
ಮೈಸೂರು: ಕರ್ನಾಟಕ ಸರ್ಕಾರ, ಜಿಲ್ಲಾ ಪಂಚಾಯತ್ ಮೈಸೂರು ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಮಟ್ಟದ ಮಹಿಳಾ ಕ್ರೀಡಾಕೂಟಕ್ಕೆ ಚಾಮುಂಡಿ ವಿಹಾರ ಒಳಾಂಗಣ ಕ್ರೀಡಾಂಗಣದಲ್ಲಿ ಚಾಲನೆ ನೀಡಲಾಯಿತು.

ಕಾರ್ಯಕ್ರಮವನ್ನು ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ಡಾ. ಪುಷ್ಪ ಅಮರನಾಥ್ ಅವರು ದೀಪ ಬೆಳಗುವ ಮೂಲಕ ಕ್ರೀಡಾಕೂಟವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಈ ವರ್ಷದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯು “ನ್ಯಾಯ, ಹಕ್ಕುಗಳು ಹಾಗೂ ಕಾರ್ಯಕ್ಷಮತೆ” ಎಂಬ ಆಶಯದೊಂದಿಗೆ ನಡೆಯುತ್ತಿದೆ.ಮಹಿಳೆಯರು ಕುಟುಂಬದ ಜವಾಬ್ದಾರಿಯ ಜೊತೆಗೆ ತಮ್ಮ ಆರೋಗ್ಯದ ಕಡೆಗೂ ಹೆಚ್ಚಿನ ಗಮನ ಹರಿಸಬೇಕು. ಕ್ರೀಡೆಗಳು ದೈಹಿಕ ಮತ್ತು ಮಾನಸಿಕ ಚಟುವಟಿಕೆಗೆ ಪೂರಕವಾಗಿವೆ. ಕ್ರೀಡಾಪಟುಗಳು ಸೋಲು-ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಿ ಸದಾ ಕ್ರಿಯಾಶೀಲರಾಗಿರಬೇಕು ಎಂದು ಕರೆ ನೀಡಿದರು.

ನೂರಾರು ಮಹಿಳಾ ಕ್ರೀಡಾಪಟುಗಳು ಭಾಗವಹಿಸಿದ್ದ ಈ ಕೂಟದಲ್ಲಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಪ್ರಮುಖವಾಗಿ: ಬಾಸ್ಕೆಟ್‌ಬಾಲ್ ಶೂಟ್ ಔಟ್,ಹಗ್ಗ ಜಗ್ಗಾಟ ,ಮ್ಯೂಸಿಕಲ್ ಚೇರ್ ಸೇರಿದಂತೆ ದೇಶೀಯ ಹಾಗೂ ಆಧುನಿಕ ಕ್ರೀಡೆಗಳು ನೆರೆದಿದ್ದವರ ಗಮನ ಸೆಳೆದವು.
ಇದೇ ಸಂದರ್ಭದಲ್ಲಿ ವಿವಿಧ ಕ್ರೀಡಾ ವಿಭಾಗಗಳಲ್ಲಿ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡಿದ ಸಾನಿಕ ವಿ. ಮತ್ತು ಕುಸುಮ ಬಿ.ಎಲ್.,ಲಕ್ಷ್ಮಿ ಮತ್ತು ರಿಷಾ ಶ್ರೀ, ಪ್ರೀತಿ ಎಚ್.ಎಂ. ಮತ್ತು ಸೋನಾಕ್ಷಿ,ಸಿಂಚನಾ,ಪ್ರಿಯಾಂಕಾ ಕೆ.ಎಂ.
ಎಂಟು ಮಹಿಳಾ ಕ್ರೀಡಾಪಟುಗಳನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು:

ಕಾರ್ಯಕ್ರಮದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಭಾಸ್ಕರ್ ನಾಯಕ್,ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿಗಳಾದ ಶ್ರೀಮತಿ ಸವಿತಾ, ಮುಖ್ಯ ಲೆಕ್ಕಾಧಿಕಾರಿಗಳಾದ ಶ್ರೀಮತಿ ಸಿದ್ದಗಂಗಮ್ಮ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪ ನಿರ್ದೇಶಕಿ ಪುಷ್ಪ, ಮಾರುಕಟ್ಟೆ ಇಲಾಖೆಯ ಉಪ ನಿರ್ದೇಶಕಿ ಶ್ರೀಮತಿ ಸಂಗೀತ, ಸಹಾಯಕ ಪ್ರಾಧ್ಯಾಪಕಿ ನಿರ್ಮಲ ದೇವಿ, ಪ್ರಾಧ್ಯಾಪಕಿ ಲಕ್ಷ್ಮಿ ಪಲುಟಿ, ಜೋಶ್ನಾ ಕಾಮತ್, ಅಂತರಾಷ್ಟ್ರೀಯ ಕರಾಟೆ ಪಟು ಭಾರತಿ ಹಾಗೂ ಕ್ರೀಡಾ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.





