HOMENews

ಐಟಿಐ ನೌಕರರ ಸಂಘದಲ್ಲಿ ಸೋಮಶೇಖರ್ ರಾಷ್ಟ್ರೀಯ ಹಿರಿಯ ಉಪಾಧ್ಯಕ್ಷ ಸ್ಥಾನ ರಾಜ್ಯಕ್ಕೆ ಹೆಮ್ಮೆ

ವರದಿ: ರವಿಚಂದ್ರ ಬೂದಿತಿಟ್ಟು

ಪಿರಿಯಾಪಟ್ಟಣ : ಅಖಿಲ ಭಾರತ ಸರ್ಕಾರಿ ಐಟಿಐಗಳ ನೌಕರರ ಸಂಘ (ರಿ.) (ಎನ್‌ಎಫ್‌ಜಿಐಟಿಐಇಎ) ವತಿಯಿಂದ ಪಂಜಾಬ್-ಚಂಡಿಗಢದಲ್ಲಿ ನಡೆದ ಅಖಿಲ ಭಾರತ ಸಮ್ಮೇಳನದಲ್ಲಿ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಐಟಿಐ ಕಾಲೇಜಿನ ಪ್ರಾಂಶುಪಾಲರಾದ ಸೋಮಶೇಖರ್ ಅವರನ್ನು ರಾಷ್ಟ್ರೀಯ ಹಿರಿಯ ಉಪಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ.

ಸೋಮಶೇಖರ್ ಅವರ ಈ ಆಯ್ಕೆ ಕರ್ನಾಟಕ ರಾಜ್ಯದ ಐಟಿಐ ನೌಕರರ ಸಂಘಕ್ಕೂ ಹಾಗೂ ರಾಜ್ಯದ ನೌಕರರಿಗೆ ಸಂತಸದ ವಿಚಾರವಾಗಿದ್ದು, ರಾಜ್ಯಕ್ಕೆ ಹೆಮ್ಮೆಯ ಸಂಗತಿಯಾಗಿದೆ. ಪಿರಿಯಾಪಟ್ಟಣ ತಾಲೂಕಿನವರಾದ ಅವರು ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ನೌಕರರ ಸಮಸ್ಯೆಗಳ ಪರಿಹಾರ ಹಾಗೂ ಹಿತಾಸಕ್ತಿಗಳಿಗಾಗಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿರುವುದರಿಂದ ಈ ಗೌರವ ಅವರಿಗೆ ಲಭಿಸಿದೆ ಎಂದು ತಿಳಿಸಲಾಗಿದೆ.

ಈ ಹಿಂದೆ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಷಡಕ್ಷರಿ ಅವರು ಸೋಮಶೇಖರ್ ಅವರನ್ನು ರಾಜ್ಯ ಸರ್ಕಾರಿ ನೌಕರರ ಸಂಘದಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ನೇಮಕ ಮಾಡಿ ಜವಾಬ್ದಾರಿ ನೀಡಿದ್ದರು. ಆ ಸ್ಥಾನದಲ್ಲಿಯೂ ಅವರು ಪರಿಣಾಮಕಾರಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಇತ್ತೀಚೆಗೆ ನಡೆದ ರಾಷ್ಟ್ರೀಯ ಮಟ್ಟದ ಸಭೆಯಲ್ಲಿ ಅವರನ್ನು ರಾಷ್ಟ್ರೀಯ ಹಿರಿಯ ಉಪಾಧ್ಯಕ್ಷರಾಗಿ ಆಯ್ಕೆ ಮಾಡಿರುವುದು ತಾಲೂಕು ಹಾಗೂ ರಾಜ್ಯದ ನೌಕರರಿಗೆ ದೊರೆತ ಗೌರವ ಸಂಕೇತವಾಗಿದ್ದು, ಇದರಿಂದ ಇಲಾಖಾ ನೌಕರರ ಸಮಸ್ಯೆಗಳ ಪರಿಹಾರ ಹಾಗೂ ಸೇವಾ ಚಟುವಟಿಕೆಗಳಲ್ಲಿ ಇನ್ನಷ್ಟು ಸಮನ್ವಯ ಸಾಧಿಸಲು ಅನುಕೂಲವಾಗಲಿದೆ ಎಂದು ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ ನೌಕರರ ಸಂಘದ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply