HOMEArtical

ಮಾಸದ  ನೆನಪು: ಕೆ ಎಸ್ ಅಶ್ವಥ್. : ಮಾರ್ಚ್ 25 ಅವರ ಹುಟ್ಟುಹಬ್ಬ.

“ಚಾಮಯ್ಯ ಮೇಷ್ಟ್ರು,” ಎಂದೇ ಪ್ರಸಿದ್ಧರಾದ ಕೆ ಎಸ್ ಅಶ್ವಥ್ ರವರು ಕನ್ನಡ ಚಿತ್ರರಂಗ ಕಂಡ ಅಪರೂಪದ ಪ್ರತಿಭೆ.

ನಟರಾಗಿ, ಪೋಷಕ ನಟರಾಗಿ ಹಲವು ವರ್ಷಗಳು  ಕ್ರಿಯಾಶೀಲತೆಯಿಂದ ಇದ್ದವರು ಇವರು. ಎಲ್ಲಾ ಅಭಿಮಾನಿಗಳನ್ನ ಸೂಜಿಗಲ್ಲಿಯಂತೆ ಸೆಳೆದವರು.

ಅಶ್ವಥ್ ರವರದು ದಾಖಲಿಸಬೇಕಾದ ವಿಷಯಗಳು ಅನೇಕ ಇವೆ. ತಮ್ಮ ಅವಧಿಯಲ್ಲಿ ಪ್ರಬುದ್ಧ ನಟರಾಗಿ ಮೆರೆದವರು.

1955ರಲ್ಲಿ ನಿರ್ಮಾಣವಾದ “ಸ್ರೀ ರತ್ನ” ಚಿತ್ರದಲ್ಲಿ ನಾಯಕನಾಗಿ ಬೆಳಕಿಗೆ ಬಂದ ಅಶ್ವತ್ ರವರದು ಸುಮಾರು ಐದು ದಶಕಗಳ ಅವಧಿಯಲ್ಲಿ ಚಿತ್ರರಂಗದಲ್ಲಿ  ವಿಶಿಷ್ಟ ಹೆಜ್ಜೆ ಗುರುತುಗಳನ್ನು ಮೂಡಿಸಿದ್ದಾರೆ. ಇವರು 350 ಕ್ಕಿಂತಲೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿರುವ ಜನಪ್ರಿಯ ನಟರಾಗಿದ್ದವರು.

ಇವರು ಶಿಸ್ತಿಗೆ ಹೆಸರಾಗಿದ್ದವರು. ಸಮಯ ಪಾಲನೆಯನ್ನು ಚಾಚು ತಪ್ಪದೇ ಮಾಡುತ್ತಿದ್ದವರು. ತಮ್ಮ ತಂದೆ ಕಲಿಸಿದ ಸುಸಂಸ್ಕೃತ ವ್ಯಕ್ತಿತ್ವದ ಗುಣಗಳನ್ನು ತಾವು ಮೈಗೂಡಿಸಿಕೊಂಡಿದ್ದವರು.  ಚಲನಚಿತ್ರ ನಿರ್ಮಾಣವಲಯದಲ್ಲಿ ಅಲ್ಲದೆ ಚಿತ್ರಸೆಟ್ಟೀರುವ  ಸ್ಥಳದಲ್ಲಿ ಎಲ್ಲರ ಅಭಿಮಾನಕ್ಕೆ ಪಾತ್ರರಾಗಿದ್ದ ಅಪರೂಪದ ವ್ಯಕ್ತಿದ ಗಣಿ ನಮ್ಮ ಕೆ ಎಸ್ ಅಶ್ವತ್ಥ್ ರವರು.      

ಇವರು ಹೊಳೆನರಸೀಪುರ ತಾಲ್ಲೂಕಿನ ಕರಗದಹಳ್ಳಿಯವರು. ತಂದೆ ಸುಬ್ಬರಾಯರ ಮಗನಾಗಿ ಮಾರ್ಚ್ 25, 1925ರಲ್ಲಿ ಜನಿಸಿದರು. ಮೊದಲ ಹೆಸರು ಅಶ್ವತ್ಥನಾರಾಯಣ. ಚಿತ್ರರಂಗಕ್ಕೆ ಬಂದ ನಂತರ ನಾರಾಯಣ ಹೆಸರು ಪೂರ್ತಿ ಇರಲಿಲ್ಲ. ಅಂದರೆ ಅಶ್ವಥ್ ಎನ್ನುವುದು ಮಾತ್ರ ಉಳಿಯಿತು.  ಓದಿದ್ದು ಇಂಟರ್ ಮಿಡಿಯಟ್ವರೆಗೆ ಇದು ಒಂದು ಶಾಲೆಯ ಕಾಲೇಜಿನ ಅಥವಾ ಅಂಕಪಟ್ಟಿಯಲ್ಲಿ ದಾಖಲಾದ ವಿಷಯ. ಆದರೆ ಸಮಾಜದಲ್ಲಿ ಅವರು ಕಲಿತಿದ್ದು ಮಾತ್ರ ಡಬಲ್, ತ್ರಿಬಲ್ ಪದವಿ ಪಡೆದ ಅನುಭವವಾಗಿತ್ತು!.

ಅನುಭವದ ಮುಂದೆ ಅವರು ಬಹಳ ದೊಡ್ಡ ಸ್ಥಾನದಲ್ಲಿ ಇದ್ದರು. ಅದರಿಂದಾಗಿ ಯಾವುದೇ ತೀರ್ಮಾನಗಳನ್ನು ತಾವು ಮಾಡುವಾಗ ಬಹಳವಾಗೀ ಯೋಚನೆ ಮಾಡುತ್ತಿದ್ದರು. ಇದೆಲ್ಲದ್ದರಿಂದ ಅಶ್ವತ್ ರವರು ಯಾವುದೇ ರೀತಿಯ ಘಾಸಿಪ್ ಗಳಿಗೆ ಸ್ಥಾನ ಮಾಡಿಕೊಡುತ್ತಿರಲಿಲ್ಲ.

ಇವರು ನಟನೆಗೆ ಬರುವುದಕ್ಕಿಂತ ಮುಂಚೆ ಸ್ವಾತಂತ್ರ್ಯ ಹೋರಾಟದಲ್ಲಿಯೂ ಸಹ ಭಾಗಿಯಾಗಿದ್ದರು.  ಆಹಾರ ಇಲಾಖೆಯಲ್ಲಿ ನೌಕರಿಯನ್ನೂ ಪಡೆದಿದ್ದರು. ಹೀಗೆ ವೃತ್ತಿ- ಪ್ರವೃತ್ತಿಗಳಲ್ಲೂ ಕೂಡ ಇವರು ಕಟ್ಟುನಿಟ್ಟಾಗಿ ಕೆಲಸ ನಿರ್ವಹಿಸಿದವರು.   

ಇವರಿಗೆ  ಬಾಲ್ಯದಿಂದಲೂ ಕೂಡ ನಾಟಕದ ಗೀಳು. ಹೆಚ್ಚಾಗಿ ನಾಟಕಗಳನ್ನು ನೋಡುತ್ತಿದ್ದರು, ನಟಿಸುತ್ತಿದ್ದರು. ಜೊತೆಗೆ ನಾಟಕದ ಬಗ್ಗೆ ಅಭಿರುಚಿಯನ್ನು ಕೂಡ ಹೊಂದಿದ್ದರು. ಆಕಾಶವಾಣಿಯಂತಹ  ಪ್ರಬಲ ಮಾಧ್ಯಮದಲ್ಲಿ ನಾಟಕ ವಿಭಾಗದ ಮುಖ್ಯಸ್ಥರಾಗಿದ್ದ ಎನ್.ಎಸ್. ವಾಮನರಾವ್ ರವರಿಂದ ಅಭಿನಯದಲ್ಲಿ ತರಬೇತಿ ಪಡೆಯುವ ಅವಕಾಶ ಲಭ್ಯವಾಯಿತು.

ಹೀಗೆ ವೃತ್ತಿ- ಪ್ರವೃತ್ತಿಗಳಲ್ಲಿ ಚಿಕ್ಕ ಚಿಕ್ಕದಾಗಿ ಸಾಧನೆಗಳನ್ನ ಮಾಡುತ್ತಾ ಮುಂದೆ ಬಂದವರು ಅಶ್ವತ್ಥ್ ರವರು. ಆದರೆ ಅವರಿಗೆ ಚಲನಚಿತ್ರ ಸೇರಬೇಕೆಂಬ ಕಲ್ಪನೆಯೇ ಇರಲಿಲ್ಲ. ಅದರ ಬಗ್ಗೆ ಯೋಚನೆಯನ್ನು ಕೂಡ ಮಾಡಿರಲಿಲ್ಲ. ಅವಕಾಶ ಅದಾಗಿಯೇ ಬಂದಿತು.

ನಾಟಕದಲ್ಲಿನ ಇವರ ಅಭಿನಯ ನೋಡಿ, ಮೆಚ್ಚಿದ ಹಿರಿಯ ನಿರ್ದೇಶಕ ಕೆ. ಸುಬ್ರಹ್ಮಣ್ಯಂ ಅವರಿಂದ ಚಿತ್ರರಂಗಕ್ಕೆ ಆಹ್ವಾನ ದೊರೆಯಿತು.  ತಾನಾಗಿಯೇ ಬಂದ ಈ ಅವಕಾಶವನ್ನ ಅವರು ಅಂದು ಕಳೆದುಕೊಳ್ಳಲಿಲ್ಲ.

ಉದ್ಯಾನ ನಗರಿ ಮೈಸೂರಿನ ಪ್ರಿಮಿಯರ್ ಸ್ಟುಡಿಯೋದಲ್ಲಿ ತಯಾರಾದ, ಭಾಗಶಃ ವರ್ಣ ಚಿತ್ರಣವಾದ ‘ಸ್ತ್ರೀ ರತ್ನ’(1955) ಚಿತ್ರದಲ್ಲಿ ನಾಯಕರಾದರು.  ‘ಸ್ತ್ರೀ ರತ್ನ’ ಚಿತ್ರದ ನಂತರ, ಚಿತ್ರರಂಗದಲ್ಲೇ ಮುಂದುವರೆಯುವ ನಿರ್ಧಾರ ಮಾಡಿದರು. ಆದರೆ ಆ ಅವಧಿಯಲ್ಲಿ ಕನ್ನಡ ಚಿತ್ರ ನಿರ್ಮಾಣದ ಚಟುವಟಿಕೆಗಳು ಮಂದಗತಿಯಲ್ಲಿ ಸಾಗಿತ್ತು. ಆದರೂ ಚಿತ್ರರಂಗದ ಅಭಿನಯವನ್ನೇ ವೃತ್ತಿಯಾಗಿ ಸ್ವೀಕರಿಸಲು ತೀರ್ಮಾನ ಮಾಡಿದ ಅಶ್ವಥ್ ರವರು ಆಗ ಕನ್ನಡ ಚಿತ್ರ ನಿರ್ಮಾಣದ ಕೇಂದ್ರವಾಗಿದ್ದ ಮದರಾಸಿನಲ್ಲೇ ನೆಲೆಸಲು ಕೂಡಾ ನಿರ್ಧರಿಸಿದರು.

ನೋಡಿ ಸಿಕ್ಕ ಅವಕಾಶವನ್ನ ಉಪಯೋಗ ಮಾಡಿಕೊಂಡವರು. ಸ್ವಲ್ಪ ತಮ್ಮ ಮೂಲ ಸ್ಥಳದಿಂದ ಹೊರಗಡೆ ಕೆಲಸ ಮಾಡುವ ಸಮಯ ಬಂದಾಗಲೂ ಕೂಡ ಅವರು ದೃತಿಗೆಡಲಿಲ್ಲ.  ನಾಯಕ ಪಾತ್ರಗಳಿಂದ ಅವರಿಗೆ ಸ್ವಲ್ಪ ಅವಕಾಶ ಕಡಿಮೆ ಆದರೂ ಕೂಡ ಅದನ್ನು ಎಂದಿಗೂ ಮನಸ್ಸಿಗೆ ಹಾಕಿಕೊಳ್ಳಲಿಲ್ಲ. ಪೋಷಕ ಪಾತ್ರಗಳಲ್ಲಿ ಅಭಿನಯಿಸುವ ಸಂಕಲ್ಪ ಮಾಡಿದರು. ಅದರಂತೆ ಮುಂದುವರಿದರು.  ಈ ನಿರ್ಧಾರವೂ ನಂತರದಲ್ಲಿ ಸರಿ ಎನಿಸಿತು. ಇದರಿಂದ ಅವರ ಬಹುಮುಖ ಪ್ರತಿಭೆಗೆ ಒಂದು ಮುಕ್ತ ಅವಕಾಶ ದೊರೆಯಿತು.   

ಆರಂಭದ ದಿನಗಳಲ್ಲಿ ತಯಾರಾಗುತ್ತಿದ್ದದು ಹೆಚ್ಚಾಗಿ ಪೌರಾಣಿಕ ಹಾಗೂ ಭಕ್ತಿ ಪ್ರಧಾನ ಚಿತ್ರಗಳು ಎನ್ನುವುದು ಎಲ್ಲರಿಗೂ ಗೊತ್ತು. ಪೌರಾಣಿಕ, ಭಕ್ತಿ ಪ್ರಧಾನ ಚಿತ್ರಗಳಲ್ಲಿ ನಾರದನ ಪಾತ್ರಗಳು ಇವರಿಗೆ ಅರಸಿ ಬಂದವು. ‘ಮಹಿಷಾಸುರ ಮರ್ದಿನಿ’, ‘ಸ್ವರ್ಣಗೌರಿ’, ‘ಭಕ್ತ ಪ್ರಹ್ಲಾದ’, ‘ದಶಾವತಾರ’, ‘ನಾಗಾರ್ಜುನ’-ಇವೇ ಮೊದಲಾದ ಚಿತ್ರಗಳಲ್ಲಿ ಅಶ್ವತ್ಥ್ ಅವರ ನಾರದನ ಪಾತ್ರ ಮಾಡಿದ್ದು ಜನಮೆಚ್ಚುಗೆ ಪಡೆಯಿತು.

ಅಶ್ವತ್ಥ್ ರವರು ವೈವಿಧ್ಯಮಯ ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಆ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಜನರಿಗೆ ಆಪ್ತವಾದುದು ತಂದೆಯ ಪಾತ್ರ. ಮನೆಯ ಹಿರಿಯಣ್ಣನ ಪಾತ್ರ, ‘ಗಾಳಿಗೋಪುರ’ ಚಿತ್ರದಿಂದ ಶಾಶ್ವತವಾಗಿ ಪ್ರಧಾನ ಪೋಷಕ ಪಾತ್ರಗಳಿಗೆ ಆಯ್ಕೆ ಯಾದರು. ‘ನಾಗರಹಾವು’ ಚಿತ್ರದ ಚಾಮಯ್ಯ ಮೇಸ್ಟ್ರು, ಮಕ್ಕಳಿಲ್ಲದ ಮೇಸ್ಟ್ರು. ತಾನು ಅತಿಯಾಗಿ ಪ್ರೀತಿಸುವ ತಂಟೆಕೋರ ವಿದ್ಯಾರ್ಥಿ. ಇವರಿಬ್ಬರ ನಡುವಣ ಮಾನವೀಯ ಸಂಬಂಧಗಳು, ಸಮಸ್ಯೆಗಳು, ಒಂದೇ ಎರಡೇ? ದುರಂತದಲ್ಲಿ ಕೊನೆಗೊಳ್ಳುವ ಈ ಚಿತ್ರದಲ್ಲಿ ಮನಮಿಡಿಯುವಂತಹ ಅಭಿನಯ ಇವರದು. 

  ‘ಕಸ್ತೂರಿ ನಿವಾಸ’ದ ನಿಷ್ಠಾವಂತ ಸೇವಕ ರಾಮಯ್ಯ, ‘ಮಗ ಮೊಮ್ಮಗ’, ‘ತಂದೆ-ಮಕ್ಕಳು’ ಚಿತ್ರದಲ್ಲಿ ತಂದೆಯಾಗಿ ನೀಡಿರುವ ಮನ ಮುಟ್ಟುವ ಅಭಿನಯ. ‘ಸರ್ವಮಂಗಳ’ ಚಿತ್ರದಲ್ಲಿ ಕುರೂಪಿ ಸುಬ್ಬರಾಯನ ಪಾತ್ರ, ಅಶ್ವತ್ಥ್ ಅವರ ಅಪ್ರತಿಮ ಪ್ರತಿಭೆಯ, ಭಾವಪೂರ್ಣ ಅಭಿನಯಕ್ಕೆ ಇವು ಕೆಲವು ನಿದರ್ಶನಗಳು. ಇದು ಎಲ್ಲರಿಗೂ ಗೊತ್ತಿರುವ ವಿಷಯ.

ಕುಟುಂಬದ ಯಜಮಾನ, ಒಲವಿನ ಸೋದರ, ತಂದೆ ಮೊದಲಾದ ಸಜ್ಜನಿಕೆಯ ಪಾತ್ರಗಳ ಜೊತೆಗೆ ಹಾಸ್ಯ ಪಾತ್ರಗಳಲ್ಲೂ, ಖಳನಾಯಕನ ಪಾತ್ರಗಳಲ್ಲೂ ಅವರು ಸಹಜವಾಗಿ ಅಭಿನಯಿಸಿದ್ದಾರೆ. ಪುಟ್ಟ ಪಾತ್ರಗಳಲ್ಲಿ ಚೊಕ್ಕ ಅಭಿನಯ. ಇದು ಅವರ ಹಿರಿಮೆ. ಪ್ರಧಾನ ಪೋಷಕ ಚಿತ್ರಗಳಲ್ಲಿ ಅಶ್ವತ್ಥ-ಪಂಢರಿಬಾಯಿ ಜೋಡಿ ಅತ್ಯಂತ ಜನಪ್ರಿಯ.

‘ನಮ್ಮ ಮಕ್ಕಳು’, ‘ನಾಗರಹಾವು’, ‘ಮುತ್ತಿನಹಾರ’ ಚಿತ್ರಗಳ ಅಭಿನಯಕ್ಕಾಗಿ ‘ಶ್ರೇಷ್ಠ ಪೋಷಕ ನಟ’ರಾಗಿ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ. ತಮ್ಮ ಅಭಿನಯ, ಗಾಯನದಿಂದ ಕನ್ನಡ ಚಲನಚಿತ್ರೋದ್ಯಮಕ್ಕೆ ಘನತೆ, ಸ್ಥಿರತೆ ತಂದ ಡಾ.ರಾಜಕುಮಾರ್ ಹೆಸರಿನಲ್ಲಿ ಸರ್ಕಾರ ಚಲನಚಿತ್ರರಂಗಕ್ಕೆ ಅಮೋಘ ಸೇವೆ ಸಲ್ಲಿಸಿದವರಿಗೆ 1993-94ನೇ ಸಾಲಿನಿಂದ ಪ್ರಶಸ್ತಿ ನೀಡುತ್ತಿದೆ. ಈ ಪ್ರಶಸ್ತಿಗೆ ಭಾಜನರಾದ ಪ್ರಪ್ರಥಮ ನಟ-ಕೆ.ಎಸ್. ಅಶ್ವತ್ಥ್.

1995ರಲ್ಲಿ ಅಶ್ವತ್ಥ್ ಚಿತ್ರರಂಗಕ್ಕೆ ವಿದಾಯ ಹೇಳಿದರು. ಅದು ಅವರ ಅಭಿಮಾನಿ ಪ್ರೇಕ್ಷಕರಿಗೆ ಅಘಾತವಾಗಿತ್ತು. ಆದರೆ ‘ಶಬ್ದವೇಧಿ’ ಚಿತ್ರದ ಮೂಲಕ ಅವರ ಪುನರಾಗಮನವನ್ನು ಜನರು ಸಂಭ್ರಮದಿಂದ ಸ್ವಾಗತಿಸಿದರು.

ತಂದೆಯಾಗಿ, ಸಹೋದರನಾಗಿ, ಪತಿಯಾಗಿ, ತಾತನಾಗಿ, ನಾರದನಾಗಿ, ಹಳ್ಳಿಗನಾಗಿ, ಪಟ್ಟಣಿಗನಾಗಿ, ಗುರುವಾಗಿ, ಅಧಿಕಾರಿಯಾಗಿ, ಸೇವಕನಾಗಿ, ಋಷಿಯಾಗಿ ಹೀಗೆ ಅವರ ನಟನೆಗೆ ವಿಭಿನ್ನ ಮುಖಗಳು!. 

ಅದರಿಂದಾಗಿ ವಿಭಿನ್ನ ನೆಲೆಗಳಲ್ಲಿ  ಅವರ ಪಾತ್ರಗಳಿಗೆ ನೀಡಿದ ಬೆಲೆ ಅಸದೃಶವಾದದ್ದು. ಅವರನ್ನು ನಾವು ನೋಡಿದ,

 ಇಷ್ಟಪಟ್ಟ ಒಂದೆರಡು ಪಾತ್ರಗಳ ನೆಲೆಯಲ್ಲಿ ಅವಲೋಕಿಸುವುದಕ್ಕಿಂತ ತಾವು ನಟಿಸಿದ ಪಾತ್ರಗಳಲ್ಲೆಲ್ಲ ಅವರು ತುಂಬಿದ, ಸಹಜತೆಯ ಆಳದಲ್ಲಿ ಅವರಿಗೆ ಇದ್ದ ಸಾಮರ್ಥ್ಯ, ಜೀವಂತಿಕೆ, ನಿಷ್ಠೆ ಜೊತೆಗೆ ಇವೆಲ್ಲದಕ್ಕೂ ಮಿಗಿಲಾಗಿ ತಮ್ಮನ್ನು ಸಾಮಾನ್ಯನಂತೆ ಕಂಡುಕೊಳ್ಳುವ ವಿಧೇಯತೆ, ಬದುಕಿನ ಜೊತೆ ಹೊಂದಿದ್ದ ಸಾಮೀಪ್ಯತೆ ಇತ್ಯಾದಿಗಳಿಂದ ಅವರನ್ನು ನೋಡುವುದು ಅತ್ಯಂತ ಮಹತ್ವದ್ದೆನಿಸುತ್ತದೆ.    

         ಇವೆಲ್ಲ ಗುಣಗಳನ್ನು ಅಶ್ವತ್ ರವರು ರಕ್ತಗತ ಮಾಡಿಕೊಂಡಿದ್ದರು.

1993-94 ನೇ ಸಾಲಿನಲ್ಲಿ ಕರ್ನಾಟಕ ಸರ್ಕಾರದಿಂದ ಕೊಡಮಾಡುವ ಡಾ . ರಾಜ್‌ಕುಮಾರ್ ಜೀವಮಾನ ಸಾಧನೆ ಪ್ರಶಸ್ತಿಯನ್ನ ಪಡೆದಿದ್ದಾರೆ. ಇದೊಂದು ಅರ್ಥಪೂರ್ಣ ಪ್ರಶಸ್ತಿಯಾಗಿದೆ. ಏಕೆಂದರೆ ಅಶ್ವತ್ ಅವರು ಮತ್ತು ರಾಜಕುಮಾರ್ ರವರು ಅನೇಕ ಚಿತ್ರಗಳಲ್ಲಿ ಒಟ್ಟಾಗಿ ನಟಿಸಿದ್ದಾರೆ. ಹಲವು ಚಿತ್ರಗಳಲ್ಲಿ ತಂದೆಯ ಪಾತ್ರವನ್ನು ಕೂಡ ಮಾಡಿದ್ದಾರೆ. ಇದರಿಂದಾಗಿ ರಾಜಕುಮಾರ್ ಮತ್ತು ಅಶ್ವತ್ಥರ ಜೋಡಿಯ ಚಿತ್ರಗಳು ನಮ್ಮ ಜನಮಾನಸದಲ್ಲಿ ಅಚ್ಚುಮೆಚ್ಚಿನ ಸ್ಥಾನವನ್ನು ಪಡೆದಿವೆ.

ಐದು ದಶಕಗಳ ಕಾಲ ಕನ್ನಡ ಚಿತ್ರರಂಗಕ್ಕೆ ನೀಡಿದ ಮಹತ್ತರ ಕೊಡುಗೆಗಾಗಿ 2008 ರಲ್ಲಿ ತುಮಕೂರು ವಿಶ್ವವಿದ್ಯಾಲಯದಿಂದ ಅಶ್ವಥ್ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಲಾಯಿತು.  ತುಮಕೂರು ವಿಶ್ವವಿದ್ಯಾಲಯದಿಂದ ಕೂಡಾ ಡಾಕ್ಟರೇಟ್ ಪಡೆದ ಮೊದಲ ನಟ ಎಂಬ ಹೆಗ್ಗಳಿಕೆಗೂ ಇವರು ಪಾತ್ರರಾಗಿದ್ದಾರೆ.

ಇನ್ನೊಂದು ಮುಖ್ಯ ವಿಷಯವೆಂದರೆ ಡಾಕ್ಟರೇಟ್ ಪ್ರಶಸ್ತಿ ಸ್ವೀಕರಿಸುವಾಗ, ಅಶ್ವಥ್ ಅವರು ತಮ್ಮಲ್ಲಿರುವ ನಟನನ್ನು ಹೊರತಂದ ಎಲ್ಲಾ ನಿರ್ದೇಶಕರಿಗೆ ಈ ಪ್ರಶಸ್ತಿಯನ್ನು ಅರ್ಪಿಸುವುದಾಗಿ ಹೇಳಿದರು. ನೋಡಿ ಇದು ಒಬ್ಬ ನಟನಿಗೆ ಇರಬೇಕಾದ ಅಪರೂಪದ ಗುಣ, ಮಾತುಗಳಿವು.

ಏಕೆಂದರೆ ಅಶ್ವಥ್ ರವರು ಒಂದು ರೀತಿಯಲ್ಲಿ ಭಾವನಾಜೀವಿ. ಅವರು ಯಾವುದೇ ಅಹಂಕಾರವಿಲ್ಲದೆ ತಮ್ಮ ಸಹನಟರೊಂದಿಗೆ ಅನೂನ್ಯವಾಗಿ ಕಷ್ಟಗಳನ್ನ ಅರಿತು, ಅವರು ತಮ್ಮ ನಟನೆಯನ್ನು ಮಾಡುತ್ತಿದ್ದರು. ಇದು ಅಶ್ವಥ್ ರವರ ಜೊತೆಯಲ್ಲಿ ಕೆಲಸ ಮಾಡಿದ ಎಲ್ಲರಿಗೂ ಕೂಡ ಗೊತ್ತಿರುವ ವಿಷಯವಾಗಿದೆ.

ಇವರು 3 ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಇವರಿಗೆ ಯಾವುದೇ ಪ್ರಶಸ್ತಿಗಳು ಬರಲಿ, ಬರದೆ ಇರಲಿ ಆದರೆ ತಮ್ಮ ನಟನೆಯಲ್ಲಿ ಏಕಾಗ್ರತೆಯನ್ನು ಕಂಡುಕೊಂಡಿದ್ದವರು. ಅವರು ನಿರ್ವಹಿಸಿರುವ ಯಾವುದೇ ಪಾತ್ರವನ್ನು ಕೂಡ ಅಚ್ಚುಕಟ್ಟಾಗಿ ಮಾಡಿರುವುದರಿಂದ ಇವತ್ತಿಗೂ ಕೂಡ ಅವರು ವೀಕ್ಷಕರ ಅಥವಾ ತಮ್ಮ ಅಭಿಮಾನಿಗಳ ಪಾಲಿನಲ್ಲಿ ಶಾಶ್ವತವಾದ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಇವರ ಬಗ್ಗೆ ಮತ್ತೊಂದಿಷ್ಟು ವಿಷಯ……ಅವರು ಮೈಸೂರಿನ ಡಾಲ್ವಾಯ್ ಶಾಲೆಯಿಂದ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಪೂರ್ಣಗೊಳಿಸಿದರು. ನಂತರ ಅವರು ವಿಶ್ವವಿದ್ಯಾನಿಲಯದಲ್ಲಿ ಏಳನೇ ಶ್ರೇಯಾಂಕದೊಂದಿಗೆ ಮೈಸೂರಿನ ಮಹಾರಾಜ ಕಾಲೇಜಿನಿಂದ ವಾಣಿಜ್ಯ ಪದವಿಯನ್ನು ಪಡೆದರು. 1942 ರಲ್ಲಿ ಅವರು ಭಾರತೀಯ ಸ್ವಾತಂತ್ರ್ಯ ಹೋರಾಟಕ್ಕೆ ಸೇರಿದಾಗ ಅವರ ಔಪಚಾರಿಕ ಶಿಕ್ಷಣವು ಕೊನೆಗೊಂಡಿತು . ಎರಡು ವರ್ಷಗಳ ನಂತರ, ಅವರಿಗೆ ಆಹಾರ ನಿರೀಕ್ಷಕರಾಗಿ ಕೆಲಸ ಸಿಕ್ಕಿತು. ನಂತರ ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸ್ಟೆನೋಗ್ರಾಫರ್ ಆದರು ಮತ್ತು ಹತ್ತು ವರ್ಷಗಳ ಕಾಲ ಸರ್ಕಾರಿ ಸೇವೆಯಲ್ಲಿ ಕಳೆದರು.

ರೇಡಿಯೋ ನಾಟಕಗಳಲ್ಲಿ ಭಾಗವಹಿಸಲು ಪ್ರಾರಂಭಿಸಿದಾಗ ಅಶ್ವಥ್ ಅವರ ನಟನೆ ಪ್ರಾರಂಭವಾಯಿತು. ಹೀಗೆ ಅವರ ರಂಗಭೂಮಿ ವೃತ್ತಿಜೀವನವು ಉತ್ತುಂಗಕ್ಕೇರಿತು ಮತ್ತು ಎ.ಎನ್. ಮೂರ್ತಿ ರಾವ್ , ಪರ್ವತವಾಣಿ ಮತ್ತು ಇತರರ ನಾಟಕಗಳಲ್ಲಿ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದರು.

1960 ರಲ್ಲಿ, ಅವರು ಕಿತ್ತೂರು ಚೆನ್ನಮ್ಮ ಚಿತ್ರದಲ್ಲಿ ಸ್ವಾಮಿ ಪಾತ್ರವನ್ನು ಬಿ. ಸರೋಜಾ ದೇವಿ ಅವರೊಂದಿಗೆ ನಿರ್ವಹಿಸಿದರು . ಅದೇ ವರ್ಷ, ಅವರು ಯಶಸ್ವಿ ಚಿತ್ರ ಭಕ್ತ ಪ್ರಹ್ಲಾದದಲ್ಲಿ ನಾರದನ ಪಾತ್ರವನ್ನು ನಿರ್ವಹಿಸಿದರು. ಗಾಳಿ ಗೋಪುರ ಚಿತ್ರದಲ್ಲಿನ ಅವರ ಪಾತ್ರವು ಅವರಿಗೆ ಒಂದು ಹೊಸ ಚೈತನ್ಯವನ್ನು ನೀಡಿತು ಮತ್ತು ಅಪಾರ ಕಲಾವಿದನಾಗಿ ಅವರ ವೃತ್ತಿಜೀವನವನ್ನು ರೂಪಿಸಲು ಸಹಾಯ ಮಾಡಿತು.

ನಂತರ ಅಶ್ವತ್ಥ್ ಇಂಗ್ಲಿಷ್ ಚಲನಚಿತ್ರ “ಸೆವೆನ್ ವಂಡರ್ಸ್ ಆಫ್ ದಿ ವರ್ಲ್ಡ್”- ನಲ್ಲಿ ಪಾತ್ರವನ್ನು ಮಾಡಿದರು. ಮತ್ತು ಬಣ್ಣದ ಚಿತ್ರದಲ್ಲಿ ಕಾಣಿಸಿಕೊಂಡ ಮೊದಲ ಕನ್ನಡ ನಟರಾದರು.

ಅವರ ಹಲವಾರು ಚಿತ್ರಗಳು ದೊಡ್ಡ ಹಿಟ್ ಆದವು. ನಾಗರಹಾವು ಚಿತ್ರದಲ್ಲಿನ ಚಾಮಯ್ಯ ಮೇಷ್ಟ್ರು ಪಾತ್ರವು ಇನ್ನೂ ನೆನಪಿನಲ್ಲಿದೆ.  ಗಂಗೆ ಗೌರಿ ಚಿತ್ರದಲ್ಲಿ ನಾರದ (ವಿಷ್ಣುವಿನ ಪೌರಾಣಿಕ ಮಗ) ಪಾತ್ರದಲ್ಲಿ ಮತ್ತೊಂದು ಅಭಿನಯವು ಶೈಲಿಯಲ್ಲಿ ಗಮನಾರ್ಹವಾಗಿದೆ.  ಅವರು ತಮ್ಮ ವಯಸ್ಸಿನ ಅನೇಕ ಸಹ-ಕಲಾವಿದರಿಗೆ ತಂದೆಯ ಪಾತ್ರಗಳನ್ನು ಒಪ್ಪಿಕೊಂಡರು. ಒಟ್ಟಾರೆಯಾಗಿ, ಅವರು 350 ಕ್ಕೂ ಹೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಂಡರು, ಅದರಲ್ಲಿ 98 ಚಿತ್ರಗಳು ರಾಜ್‌ಕುಮಾರ್ ನಾಯಕ ನಟನಾಗಿ ಚಲನಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ಬಂದವು ಎಂಬುದೇ ವಿಶೇಷ. ಇವರ ಮಗ ಶಂಕರ್ ಅಶ್ವಥ್ ರವರು ಕೂಡ ನಟನೆಯಲ್ಲಿ ಪ್ರಸಿದ್ಧಿ ಪಡೆದವರು. ಮೈಸೂರಿನಲ್ಲಿ ನೆಲೆಸಿದ್ದಾರೆ.

           ಇಂತಹ ಧೀಮಂತ ನಟ ಬದುಕಿದ್ದರೆ ನೂರನೇ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದರು. ಅವರ ಜನ್ಮ ಶತಾಬ್ದಿ ವರ್ಷ ಈ 2025!. ಆಗಿತ್ತು.  ಈಗ ನೂರರ ಗಡಿ ದಾಟಿದ್ದಾರೆ!

        ನಮ್ಮ  ಜಾಮಯ್ಯ ಮಾಸ್ಟರ್ ಎಲ್ಲೋ ದೂರದಲ್ಲಿ ನಿಂತು ಕನ್ನಡ ಚಿತ್ರರಂಗ ದ ಎಲ್ಲರನ್ನೂ ಆಶೀರ್ವದಿಸುತ್ತಿದ್ದಾರೆ. ಇಂತಹ ಧೀಮಂತ ನಟರು ಕನ್ನಡದ ನೆಲದಲ್ಲಿ ಮತ್ತೊಮ್ಮೆ ಹುಟ್ಟಿ ಬರಲಿ. “ಅವರು ಇಂದು ನಮ್ಮೂಟ್ಟಿಗಿಲ್ಲ ಎನ್ನುವುದಕ್ಕಿಂತ ಅವರು ನಟಿಸಿರುವ ಚಿತ್ರಗಳೊಂದಿಗೆ ನಾವಿದ್ದೇವೆ”- ಎನ್ನುವುದು ಮುಖ್ಯವಾಗುತ್ತದೆ. ಈಗಲೂ ಕೂಡ ಕಿರುತೆರೆಗಳಲ್ಲಿ, ಮೊಬೈಲ್ ನಲ್ಲಿ ಅವರು ನಟಿಸಿರುವ ಚಿತ್ರಗಳು ಬಂದರೆ ಅವರ ನೆನಪು ಕಾಡುತ್ತದೆ. ಅವರ ಅದ್ಭುತ, ಭಾವಪೂರ್ಣ ನಟನೆ ನಮ್ಮ ಮನಸ್ಸಿನಲ್ಲಿ ಮೂಡುತ್ತದೆ. ಅವರ ನಟನಿಗೆ ಸಾವಿಲ್ಲ. ಕನ್ನಡ ಚಿತ್ರರಂಗ ಇರುವವರೆಗೂ ಅವರು ಶಾಶ್ವತವಾಗಿ ನೆಲೆಸಿರುತ್ತಾರೆ.

Leave a Reply