ಮೈಸೂರು ಪಾಲಿಕೆ ಹೊಸ ತೆರಿಗೆ ವಿರುದ್ಧ ಆಕ್ರೋಶ: ಹಿಂಪಡೆಯಲು ಬಿಜೆಪಿ ಒತ್ತಾಯ”: ಬಿಜೆಪಿ ವಕ್ತಾರರಾದ ಶ್ರೀ ಎಂ.ಎ. ಮೋಹನ್

ಮೈಸೂರು:- ಮೈಸೂರು ನಗರದಲ್ಲಿ ಹೊಸ ಆರ್ಥಿಕ ವರ್ಷದ ಆರಂಭದೊಂದಿಗೆ ಮಹಾನಗರ ಪಾಲಿಕೆಯಲ್ಲಿ ತೆರಿಗೆ ಏರಿಕೆ ವಿಚಾರ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. ಮೈಸೂರು ಜಿಲ್ಲಾ ಬಿಜೆಪಿ ವಕ್ತಾರರಾದ ಶ್ರೀ ಎಂ.ಎ. ಮೋಹನ್ ಅವರು ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರವನ್ನು ತೀವ್ರವಾಗಿ ಟೀಕಿಸಿ, “ಸಿದ್ದರಾಮಯ್ಯನವರ ಸರ್ಕಾರ ತೆರಿಗೆ ವಿಧಿಸುವುದರಲ್ಲಿ ದೇಶದಲ್ಲೆ ನಂ 1 ಸರ್ಕಾರ ದಾಖಲೆ ನಿರ್ಮಾಣ ಮಾಡುತ್ತಿದೆ” ಎಂದು ಅರೋಪಿಸಿದ್ದಾರೆ.
ನಗರದಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿದ್ಯುತ್, ನೀರು ಸೇರಿದಂತೆ ವಿವಿಧ ಸೇವೆಗಳ ಮೇಲಿನ ದರಗಳನ್ನು ಹೆಚ್ಚಿಸಿರುವುದರಿಂದ ಸಾಮಾನ್ಯ ಜನಸಾಮಾನ್ಯರ ಮೇಲೆ ಹೆಚ್ಚುವರಿ ಭಾರ ಬಿದ್ದಿದೆ ಎಂದು ಹೇಳಿದರು. ಇಷ್ಟೊಂದು ತೆರಿಗೆ ಹೆಚ್ಚಳ ಮಾಡಿದ್ದರೂ ರಾಜ್ಯ ಬಜೆಟ್ ಕೊರತೆಯನ್ನು ಸಮತೋಲನಗೊಳಿಸಲು ಸಾಧ್ಯವಾಗಿಲ್ಲ ಎಂದು ಅವರು ಸಿದ್ದರಾಮಯ್ಯನವರ ವಿರುದ್ದ ವಾಗ್ದಾಳಿ ನಡೆಸಿದರು.
ಇದರ ಜೊತೆಗೆ, ಮೈಸೂರು ನಗರ ಪಾಲಿಕೆ ತನ್ನ ವ್ಯಾಪ್ತಿಯಲ್ಲಿನ ಆಸ್ತಿಗಳ ಮಾರ್ಗಸೂಚಿ ಮೌಲ್ಯದ ಮೇಲೆ ಶೇಕಡಾ 5ರಷ್ಟು ಹೆಚ್ಚುವರಿ ತೆರಿಗೆ ವಿಧಿಸಿರುವುದನ್ನು ಖಂಡಿಸಿದ ಬಿಜೆಪಿ ವಕ್ತಾರರಾದ ಶ್ರೀ ಎಂ.ಎ. ಮೋಹನ್ ಅವರು, ಇದು ನಾಗರಿಕರಿಗೆ ಮತ್ತಷ್ಟು ಆರ್ಥಿಕ ಒತ್ತಡ ಉಂಟುಮಾಡುತ್ತದೆ ಎಂದು ಅಭಿಪ್ರಾಯಪಟ್ಟರು.
ಮೈಸೂರು ನಗರದ ಒಳಭಾಗದಲ್ಲಿ ವಾಹನ ಸಂಚಾರಕ್ಕೆ ಬಳಸುವ ವಾಹನಗಳ ಮೇಲೂ ಹೊಸ ಉಪಕರ ತೆರಿಗೆ ಜಾರಿಗೊಳಿಸಿರುವುದು ವಿವಾದಕ್ಕೆ ಕಾರಣವಾಗಿದೆ. ದ್ವಿಚಕ್ರ ವಾಹನಗಳಿಗೆ ₹100, ತ್ರಿಚಕ್ರ ವಾಹನಗಳಿಗೆ ₹200 ಹಾಗೂ ನಾಲ್ಕು ಚಕ್ರ ವಾಹನಗಳಿಗೆ ₹500ರಂತೆ ಶುಲ್ಕ ವಿಧಿಸಿರುವುದನ್ನು ಅವರು ಪ್ರಶ್ನಿಸಿ, “ರಸ್ತೆಗಳೇ ಸರಿಯಾಗಿ ನಿರ್ವಹಣೆ ಆಗದಿರುವಾಗ ಈ ರೀತಿಯ ತೆರಿಗೆ ವಿಧಿಸುವುದು ಹಾಸ್ಯಾಸ್ಪದ” ಎಂದು ಟೀಕಿಸಿದರು.
ಮೈಸೂರು ನಗರದಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯನ್ನೂ ಅವರು ಎತ್ತಿಹಿಡಿದರು. ಒಳಚರಂಡಿ ವ್ಯವಸ್ಥೆ ದುರವಸ್ಥೆಯಲ್ಲಿದ್ದು, ದುರ್ವಾಸನೆ ಸಮಸ್ಯೆ ತೀವ್ರವಾಗಿದೆ. ನಾಗರಿಕರು ದೂರು ನೀಡಿದರೂ ಕೂಡ ಸಮಸ್ಯೆ ಪರಿಹಾರಕ್ಕೆ ಅಧಿಕಾರಿಗಳು ಸ್ಪಂದಿಸುವುದಿಲ್ಲ ಎಂಬ ಆರೋಪ ಕೇಳಿಬಂದಿದೆ.
ನೀರು ಸರಬರಾಜಿನ ವಿಷಯದಲ್ಲಿಯೂ ಅಸಮಾಧಾನ ವ್ಯಕ್ತಪಡಿಸಿದ ಅವರು, ಹಿಂದಿನ ಕಾಲದಲ್ಲಿ ಕಡಿಮೆ ದರದಲ್ಲಿ ನಿರಂತರ ನೀರು ಪೂರೈಕೆ ಇತ್ತಾದರೂ, ಈಗ ಮೀಟರ್ ಆಧಾರಿತ ದರ ವಿಧಿಸಿದರೂ ಸಮರ್ಪಕ ಪೂರೈಕೆ ಆಗುತ್ತಿಲ್ಲ ಎಂದು ಹೇಳಿದರು.
ಇದೇ ವೇಳೆ, ನಗರದಲ್ಲಿ ಗ್ಯಾಸ್ ಮತ್ತು ವಿದ್ಯುತ್ ಸಂಪರ್ಕಕ್ಕಾಗಿ ಭೂಗರ್ಭದಲ್ಲಿ ಕೇಬಲ್ ಅಳವಡಿಸುವ ಕಾಮಗಾರಿ ಅವೈಜ್ಞಾನಿಕವಾಗಿ ನಡೆಯುತ್ತಿದೆ ಎಂದು ಅವರು ಆರೋಪಿಸಿದರು. ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೆ ಕಾಮಗಾರಿ ನಡೆಸಲಾಗುತ್ತಿದ್ದು, ಇದರಿಂದ ಅಪಾಯಗಳು ಹೆಚ್ಚಾಗಿವೆ. ಇತ್ತೀಚೆಗೆ ರಾಮಕೃಷ್ಣನಗರ ವಾಸು ಲೇಔಟ್ ಪ್ರದೇಶದಲ್ಲಿ ನಡೆದ ಕೇಬಲ್ ಅಳವಡಿಕೆ ವೇಳೆ ಸಂಭವಿಸಿದ ಅಪಘಾತದಲ್ಲಿ ಒಬ್ಬ ಆಟೋ ಚಾಲಕ ಮೃತಪಟ್ಟಿರುವ ಘಟನೆ ಈ ನಿರ್ಲಕ್ಷ್ಯಕ್ಕೆ ಉದಾಹರಣೆಯಾಗಿದೆ ಎಂದು ಹೇಳಿದರು.
ಹಿಂದೆ ನಗರದಲ್ಲಿ ಭೂಗರ್ಭ ಕೇಬಲ್ ಅಳವಡಿಸಿದ ಬಳಿಕವೂ ವಿದ್ಯುತ್ ಕಂಬಗಳು ಮತ್ತು ಮೇಲ್ಮೈ ತಂತಿಗಳನ್ನು ತೆರವುಗೊಳಿಸಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಮತ್ತೆ ಹೊಸದಾಗಿ ಕೇಬಲ್ ಅಳವಡಿಸುವ ಅಗತ್ಯವೇನು ಎಂದು ಅವರು ಪ್ರಶ್ನಿಸಿದರು.
“ಮೊದಲು ಮೂಲಭೂತ ಸೌಕರ್ಯಗಳನ್ನು ಸಮರ್ಪಕವಾಗಿ ಒದಗಿಸಬೇಕು. ರಸ್ತೆಗಳು, ನೀರು, ಒಳಚರಂಡಿ ವ್ಯವಸ್ಥೆ ಸುಧಾರಿಸಿದ ನಂತರವೇ ಹೊಸ ತೆರಿಗೆ ವಿಧಿಸುವ ಬಗ್ಗೆ ಯೋಚಿಸಬೇಕು. ಇಲ್ಲವಾದರೆ ತಕ್ಷಣವೇ ಈ ತೆರಿಗೆಗಳನ್ನು ಹಿಂಪಡೆಯಬೇಕು” ಎಂದು ಮೈಸೂರು ಬಿಜೆಪಿ ಒತ್ತಾಯಿಸಿದೆ.
ನಗರದಲ್ಲಿ ತೆರಿಗೆ ಏರಿಕೆ ಮತ್ತು ಸೌಕರ್ಯಗಳ ಕೊರತೆ ಕುರಿತಾಗಿ ಜನರಲ್ಲಿ ಅಸಮಾಧಾನ ಹೆಚ್ಚುತ್ತಿದ್ದು, ಮುಂದಿನ ದಿನಗಳಲ್ಲಿ ಇದು ದೊಡ್ಡ ಮಟ್ಟದ ರಾಜಕೀಯ ಚರ್ಚೆಗೆ ಕಾರಣವಾಗುವ ಸಾಧ್ಯತೆ ಇದೆ.





