
ನವದೆಹಲಿ:- ಮದುವೆಯ ಮೊದಲ ರಾತ್ರಿ ಗಂಡನಿಗೆ ಅಚ್ಚರಿ ನೀಡಿದ ವಧುವಿನ ಬೇಡಿಕೆ ಇದೀಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ದೆಹಲಿ ಸಮೀಪ ನಡೆದ ಈ ಪ್ರಕರಣದಲ್ಲಿ, ನವವಿವಾಹಿತ ವಧು ತನ್ನ ಪತಿಯಿಂದ ₹90 ಲಕ್ಷ ಹಣ ನೀಡಿದರೆ ಮಾತ್ರ ದೈಹಿಕ ಸಂಬಂಧಕ್ಕೆ ಅವಕಾಶ ಎಂದು ಷರತ್ತು ವಿಧಿಸಿದ್ದಾಳೆ ಎಂಬುದು ಬಹಿರಂಗವಾಗಿದೆ.
ಮಾಹಿತಿಯ ಪ್ರಕಾರ, ಜಗದೀಶಪುರ ಮೂಲದ ಯುವಕನೊಬ್ಬ ಹತ್ರಾಸ್‌ನ ಯುವತಿಯನ್ನು ಕುಟುಂಬದ ಒಪ್ಪಿಗೆಯೊಂದಿಗೆ ವಿವಾಹವಾಗಿದ್ದ. ಮದುವೆ ಕಾರ್ಯಕ್ರಮಗಳು ಸಮರ್ಪಕವಾಗಿ ಮುಗಿದ ಬಳಿಕ, ಮೊದಲ ರಾತ್ರಿ ಸಿದ್ಧತೆಗಳನ್ನು ಕುಟುಂಬಸ್ಥರು ಮಾಡಿಕೊಂಡಿದ್ದರು. ಆದರೆ, ಮಲಗುವ ಕೋಣೆಯಲ್ಲಿ ನಡೆದ ಘಟನೆ ಎಲ್ಲರನ್ನೂ ಬೆಚ್ಚಿಬೀಳುವಂತೆ ಮಾಡಿತು.
ವಧು ತನ್ನ ಗಂಡನಿಗೆ “ನನ್ನನ್ನು ಮುಟ್ಟಬೇಕಾದರೆ ₹90 ಲಕ್ಷ ನೀಡಬೇಕು” ಎಂದು ಸ್ಪಷ್ಟವಾಗಿ ಹೇಳಿದ್ದಾಳೆ. ಈ ಅಸಾಧಾರಣ ಬೇಡಿಕೆಯನ್ನು ಕೇಳಿ ಗಂಡ ಶಾಕ್‌ಗೆ ಒಳಗಾಗಿದ್ದಾನೆ. ಆತ ಹಣ ನೀಡಲು ಸಾಧ್ಯವಿಲ್ಲ ಎಂದು ಹೇಳಿದಾಗ, ಇಬ್ಬರ ನಡುವೆ ತೀವ್ರ ವಾಗ್ವಾದ ನಡೆದಿದೆ.
ಕೊಠಡಿಯೊಳಗಿನಿಂದ ಕೇಳಿಬಂದ ಜಗಳದ ಶಬ್ದದಿಂದ ಕುಟುಂಬದವರು ಅಲ್ಲಿಗೆ ಧಾವಿಸಿದ್ದಾರೆ. ವರನ ಕುಟುಂಬಸ್ಥರು ವಧುವನ್ನು ಸಮಾಧಾನಪಡಿಸಲು ಪ್ರಯತ್ನಿಸಿದರೂ, ಆಕೆ ತನ್ನ ನಿಲುವಿನಲ್ಲಿ ಹಠ ಹಿಡಿದಿದ್ದಾಳೆ. ಬಳಿಕ ವಧು ತನ್ನ ಸಂಬಂಧಿಕರನ್ನು ಕರೆಸಿಕೊಂಡಿದ್ದು, ಅವರು ಸ್ಥಳಕ್ಕೆ ಬಂದು ವರನ ಕುಟುಂಬದವರ ಮೇಲೆ ಹಲ್ಲೆ ನಡೆಸಿದರೆಂದು ಆರೋಪಿಸಲಾಗಿದೆ.
ಇದಾದ ನಂತರ ಪರಿಸ್ಥಿತಿ ಮತ್ತಷ್ಟು ಗಂಭೀರಗೊಂಡಿದ್ದು, ವರನ ಕುಟುಂಬ ಪೊಲೀಸರಿಗೆ ದೂರು ನೀಡಿದೆ. ದೂರಿನಲ್ಲಿ, ವಧುವಿನ ಸಂಬಂಧಿಕರು ತಮ್ಮನ್ನು ಕೋಣೆಯಲ್ಲಿ ಬಂದಿಸಿ, ಗ್ಯಾಸ್ ಸಿಲಿಂಡರ್ ಪೈಪ್ ಬಳಸಿ ಕೊಲ್ಲಲು ಯತ್ನಿಸಿದರು ಎಂಬ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಆರಂಭದಲ್ಲಿ ಪೊಲೀಸರು ಪ್ರಕರಣ ದಾಖಲಿಸಲು ಹಿಂಜರಿದರೆಂದು ತಿಳಿದುಬಂದಿದೆ. ನಂತರ ವರನ ಕುಟುಂಬ ನ್ಯಾಯಾಲಯದ ಮೊರೆ ಹೋಗಿದ್ದು, ನ್ಯಾಯಾಲಯದ ಆದೇಶದ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ತನಿಖೆ ವೇಳೆ ಮತ್ತೊಂದು ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ. ವಧು ವಿಚಾರಣೆಯಲ್ಲಿ, ತಾನು ಈ ಮದುವೆಗೆ ಒಪ್ಪಿಕೊಂಡಿದ್ದು ಕೇವಲ ಹಣಕ್ಕಾಗಿ ಮಾತ್ರ ಎಂದು ಒಪ್ಪಿಕೊಂಡಿದ್ದಾಳೆ. ಈ ಹೇಳಿಕೆಯ ನಂತರ ಪೊಲೀಸರು ವಧು ಮತ್ತು ಆಕೆಯ ಕುಟುಂಬ ಸದಸ್ಯರನ್ನು ವಶಕ್ಕೆ ಪಡೆದು ತನಿಖೆಯನ್ನು ಮುಂದುವರಿಸಿದ್ದಾರೆ.





