HOMENews

ಶಿಸ್ತು, ನಿಷ್ಠೆ ಮತ್ತು ಜವಾಬ್ದಾರಿಯಿಂದ ಕೆಲಸ ಮಾಡಿದರೆ ಮಾತ್ರ ಪ್ರಗತಿ ಸಾಧ್ಯ

– ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕ ಕೆ.ಎಂ. ಮುನಿಗೋಪಾಲ್ ರಾಜು

– ಕಿರಿಯ ಪವರ್ ಮ್ಯಾನ್ ಗಳಿಗೆ ಒಂದು ದಿನದ ತರಬೇತಿ ಕಾರ್ಯಕ್ರಮ

ಮೈಸೂರು, ಮಾ.27, 2026: “ಸರ್ಕಾರಿ ಉದ್ಯೋಗ ಸಿಗುವುದು ಕಷ್ಟಕರವಾದ ಈ ಸಂದರ್ಭದಲ್ಲಿ ನಿಮಗೆ ದೊರೆತಿರುವ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು. ಶಿಸ್ತು, ನಿಷ್ಠೆ ಮತ್ತು ಜವಾಬ್ದಾರಿಯಿಂದ ಕೆಲಸ ಮಾಡಿದರೆ ಮಾತ್ರ ನಿಮ್ಮ ಬದುಕಿನಲ್ಲಿ ಪ್ರಗತಿ ಸಾಧ್ಯ ಎಂದು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ (ಸೆಸ್ಕ್) ವ್ಯವಸ್ಥಾಪಕ ನಿರ್ದೇಶಕರಾದ ಕೆ.ಎಂ. ಮುನಿಗೋಪಾಲ್ ರಾಜು ಹೇಳಿದರು.

ಕಡಕೊಳದ ಕೆಇಬಿಇಎ ತರಬೇತಿ ಕೇಂದ್ರದಲ್ಲಿ ಶುಕ್ರವಾರ ಆಯೋಜಿಸಿದ್ದ 2026ನೇ ಸಾಲಿನ ಕಿರಿಯ ಪವರ್ ಮ್ಯಾನ್ ಹುದ್ದೆಗಳಿಗೆ ನೇಮಕಗೊಂಡ ಅಭ್ಯರ್ಥಿಗಳಿಗಾಗಿ ಒಂದು ದಿನದ ಪರಿಚಯಾತ್ಮಕ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

“ಕಿರಿಯ ಪವರ್ ಮ್ಯಾನ್ ಗಳಿಗೆ ಅವರುಗಳ ವಿದ್ಯಾರ್ಹತೆಗೆ ಅನುಗುಣವಾಗಿ ತರಬೇತಿ ನೀಡಲಾಗಿದ್ದು, ರೋಸ್ಟರ್ ಆಧಾರದ ಮೇಲೆ ಎಲ್ಲರಿಗೂ ಉದ್ಯೋಗ ಲಭಿಸಿದೆ. ಶಿಸ್ತುಬದ್ಧ ಮತ್ತು ಪ್ರಾಮಾಣಿಕ ರೀತಿಯಲ್ಲಿ ನೇಮಕಾತಿ ನಡೆದಿದ್ದು, ಇಲಾಖೆಯಲ್ಲಿ ಕಾರ್ಯನಿರ್ವಹಿಸಲು ಅಂಕಗಳಿಗಿಂತ ಶಿಸ್ತು ಮತ್ತು ನಿಷ್ಠೆ ಮುಖ್ಯವಾಗಿದೆ ಎಂದು ಹೇಳಿದರು.

“ಇಂದು ತಾಂತ್ರಿಕವಾಗಿ ಸುಸಜ್ಜಿತ ವ್ಯವಸ್ಥೆ ಇಲಾಖೆಯಲ್ಲಿ ಲಭ್ಯವಿದ್ದು, ಅಭ್ಯರ್ಥಿಗಳು ತಮ್ಮ ಕರ್ತವ್ಯವನ್ನು ಜವಾಬ್ದಾರಿಯಿಂದ ನಿರ್ವಹಿಸಬೇಕು. ಉತ್ತಮ ಗುಣಗಳನ್ನು ಬೆಳೆಸಿಕೊಂಡರೆ ಮಾತ್ರ ಉದ್ಯೋಗದಲ್ಲಿ ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ” ಎಂದು ಸಲಹೆ ನೀಡಿದರು.

“ಪವರ್ ಮ್ಯಾನ್‌ಗಳು ಸಂಸ್ಥೆ ಹಾಗೂ ಗ್ರಾಹಕರ ನಡುವಿನ ಪ್ರಮುಖ ಸಂಪರ್ಕ ಕೊಂಡಿಯಾಗಿದ್ದು, ಅವರ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ಶಿಸ್ತಿನಿಂದ ಕೆಲಸ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು. ತರಬೇತಿ ಹಾಗೂ ಸೇವಾ ಅವಧಿಯಲ್ಲಿ ಶಿಸ್ತು ಪಾಲಿಸದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ಎಚ್ಚರಿಸಿದರು.

“ಸರ್ಕಾರಿ ಉದ್ಯೋಗ ಸಿಗುವುದು ಕಷ್ಟಕರವಾದ ಈ ಸಂದರ್ಭದಲ್ಲಿ ದೊರೆತ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು. ಹಿರಿಯರು ನೀಡುವ ಮಾರ್ಗದರ್ಶನವನ್ನು ಪಾಲಿಸಿ, ಒಗ್ಗಟ್ಟಿನಿಂದ ಕೆಲಸ ಮಾಡಿ ಸಂಸ್ಥೆಯ ಗೌರವವನ್ನು ಹೆಚ್ಚಿಸಬೇಕು” ಎಂದರು.

ಕೆಲಸದ ವೇಳೆ ಸುರಕ್ಷತೆ ಅತ್ಯಂತ ಮುಖ್ಯವಾಗಿದ್ದು, ವಿದ್ಯುತ್ ಅವಘಡಗಳನ್ನು ತಪ್ಪಿಸಲು ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು. ಗ್ರಾಹಕರಿಗೆ ನಿರಂತರ ಮತ್ತು ಅಡಚಣೆ ರಹಿತ ವಿದ್ಯುತ್ ಪೂರೈಕೆ ಮಾಡುವುದು ನಮ್ಮ ಗುರಿ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ನಿವೃತ್ತ ಇಂಜಿನಿಯರ್‌ಗಳಾದ ಯೋಗೇಗೌಡ, ಮೋಹನ್ ಶಂಕರ್, ಚನ್ನವೀರಯ್ಯ, ಸೆಸ್ಕ್ ಕಾರ್ಯನಿರ್ವಾಹಕ ಇಂಜಿನಿಯರ್ ಎಂ.ವೈ. ಹೇಮಾ, ಎಇಇಗಳಾದ ರಾಮಚಂದ್ರ, ಅನೀಶ್ ಪಾತಕ್ ಸೇರಿದಂತೆ ಇತರರಿದ್ದರು.

Leave a Reply