ಕಾಲೇಜಿನಲ್ಲೇ ಪ್ರಪೋಸ್ ವಿವಾದ: ವಿದ್ಯಾರ್ಥಿನಿಗೆ ಚಾಕೊಲೇಟ್ ನೀಡಿ ಪ್ರೀತಿಯ ಪ್ರಸ್ತಾಪ ಅಸಿಸ್ಟೆಂಟ್ ಪ್ರೊಫೆಸರ್ ಬಂಧನ

ಬೆಂಗಳೂರು: ಶೈಕ್ಷಣಿಕ ವಾತಾವರಣದಲ್ಲೇ ಅಪ್ರಸ್ತುತ ವರ್ತನೆ ತೋರಿದ ಅಸಿಸ್ಟೆಂಟ್ ಪ್ರೊಫೆಸರ್ ವಿರುದ್ಧ ವಿದ್ಯಾರ್ಥಿನಿಯ ದೂರು ಆಧರಿಸಿ ಪೊಲೀಸರು ಕ್ರಮ ಕೈಗೊಂಡ ಘಟನೆ ನಗರ ಹೊರವಲಯದ ನೆಲಮಂಗಲದಲ್ಲಿ ನಡೆದಿದೆ. ತರಗತಿಯೊಳಗೇ ಮೈಕ್ ಮೂಲಕ ವಿದ್ಯಾರ್ಥಿನಿಗೆ ಪ್ರೀತಿಯ ಪ್ರಸ್ತಾಪ ಮಾಡಿದ ಆರೋಪದ ಮೇಲೆ ಪ್ರೊಫೆಸರ್ ಅಬ್ದುಲ್ ಅವರನ್ನು ನೆಲಮಂಗಲ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಘಟನೆ ಖಾಸಗಿ ಕಾಲೇಜೊಂದರಲ್ಲಿ ನಡೆದಿದ್ದು, ತರಗತಿ ನಡೆಯುತ್ತಿದ್ದ ಸಮಯದಲ್ಲಿ ಅಬ್ದುಲ್ ವೇದಿಕೆಗೆ ಏರಿ ಮೈಕ್ ಹಿಡಿದು ಎಲ್ಲರ ಮುಂದೆಯೇ ವಿದ್ಯಾರ್ಥಿನಿಯೊಬ್ಬಳಿಗೆ ಚಾಕೊಲೇಟ್ ನೀಡಿ ಪ್ರಪೋಸ್ ಮಾಡಿದ್ದಾನೆ ಎನ್ನಲಾಗಿದೆ. ಅಕಸ್ಮಾತ್ ನಡೆದ ಈ ಘಟನೆ ವಿದ್ಯಾರ್ಥಿನಿಯನ್ನೇ ಅಲ್ಲ, ತರಗತಿಯಲ್ಲಿ ಹಾಜರಿದ್ದ ಇತರ ವಿದ್ಯಾರ್ಥಿಗಳನ್ನೂ ಬೆಚ್ಚಿಬೀಳುವಂತೆ ಮಾಡಿತು. ಸಾರ್ವಜನಿಕವಾಗಿ ಈ ರೀತಿಯ ಪ್ರಸ್ತಾಪ ಮಾಡಿದುದರಿಂದ ಅಸಮಾಧಾನಗೊಂಡ ವಿದ್ಯಾರ್ಥಿನಿ ತಕ್ಷಣವೇ ವಿರೋಧ ವ್ಯಕ್ತಪಡಿಸಿದ್ದಾಳೆ.
ಉದನ್ನೂ ಓದಿ:- ಕ್ಲಾಸ್ ರೂಮಲ್ಲೇ ಪ್ರಪೋಸ್ ಮಾಡಿದ ಪ್ರೊಫೆಸರ್‌ಗೆ ವಿದ್ಯಾರ್ಥಿಗಳ ಆಕ್ರೋಶ: ಚಪ್ಪಲಿ ಏಟು, ಕ್ಯಾಂಪಸ್‌ನಲ್ಲಿ ಹಲ್ಲೆ
ಈ ವೇಳೆ ಪ್ರೊಫೆಸರ್ ತನ್ನ ನಡೆಗೆ ಸ್ಪಷ್ಟನೆ ನೀಡಲು ಯತ್ನಿಸಿದ್ದು, “ವಿದ್ಯಾರ್ಥಿನಿಯೇ ಮೊದಲು ನನ್ನ ಬಳಿ ಪ್ರಪೋಸ್ ಮಾಡಿದ್ದಳು, ಅದಕ್ಕೆ ಸಾಕ್ಷಿಯಾಗಿ ಸಿಸಿಟಿವಿ ದೃಶ್ಯಗಳಿವೆ” ಎಂದು ಹೇಳಿಕೊಂಡಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ ಈ ಹೇಳಿಕೆಯಿಂದ ಮತ್ತಷ್ಟು ಆಕ್ರೋಶಗೊಂಡ ವಿದ್ಯಾರ್ಥಿನಿ, ತಕ್ಷಣವೇ ಪ್ರಿನ್ಸಿಪಾಲ್ಗೆ ದೂರು ನೀಡುವುದಾಗಿ ಎಚ್ಚರಿಕೆ ನೀಡಿದ್ದಾಳೆ.
ಘಟನೆಯ ಮಾಹಿತಿ ತಿಳಿದ ಕೂಡಲೇ ಕಾಲೇಜು ಆಡಳಿತ ಮಂಡಳಿ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ದಾಖಲಿಸಿದೆ. ಈ ಆಧಾರದ ಮೇಲೆ ಪೊಲೀಸರು ಪ್ರೊಫೆಸರ್ ಅಬ್ದುಲ್ ವಿರುದ್ಧ ಕ್ರೈಂ ನಂಬರ್ 79 ದಾಖಲಿಸಿ, ಬಿಎನ್ಎಸ್ ಕಾಯ್ದೆಯ ವಿವಿಧ ಕಲಂಗಳು (74, 75, 329(3)) ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.
ಘಟನೆಯ ನಂತರ ಕಾಲೇಜು ಆವರಣದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಕೋಪಗೊಂಡ ವಿದ್ಯಾರ್ಥಿಗಳು ಪ್ರೊಫೆಸರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲವರು ಆತನ ಮೇಲೆ ಚಪ್ಪಲಿ ಬಳಸಿ ಹಲ್ಲೆ ನಡೆಸಿದ ಘಟನೆ ಕೂಡ ವರದಿಯಾಗಿದೆ. ನಂತರ ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಕಾಲೇಜು ಸಿಬ್ಬಂದಿ ಹಾಗೂ ಪೊಲೀಸರು ಮಧ್ಯಪ್ರವೇಶ ಮಾಡಿದ್ದಾರೆ.
ಪೊಲೀಸರ ತನಿಖೆಯಲ್ಲಿ, ಪ್ರೊಫೆಸರ್ ಅಬ್ದುಲ್ ವಿರುದ್ಧ ಇದೇ ರೀತಿಯ ಆರೋಪಗಳು ಹಿಂದೆಯೂ ಇದ್ದವು ಎಂಬ ಸಂಗತಿ ಬೆಳಕಿಗೆ ಬಂದಿದೆ. ಪತ್ನಿಯಿಂದ ದೂರವಾಗಿದ್ದ ಅಬ್ದುಲ್ ಕೆಲಕಾಲ ಮಾನಸಿಕ ಖಿನ್ನತೆಗೆ ಒಳಗಾಗಿದ್ದಾನೆ ಎಂಬ ಮಾಹಿತಿ ದೊರೆತಿದ್ದು, ಈ ಹಿಂದೆ ಬೌರಿಂಗ್ ಆಸ್ಪತ್ರೆ ಹಾಗೂ ತುಮಕೂರು ಭಾಗದ ಕಾಲೇಜುಗಳಲ್ಲಿಯೂ ಸಹ ಇಂತಹ ವರ್ತನೆ ತೋರಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ತುಮಕೂರಿನ ಕಾಲೇಜಿನಲ್ಲಿ ನಡೆದ ಘಟನೆ ಹಿನ್ನೆಲೆಯಲ್ಲಿ ಆಡಳಿತ ಮಂಡಳಿ ಆತನಿಗೆ ಎಚ್ಚರಿಕೆ ನೀಡಿ ಸೇವೆಯಿಂದ ದೂರವಿಟ್ಟಿದ್ದರು ಎನ್ನಲಾಗಿದೆ.
ಇದೀಗ ನೆಲಮಂಗಲದಲ್ಲೂ ಇದೇ ರೀತಿಯ ವರ್ತನೆ ಮರುಕಳಿಸಿರುವುದು ಆತಂಕಕ್ಕೆ ಕಾರಣವಾಗಿದೆ. ಬಂಧಿತ ಪ್ರೊಫೆಸರ್ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು, ಘಟನೆಯ ಎಲ್ಲಾ ಆಯಾಮಗಳ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ಸಿಸಿಟಿವಿ ದೃಶ್ಯಗಳನ್ನು ಕೂಡ ಪರಿಶೀಲಿಸಲಾಗುತ್ತಿದೆ.
ಈ ಘಟನೆ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕ ವಿದ್ಯಾರ್ಥಿ ಸಂಬಂಧದ ಮರ್ಯಾದೆ, ಸುರಕ್ಷತೆ ಮತ್ತು ನೀತಿ ಸಂಹಿತೆಯ ಅಗತ್ಯತೆಯನ್ನು ಮತ್ತೊಮ್ಮೆ ಒತ್ತಿಹೇಳುವಂತಾಗಿದೆ. ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಗೌರವ ಕಾಪಾಡುವಲ್ಲಿ ಕಾಲೇಜು ಆಡಳಿತಗಳು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.





