕ ಮತ್ತು ಆತಂಕದ ವಾತಾವರಣ ನಿರ್ಮಾಣವಾಗಿದೆ. ಪೊಲೀಸರು ಪ್ರಕರಣದ ಸಂಪೂರ್ಣ ತನಿಖೆ ನಡೆಸುತ್ತಿದ್ದು, ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.





