
ಮೈಸೂರು, ಮಾ.06: ವಿಶೇಷಚೇತನರು ತಮ್ಮ ಜೀವನವನ್ನು ಸಾಗಿಸಲು ಇತರರನ್ನು ಅವಲಂಬಿಸದೆ ಸ್ವಯಂ ಉದ್ಯೋಗದ ಮೂಲಕ ಸ್ವಾವಲಂಬಿಗಳಾಗಿ ಬದುಕಬೇಕು ಎಂದು ಪ್ರಾದೇಶಿಕ ಆಯುಕ್ತರು ಹಾಗೂ ಮೈಸೂರು ಮಹಾನಗರ ಪಾಲಿಕೆಯ ಆಡಳಿತಾಧಿಕಾರಿ ನಿತೇಶ್ ಪಾಟೀಲ್ ಅವರು ತಿಳಿಸಿದರು.

ನಗರದ ಶ್ರೀ ರಂಗಚಾರ್ಲು ಪುರಭವನ (ಟೌನ್ ಹಾಲ್) ನಲ್ಲಿ ಮೈಸೂರು ಮಹಾನಗರ ಪಾಲಿಕೆ ಮತ್ತು ಬೆಂಗಳೂರು ಮೂಲದ ಸೆಲ್ಕೋ ಫೌಂಡೇಶನ್ ಸಹಯೋಗದಲ್ಲಿ ಆಯೋಜಿಸಿದ್ದ “ವಿಕಾಸ ಪಥದಲ್ಲಿ ವಿಶೇಷಚೇತನರ ಹಾಗೂ ಮಹಿಳೆಯರ ಹೆಜ್ಜೆ” ಎಂಬ ಸೌರ ಬೆಂಬಲಿತ ಕಾರ್ಯಾಗಾರ ಹಾಗೂ ಜೀವನೋಪಾಯ ಪರಿಹಾರಗಳ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸೌರಶಕ್ತಿ ಆಧಾರಿತ ಯಂತ್ರೋಪಕರಣಗಳನ್ನು ಬಳಸಿ ವಿವಿಧ ಉತ್ಪನ್ನಗಳನ್ನು ತಯಾರಿಸುವ ಮೂಲಕ ವಿಶೇಷಚೇತನರು ತಮ್ಮದೇ ಆದ ಉದ್ಯೋಗವನ್ನು ಸೃಷ್ಟಿಸಿಕೊಳ್ಳಬಹುದು. ಇಂತಹ ತಂತ್ರಜ್ಞಾನ ಆಧಾರಿತ ಕೌಶಲ್ಯ ತರಬೇತಿಗಳನ್ನು ಪಡೆದುಕೊಂಡರೆ ಸ್ವಾವಲಂಬಿಯಾಗಿ ಜೀವನ ನಡೆಸುವ ಜೊತೆಗೆ ಆರ್ಥಿಕವಾಗಿ ಸ್ಥಿರತೆ ಸಾಧಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ವಿಶೇಷಚೇತನರ ಕಲ್ಯಾಣಕ್ಕಾಗಿ ಸರ್ಕಾರದಿಂದ ಹಲವು ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಮೈಸೂರು ಮಹಾನಗರ ಪಾಲಿಕೆ ಹಾಗೂ ವಿಕಲಚೇತನರ ಕಲ್ಯಾಣ ಇಲಾಖೆಯ ಮೂಲಕ ದೊರೆಯುವ ಈ ಸೌಲಭ್ಯಗಳನ್ನು ವಿಶೇಷಚೇತನರು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಇದಲ್ಲದೆ, ವಿಶೇಷಚೇತನರು ಆಹಾರ ಸಂಸ್ಕರಣಾ ಘಟಕಗಳನ್ನು ಆರಂಭಿಸಲು ಸರ್ಕಾರದಿಂದ ಶೇ.50ರಷ್ಟು ಸಬ್ಸಿಡಿ ನೀಡುವ ವ್ಯವಸ್ಥೆಯೂ ಇದೆ. ಈ ಸೌಲಭ್ಯವನ್ನು ಬಳಸಿಕೊಂಡು ಉದ್ಯಮ ಆರಂಭಿಸಿದರೆ ಅವರು ಉದ್ಯಮಿಗಳಾಗಿ ಬೆಳೆದು ಇತರರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದರೊಂದಿಗೆ ತಮ್ಮ ಜೀವನಮಟ್ಟವನ್ನು ಉತ್ತಮಪಡಿಸಿಕೊಳ್ಳಬಹುದು ಎಂದು ಹೇಳಿದರು.

ಮೈಸೂರು ಮಹಾನಗರ ಪಾಲಿಕೆಯ ಅನುದಾನದಲ್ಲಿ ಶೇ.5ರಷ್ಟು ಹಣವನ್ನು ವಿಶೇಷಚೇತನರ ಅಭಿವೃದ್ಧಿಗಾಗಿ ಮೀಸಲಿಡಲಾಗಿದೆ. ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ವಿಶೇಷಚೇತನರು ನೇರವಾಗಿ ಅಧಿಕಾರಿಗಳನ್ನು ಸಂಪರ್ಕಿಸಿ ಮಾರ್ಗದರ್ಶನ ಪಡೆದುಕೊಳ್ಳಬಹುದು ಎಂದು ನಿತೇಶ್ ಪಾಟೀಲ್ ಹೇಳಿದರು.

ರಾಜ್ಯದ ಹಲವು ಜಿಲ್ಲೆಗಳಲ್ಲಿ ಈಗಾಗಲೇ ವಿಶೇಷಚೇತನರು ಸೌರ ಚಾಲಿತ ಯಂತ್ರೋಪಕರಣಗಳನ್ನು ಬಳಸಿ ವಿವಿಧ ಉದ್ಯೋಗಗಳನ್ನು ಕೈಗೊಂಡು ಯಶಸ್ವಿಯಾಗಿ ಜೀವನ ನಡೆಸುತ್ತಿರುವ ಉದಾಹರಣೆಗಳಿವೆ. ಇಂತಹ ಪ್ರಯತ್ನಗಳು ಇತರರಿಗೆ ಪ್ರೇರಣೆಯಾಗುವಂತೆ ವಿಶೇಷಚೇತನರು ಮುಂದಾಗಬೇಕು ಎಂದು ಅವರು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ್ ರೆಡ್ಡಿ ಅವರು, ಸರ್ಕಾರದಿಂದ ವಿಶೇಷಚೇತನರಿಗೆ ನೀಡಲಾಗುವ ಯೋಜನೆಗಳು ಹಾಗೂ ಯಂತ್ರೋಪಕರಣಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಬಗ್ಗೆ ಈ ಕಾರ್ಯಾಗಾರದಲ್ಲಿ ಮಾರ್ಗದರ್ಶನ ನೀಡಲಾಗುತ್ತಿದೆ. ಮಹಾನಗರ ಪಾಲಿಕೆ ಹಾಗೂ ಸೆಲ್ಕೋ ಫೌಂಡೇಶನ್ ಸಹಯೋಗದಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮದಿಂದ ವಿಶೇಷಚೇತನರು ಹೆಚ್ಚಿನ ಅನುಕೂಲಗಳನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.

ಇದಲ್ಲದೆ, ಈ ವರ್ಷದ ಬಜೆಟ್ನಲ್ಲಿ ಮಹಾನಗರ ಪಾಲಿಕೆ ವತಿಯಿಂದ ವಿಶೇಷಚೇತನರ ಅಭಿವೃದ್ಧಿಗಾಗಿ ಶೇ.5ರಷ್ಟು ಅನುದಾನವನ್ನು ಮೀಸಲಿಟ್ಟಿದ್ದು, ಇದರ ಮೂಲಕ ಯಂತ್ರೋಪಕರಣಗಳನ್ನು ಸಬ್ಸಿಡಿ ದರದಲ್ಲಿ ನೀಡಲಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಶೇಖ್ ತಸ್ವೀರ್ ಆಶಿಫ್, ಉಪ ಆಯುಕ್ತೆ ವೀಣಾ, ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ರಾಘವೇಂದ್ರ, ಸೆಲ್ಕೋ ಇಂಡಿಯಾ ಫೌಂಡೇಶನ್ನ ಏರಿಯಾ ಮ್ಯಾನೇಜರ್ ರುಚಾ ಲಿಮಯೆ, ಸುಕುಮಾರ್ ಕೆ., ಸಂಯೋಜಕ ಫಣೀಂದ್ರ ಸಿಂಗ್, ಸಿ.ಸಿ.ಎಸ್.ಟಿ ಯೋಜನೆ ನಿರ್ದೇಶಕ ಕೆ.ಆರ್. ಶಂಕರ, ಡಿ.ಡಿ.ಎ.ಎಸ್.ಸಿ ರಾಜ್ಯ ಸಂಯೋಜಕ ನರಸಿಂಹಮೂರ್ತಿ ಸೇರಿದಂತೆ ಹಲವು ಅಧಿಕಾರಿಗಳು ಮತ್ತು ವಿಶೇಷಚೇತನರು ಉಪಸ್ಥಿತರಿದ್ದರು.




