HOMENews

ಮಹಿಳೆಯರಿಗಾಗಿ ರಸಪ್ರಶ್ನೆ ಸ್ಪರ್ಧೆ: ಮೈಸೂರು ಬುಕ್ ಕ್ಲಬ್ಸ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಯಶಸ್ವಿ ಆಯೋಜನೆ

ಮೈಸೂರು :-  ನಗರದ ಸಾಹಿತ್ಯ ಹಾಗೂ ಓದು ಸಂಸ್ಕೃತಿಯನ್ನು ಉತ್ತೇಜಿಸುವ ಉದ್ದೇಶದಿಂದ ಮೈಸೂರು ಬುಕ್ ಕ್ಲಬ್ಸ್ ಚಾರಿಟಬಲ್ ಟ್ರಸ್ಟ್‌ನ ಅಂಗ ಸಂಸ್ಥೆಯಾದ ಕನ್ನಡ ಓದುಗರ ಒಕ್ಕೂಟ ಮತ್ತು ವಾಣಿವಿಲಾಸ್ ಲೇಡೀಸ್ ಕ್ಲಬ್ ಸಂಯುಕ್ತಾಶ್ರಯದಲ್ಲಿ ಮಹಿಳೆಯರಿಗಾಗಿ ವಿಶೇಷ ರಸಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸಲಾಯಿತು. ಕಾರ್ಯಕ್ರಮವನ್ನು ವಿವಿಎಲ್‌ಸಿ ಸಂಯುಕ್ತಾಶ್ರಯದಲ್ಲಿ ಮಾರ್ಚ್ 11ರಂದು ನಡೆಸಲಾಯಿತು.

ಸ್ಪರ್ಧೆಯಲ್ಲಿ ಮಹಿಳೆಯರು ಉತ್ಸಾಹದಿಂದ ಭಾಗವಹಿಸಿದ್ದು, ಇಬ್ಬರು ಸದಸ್ಯರ ತಂಡಗಳಾಗಿ ಒಟ್ಟು 38 ತಂಡಗಳು ಪಾಲ್ಗೊಂಡವು. ಸ್ಪರ್ಧೆಯನ್ನು ನಾಲ್ಕು ಸುತ್ತುಗಳಲ್ಲಿ ಆಯೋಜಿಸಲಾಗಿದ್ದು, ಸಾಹಿತ್ಯ, ಸಾಮಾನ್ಯ ಜ್ಞಾನ, ಸಂಸ್ಕೃತಿ ಹಾಗೂ ಸಮಕಾಲೀನ ವಿಷಯಗಳಿಗೆ ಸಂಬಂಧಿಸಿದ ಪ್ರಶ್ನೆಗಳ ಮೂಲಕ ಸ್ಪರ್ಧೆಯನ್ನು ನಡೆಸಲಾಯಿತು. ಸ್ಪರ್ಧಾರ್ಥಿಗಳ ಚುರುಕಿನ ಉತ್ತರಗಳು ಹಾಗೂ ಉತ್ಸಾಹಭರಿತ ಸ್ಪರ್ಧಾತ್ಮಕತೆಯಿಂದ ಕಾರ್ಯಕ್ರಮವು ಗಮನಸೆಳೆಯಿತು.

ಪ್ರಾಥಮಿಕ ಸುತ್ತುಗಳ ನಂತರ 7 ತಂಡಗಳು ನಾಲ್ಕನೇ ಸುತ್ತಿಗೆ ಆಯ್ಕೆಯಾಗಿದ್ದು, ಅಂತಿಮ ಹಂತದಲ್ಲಿ ನಡೆದ ಬಿರುಸಿನ ಸ್ಪರ್ಧೆಯಲ್ಲಿ ಮೂವರು ತಂಡಗಳು ಪ್ರಮುಖ ಬಹುಮಾನಗಳನ್ನು ಪಡೆದುಕೊಂಡವು. ಡಾ. ಸನತ್ ನಿಕ್ಕಂ.  ನಂದಿನಿ ಮೂರ್ತಿ ಈ ರಸ ಪ್ರಶ್ನೆಯ ಕಾರ್ಯಕ್ರಮದ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದರು

ಪ್ರಥಮ ಬಹುಮಾನವನ್ನು ಸುಮಾ ಪ್ರಕಾಶ್ ಮತ್ತು ಪ್ರಿಯದರ್ಶಿನಿ ಮಹೀಂದ್ರಾ ಅವರ ತಂಡ ಪಡೆದುಕೊಂಡಿತು. ಎರಡನೇ ಬಹುಮಾನ ಪೂಜಾ ಲಿಂಗಸ್ವಾಮಿ ಮತ್ತು ಪುಷ್ಪಾ ಗುರು ಅವರ ತಂಡಕ್ಕೆ ಲಭಿಸಿತು.

ಮೂರನೇ ಬಹುಮಾನವನ್ನು ಡಾ. ವಿಜಯಾ ಹರನ್ ಮತ್ತು ಜಿ. ರಾಜಲಕ್ಷ್ಮಿ ಶ್ರೀಧರ್ ಅವರ ತಂಡ ಪಡೆದುಕೊಂಡಿತು.

ಇದಕ್ಕೆ ಜೊತೆಗೆ ಮೂರು ತಂಡಗಳಿಗೆ ಸಮಾಧಾನಕರ ಬಹುಮಾನಗಳನ್ನು ನೀಡಲಾಯಿತು. ರಾಜೇಶ್ವರಿ ಎಂ.ಬಿ ಮತ್ತು ರೂಪಾ ಎಚ್.ಜಿ, ಲೀಲಾ ವಿಶ್ವನಾಥ್ ಹಾಗೂ ಜಯಂತಿ ರವಿಶಂಕರ್, ಹಾಗು ಗಿರಿಜಾ ಎಚ್.ಎನ್ ಮತ್ತು ಸೀತಾ ಲಕ್ಷ್ಮಿ ಅವರ ತಂಡಗಳು ಸಮಾಧಾನಕರ ಬಹುಮಾನಗಳನ್ನು ಪಡೆದವು.

ಕಾರ್ಯಕ್ರಮದ ವೇಳೆ ಮೈಸೂರು ಬುಕ್ ಕ್ಲಬ್ಸ್ ಚಾರಿಟಬಲ್ ಟ್ರಸ್ಟ್‌ನ ಪದಾಧಿಕಾರಿಗಳಾದ ಶುಭಾ ಸಂಜಯ್ ಅರಸ್, ಮೀನಾಕ್ಷಿ ಕುಮಾರ್, ನಾಗರತ್ನ ಪಾಳ್ಯಂ ಸೇರಿದಂತೆ ವಾಣಿವಿಲಾಸ್ ಲೇಡೀಸ್ ಕ್ಲಬ್‌ನ ದೀಪ ಮಾಲಿನಿ ದೇವಿ, ಪ್ರೇಮ ಡಿ ಸಿಲ್ವಾ, ಸುಬಾ ನಾಯಕ್, ವಸಂತ ಶಿವಮೂರ್ತಿ, ಸುಮ ಅರಸ್, ಶೈಲಾ ಶಂಕರ್, ವಸಂತ ಕುಮಾರಿ ಹಾಗೂ ಹಲವಾರು ಸದಸ್ಯರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಶುಭಾ ಸಂಜಯ್ ಅರಸ್, ಕುಸುಮಾ ಮೂರ್ತಿ, ಕಲ್ಪನಾ ಚಂದ್ರಶೇಖರ್ ಮತ್ತು ನಿವೇದಿತಾ ಎಚ್. ಅವರು ರಸಪ್ರಶ್ನಾಕಾರರಾಗಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು. ಕಾರ್ಯಕ್ರಮದ ನಿರೂಪಣೆಯನ್ನು ಸುಚಿತ್ರ ಹೆಗ್ಗಡೆ ನಿರ್ವಹಿಸಿದರು.

ಮಹಿಳೆಯರ ಜ್ಞಾನಾರ್ಜನೆ, ಓದು ಆಸಕ್ತಿ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ಉತ್ತೇಜಿಸುವ ಉದ್ದೇಶದಿಂದ ಆಯೋಜಿಸಲಾದ ಈ ರಸಪ್ರಶ್ನೆ ಸ್ಪರ್ಧೆ ಯಶಸ್ವಿಯಾಗಿ ನಡೆಯಿತು ಎಂದು ಸಂಘಟಕರು ತಿಳಿಸಿದ್ದಾರೆ.

Leave a Reply