HOMENews

ಹನಗೋಡು ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಂದ ರಾಷ್ಟ್ರೀಯ ಜಂತು ಹುಳು ನಿವಾರಣ ಕಾರ್ಯಕ್ರಮ ಆಚರಣೆ.

ವರದಿ:- ಹನಗೋಡು ದೀಪು.
ಹನಗೋಡು. ಫೆ. 10:-: ರಾಷ್ಟ್ರೀಯ ಜಂತುಹುಳು ನಿವಾರಣ ದಿನದ ಅಂಗವಾಗಿ ಹನಗೋಡು ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಜಂತುಹುಳು ನಿವಾರಕ ಆಲ್‌ಬೆಂಡಜೋಲ್ ಮಾತ್ರೆಗಳ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪ್ರಾಥಮಿಕ ಆರೋಗ್ಯ ಕೇಂದ್ರ ಹನಗೋಡು ಆರೋಗ್ಯಾಧಿಕಾರಿಗಳಾದ ಡಾ. ಹೇಮಂತ್ ಕುಮಾರ್ ಭಾಗವಹಿಸಿ ವಿದ್ಯಾರ್ಥಿಗಳಿಗೆ ವೈಯಕ್ತಿಕ ಸ್ವಚ್ಛತೆ ಕುರಿತು ವಿವರವಾದ ಮಾಹಿತಿ ನೀಡಿದರು. ಸರ್ಕಾರವು ವರ್ಷದಲ್ಲಿ ಎರಡು ಬಾರಿ ಜಂತುಹುಳು ನಿವಾರಣಾ ದಿನವನ್ನು ಆಚರಿಸಿ, ಒಂದರಿಂದ ಹತ್ತೊಂಬತ್ತನೇ ವಯಸ್ಸಿನ ಮಕ್ಕಳಿಗೆ ಉಚಿತವಾಗಿ ಆಲ್‌ಬೆಂಡಜೋಲ್ ಮಾತ್ರೆಗಳನ್ನು ವಿತರಿಸುತ್ತಿದೆ. ಇದರ ಮೂಲಕ ಮಕ್ಕಳ ಆರೋಗ್ಯ ಸುಧಾರಣೆ ಆಗುವುದಲ್ಲದೆ ಉತ್ತಮ ಜೀರ್ಣಕ್ರಿಯೆಗೆ ಸಹಾಯಕವಾಗುತ್ತದೆ ಎಂದು ತಿಳಿಸಿದರು.
ಈ ದಿನ ಗೈರು ಹಾಜರಾದ ವಿದ್ಯಾರ್ಥಿಗಳಿಗೆ ನಾಳೆಯನ್ನು ‘ಮಾಪ್ ಅಪ್ ಡೇ’ ಎಂದು ಪರಿಗಣಿಸಿ, ಅವರು ಶಾಲೆಗೆ ಹಾಜರಾದ ದಿನ ಮಾತ್ರೆಗಳನ್ನು ವಿತರಿಸಲಾಗುವುದು ಎಂದು ತಿಳಿಸಲಾಯಿತು. ವಿದ್ಯಾರ್ಥಿಗಳು ಮಾತ್ರೆಯನ್ನು ನುಂಗದೆ ಚೀಪುವ ಮೂಲಕ ಸೇವಿಸಿ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಹಾಗೂ ಜಂತುಹುಳಿನಿಂದ ರಕ್ಷಣೆ ಪಡೆಯಬೇಕು ಎಂದು ಸಲಹೆ ನೀಡಿದರು.
ಉಪ ಪ್ರಾಂಶುಪಾಲರಾದ ಸಂತೋಷ್ ಕುಮಾರ್ ಹಾಗೂ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಪ್ರಭಾಕರ್ ಮಾತನಾಡಿ, ಇತ್ತೀಚಿನ ಆರೋಗ್ಯ ಮಾಹಿತಿಗಳನ್ನು ವಿದ್ಯಾರ್ಥಿಗಳಿಗೆ ನೀಡಿ ಅವರ ಗಮನ ಸೆಳೆದರು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಛಾಯಾಮಣಿ, ಪ್ರಸನ್ನ ಕುಮಾರ್, ವೀರಣ್ಣ ಕರಡಿ, ವರ್ಷ ಹಾಗೂ ಆರೋಗ್ಯ ಇಲಾಖೆಯ ಮೊಹಮ್ಮದ್ ಅಜರ್ ಮತ್ತು ಆಶಾ ಕಾರ್ಯಕರ್ತೆಯಾದ ಪುಷ್ಪಲತಾ ಉಪಸ್ಥಿತರಿದ್ದರು.

Leave a Response