
ಮೈಸೂರು:- ವಿಭಾಗದ ಇತಿಹಾಸ ಮೌಲ್ಯಮಾಪನ ಕೇಂದ್ರದಲ್ಲಿ ನಿವೃತ್ತ ಪ್ರಾಚಾರ್ಯರು ಮತ್ತು ಉಪನ್ಯಾಸಕರ ಗೌರವ ಸಮರ್ಪಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಪದವಿಪೂರ್ವ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರಾದ ಎನ್.ಮಹಾಲಿಂಗಯ್ಯನವರು ಮಾತನಾಡಿದರು. ಇತ್ತೀಚೆಗೆ ಕಲಾ ವಿಭಾಗದ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸುತ್ತಿದ್ದು ಭವಿಷ್ಯದಲ್ಲಿ ಕಲಾ ವಿಷಯಗಳನ್ನು ಓದುವ ವಿದ್ಯಾರ್ಥಿಗಳೇ ಕಣ್ಮರೆಯಾಗುವ ಪರಿಸ್ಥಿತಿ ಬಂದಿದೆ.ಆದ್ದರಿಂದ ಉಪನ್ಯಾಸಕರು ಕಲಾ ವಿಷಯದ ಬೋಧನೆಯನ್ನು ಆಸಕ್ತಿಕರವಾಗಿಸಿ ಕಲಾವಿಷಯದ ಮಹತ್ವವನ್ನು ಸಮಾಜಕ್ಕೆ ಸಾರುವ ಮೂಲಕ ವಿದ್ಯಾರ್ಥಿಗಳನ್ನು ಕಾಲೇಜಿನ ಕಡೆಗೆ ಸೆಳೆಯಬೇಕಾಗಿದೆ. ಸರ್ಕಾರಿ ಕಾಲೇಜುಗಳಿಗೆ ಖಾಸಗಿ ಕಾಲೇಜುಗಳ ಎದುರು ಉಳಿವಿನ ಪ್ರಶ್ನೆ ಎದುರಾಗಿದ್ದು ಸರ್ಕಾರಿ ಕಾಲೇಜುಗಳ ಮಹತ್ವವನ್ನು ಸಾರುವಂತಹ ಸಾರ್ಥಕ ಕೆಲಸ ಉಪನ್ಯಾಸಕರು ಮಾಡಬೇಕಿದೆ ಎಂದರು. ಮೌಲ್ಯಮಾಪನದಲ್ಲಿ ಸದಾ ಎಚ್ಚರಿಕೆಯಿಂದ ಪತ್ರಿಕೆಗಳನ್ನು ಮೌಲ್ಯಮಾಪನ ಮಾಡುವುದರ ಜೊತೆಗೆ ಯಾವ ವಿದ್ಯಾರ್ಥಿಗೂ ಅನ್ಯಾಯವಾಗದಂತೆ ಜಾಗೃತರಾಗಿ ಇರಬೇಕೆಂದು ತಿಳಿಸಿದರು.
ಮೈಸೂರು ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಎಂ ಪಿ ನಾಗಮ್ಮನವರು ನಿವೃತ್ತ ಪ್ರಾಂಶುಪಾಲರು ಮತ್ತು ಉಪನ್ಯಾಸಕರನ್ನು ಸನ್ಮಾನಿಸಿ ಶುಭ ಕೋರಿದರು. ಮೈಸೂರು ಚಾಮರಾಜನಗರ,ಕೊಡಗು,
ಹಾಸನ, ಮಂಡ್ಯ ಜಿಲ್ಲೆಗಳ ಮೌಲ್ಯಮಾಪಕರು ಈ ಶಿಬಿರದಲ್ಲಿ ಐದು ದಿವಸಗಳ ಕಾಲ ಮೌಲ್ಯಮಾಪನ ಕಾರ್ಯ ನೆರವೇರಿಸಿದರು. ನಿವೃತ್ತರಾಗುತ್ತಿರುವ 19 ಜನರನ್ನು ಗೌರವಪೂರ್ವಕವಾಗಿ ಬೀಳ್ಕೊಡಲಾಯಿತು. ಶಿಬಿರದ ಮುಖ್ಯ ಪರೀಕ್ಷಕರಾದ ತಮ್ಮೇಗೌಡರು, ಮೌಲ್ಯಮಾಪನ ಶಿಬಿರದ ವೀಕ್ಷಕರಾದ ಸುದೀಪ್ ಹಾಗೂ ಶಿಬಿರಾಧಿಕಾರಿಗಳಾದ ಅಶೋಕ್ ಕುಮಾರ್ ರವರು ಉಪಸ್ಥಿತರಿದ್ದರು. ಕೊಡಗಿನ ಕೂಡಿಗೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಹೆಚ್ ಜೆ ನಾಗರಾಜ್ ಸ್ವಾಗತಿಸಿದರು.ಚಾಮರಾಜನಗರ ಜಿಲ್ಲೆಯ ಕುದೇರು ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಎನ್ ಎಂ ಶಿವಪ್ರಕಾಶ್ ಪ್ರಾಸ್ತಾವಿಕವಾಗಿ ಮಾತನಾಡಿದರು.ಮೈಸೂರು ಜಿಲ್ಲಾ ಇತಿಹಾಸ ವೇದಿಕೆ ಅಧ್ಯಕ್ಷರಾದ ಹೆಚ್ ಬಿ ವಾಸು ಕಾರ್ಯಕ್ರಮ ನಿರೂಪಿಸಿದರು. ಹಾಸನ ಜಿಲ್ಲೆಯ ಉಪನ್ಯಾಸಕರಾದ ಕುಮಾರ್ ಎಲ್ಲರನ್ನೂ ವಂದಿಸಿದರು. ಕಾರ್ಯಕ್ರಮವನ್ನು ಸಂಘಟಿಸಿದ ಎಲ್ ಉಮೇಶ್, ಅಂಕೇಗೌಡ, ಮಾಣಿಕ್ಯಂ,ನಾಗೇಂದ್ರ ಮುಂತಾದವರು ಇದ್ದರು.





