HOMEFilm News

‘ಕಾಂತಾರ’ ವಿವಾದ: ಚಾಮುಂಡಿ ದೇವಾಲಯದಲ್ಲಿ ಕ್ಷಮೆ ಕೇಳಲು ರಣವೀರ್ ಸಿಂಗ್ ನಿರ್ಧಾರ

ಮೈಸೂರು/ಬೆಂಗಳೂರು: ‘ಕಾಂತಾರ’ ಚಿತ್ರದ ದೈವ ಪಾತ್ರದ ಬಗ್ಗೆ ಮಾಡಿದ್ದ ಹೇಳಿಕೆಯಿಂದ ಉಂಟಾದ ವಿವಾದದ ನಡುವೆ ಬಾಲಿವುಡ್ ನಟ ರಣವೀರ್ ಸಿಂಗ್ ಇದೀಗ ಕ್ಷಮೆ ಕೋರುವ ನಿರ್ಧಾರಕ್ಕೆ ಬಂದಿದ್ದಾರೆ. ಈ ಸಂಬಂಧ ದಾಖಲಾಗಿದ್ದ ಪ್ರಕರಣದಲ್ಲಿ ಎಫ್‌ಐಆರ್ ರದ್ದು ಕೋರಿ ಹೈಕೋರ್ಟ್ ಮೊರೆ ಹೋಗಿದ್ದ ಅವರು, ದೇವರ ಸಮ್ಮುಖದಲ್ಲೇ ಪಶ್ಚಾತ್ತಾಪ ವ್ಯಕ್ತಪಡಿಸಲು ಮುಂದಾಗಿರುವುದು ಗಮನ ಸೆಳೆದಿದೆ.

ಹೈಕೋರ್ಟ್‌ನಲ್ಲಿ ನಡೆದ ವಿಚಾರಣೆ ವೇಳೆ ರಣವೀರ್ ಪರ ವಕೀಲರು, “ರಣವೀರ್ ಸಿಂಗ್ ಈಗಾಗಲೇ ಸಾಮಾಜಿಕ ಜಾಲತಾಣ ‘X’ನಲ್ಲಿ ಕ್ಷಮೆ ಕೋರಿದ್ದಾರೆ. ಜೊತೆಗೆ ಮೈಸೂರಿನ ಚಾಮುಂಡಿ ದೇವಾಲಯಕ್ಕೆ ಭೇಟಿ ನೀಡಿ ದೇವಿಯ ಸಮ್ಮುಖದಲ್ಲಿ ಕ್ಷಮೆ ಯಾಚಿಸಲಿದ್ದಾರೆ” ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಅಲ್ಲದೆ, ನ್ಯಾಯಾಲಯಕ್ಕೂ ಕ್ಷಮಾಪಣೆ ಪ್ರಮಾಣಪತ್ರ ಸಲ್ಲಿಸುವುದಾಗಿ ಭರವಸೆ ನೀಡಿದರು.

ಈ ವೇಳೆ ದೂರುದಾರ ಪ್ರಶಾಂತ್ ಮೆತಾಲ್ ಪರ ವಾದದಲ್ಲಿ, “ಕ್ಷಮೆ ಕೇಳುವುದಷ್ಟೇ ಸಾಕಾಗುವುದಿಲ್ಲ. ನೈಜ ಪಶ್ಚಾತ್ತಾಪ ಇರಬೇಕು. ದೇವಾಲಯಕ್ಕೆ ತೆರಳಿ ದೇವರ ಮುಂದೆ ಕ್ಷಮೆ ಕೇಳಬೇಕು” ಎಂದು ವಾದಿಸಿದರು. ಈ ವಾದಗಳನ್ನು ಆಲಿಸಿದ ನ್ಯಾಯಾಲಯ, ಪ್ರಕರಣದ ಮುಂದಿನ ವಿಚಾರಣೆಯನ್ನು ಏಪ್ರಿಲ್ 10ಕ್ಕೆ ಮುಂದೂಡಿದೆ.

ವಿವಾದದ ಹಿನ್ನೆಲೆ ಏನೆಂದರೆ, ಗೋವಾದಲ್ಲಿ ನಡೆದ ಫಿಲ್ಮ್ ಫೆಸ್ಟಿವಲ್‌ನಲ್ಲಿ ರಣವೀರ್ ಸಿಂಗ್, ರಿಷಬ್ ಶೆಟ್ಟಿ ಅಭಿನಯದ ‘ಕಾಂತಾರ’ ಚಿತ್ರದ ಕುರಿತು ಮಾತನಾಡುವಾಗ ದೈವ ಪಾತ್ರದ ದೃಶ್ಯವನ್ನು ಅನುಕರಣೆ ಮಾಡಿದ್ದರು. ಈ ವೇಳೆ ಅವರು ಬಳಸಿದ ಪದಗಳು ಮತ್ತು ಶೈಲಿ ದೈವಾರಾಧಕರ ಭಾವನೆಗೆ ಧಕ್ಕೆ ತಂದಿದೆ ಎಂದು ಆರೋಪಿಸಿ ಆಕ್ರೋಶ ವ್ಯಕ್ತವಾಗಿತ್ತು.

ವಿಶೇಷವಾಗಿ, ಚಾಮುಂಡಿ ಹಾಗೂ ತುಳುನಾಡಿನ ದೈವ ಸಂಸ್ಕೃತಿಗೆ ಸಂಬಂಧಿಸಿದ ಪಾತ್ರಗಳನ್ನು ಹಾಸ್ಯಾತ್ಮಕವಾಗಿ ಚಿತ್ರಿಸಿರುವಂತೆ ಕಂಡುಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವಿರೋಧ ವ್ಯಕ್ತವಾಯಿತು. ಹಲವರು ಇದನ್ನು “ಸಂಸ್ಕೃತಿಗೆ ಅವಮಾನ” ಎಂದು ಪರಿಗಣಿಸಿ ಕಾನೂನು ಕ್ರಮಕ್ಕೆ ಮುಂದಾಗಿದ್ದರು.

ಈ ನಡುವೆ ರಣವೀರ್ ಸಿಂಗ್ ಅವರ ಕ್ಷಮೆ ಕೋರುವ ನಿರ್ಧಾರವು ವಿವಾದಕ್ಕೆ ಹೊಸ ತಿರುವು ನೀಡಿದ್ದು, ಅವರ ಭೇಟಿ ಮತ್ತು ಮುಂದಿನ ಕ್ರಮಗಳತ್ತ ಎಲ್ಲರ ಗಮನ ನೆಟ್ಟಿದೆ. ಈಗ ಅವರ ನಡೆ

ನಿಜವಾದ ಪಶ್ಚಾತ್ತಾಪದ ಸಂಕೇತವಾಗುತ್ತದೆಯೇ ಅಥವಾ ಕಾನೂನು ಪ್ರಕ್ರಿಯೆಯ ಭಾಗವಾಗಿಯೇ ಉಳಿಯುತ್ತದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

Leave a Reply