
ವರದಿ :- ನಾಗೇಂದ್ರ ಕುಮಾರ್
ಟಿ.ನರಸೀಪುರ, ಮಾ.09: ಪಟ್ಟಣದ ಸಿಲ್ಕ್ ಫ್ಯಾಕ್ಟರಿ ಆವರಣದಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡುವ ಪ್ರಸ್ತಾವನೆಗೆ ವಿರೋಧವಾಗಿ ಕಾರ್ಮಿಕರು ನಡೆಸಿದ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದ್ದು, ರಾಜ್ಯ ಸರ್ಕಾರ ಆ ಸ್ಥಳದಲ್ಲಿ ಕ್ರೀಡಾಂಗಣ ನಿರ್ಮಿಸುವ ಯೋಜನೆಯನ್ನು ಕೈಬಿಟ್ಟಿರುವುದಾಗಿ ಘೋಷಣೆ ಮಾಡಿದೆ. ಈ ಹಿನ್ನೆಲೆಯಲ್ಲಿ ಕಳೆದ 18 ದಿನಗಳಿಂದ ನಡೆಯುತ್ತಿದ್ದ ಕಾರ್ಮಿಕರ ಅನಿರ್ದಿಷ್ಟಾವಧಿ ಧರಣಿ ಹಾಗೂ ಉಪವಾಸ ಸತ್ಯಾಗ್ರಹಕ್ಕೆ ತೆರೆ ಬಿದ್ದಿದೆ.
ಸಿಲ್ಕ್ ಫ್ಯಾಕ್ಟರಿ ಆವರಣದಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡುವ ಸರ್ಕಾರದ ನಿರ್ಧಾರಕ್ಕೆ ಕಾರ್ಮಿಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಕಾರ್ಮಿಕರ ಬದುಕಿಗೆ ಹಾಗೂ ಉದ್ಯೋಗ ಭದ್ರತೆಗೆ ಧಕ್ಕೆಯಾಗುವ ಸಾಧ್ಯತೆ ಇರುವುದರಿಂದ ಯೋಜನೆಯನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿ ಹಲವು ದಿನಗಳಿಂದ ನಿರಂತರ ಹೋರಾಟ ನಡೆಸಲಾಗುತ್ತಿತ್ತು.
ಈ ಹೋರಾಟಕ್ಕೆ ಕಾರ್ಮಿಕ ಸಂಘಟನೆಗಳ ಜೊತೆಗೆ ರೈತ ಸಂಘ, ಕನ್ನಡ ಪರ ಸಂಘಟನೆಗಳು ಹಾಗೂ ಹಲವು ಜನಪರ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದ್ದವು. ತೋಟದಪ್ಪ ಬಸವರಾಜು ಹಾಗೂ ಅರ್ಜುನ್ ಅವರ ನೇತೃತ್ವದಲ್ಲಿ ಉಪವಾಸ ಸತ್ಯಾಗ್ರಹ ಆರಂಭವಾಗಿದ್ದು, ರೈತ ಸಂಘದ ಕಿರಗಸೂರು ಶಂಕರ್ ಅವರ ನೇತೃತ್ವದಲ್ಲಿ ನಿರಂತರ ಪ್ರತಿಭಟನೆಗಳು ನಡೆದವು.

ಹೋರಾಟದ ತೀವ್ರತೆ ಹೆಚ್ಚುತ್ತಿದ್ದಂತೆಯೇ ರಾಜಕೀಯ ವಲಯದಲ್ಲೂ ಈ ವಿಷಯಕ್ಕೆ ಗಮನ ಸೆಳೆಯಿತು. ಮೈಸೂರು ಲೋಕಸಭಾ ಕ್ಷೇತ್ರದ ಸಂಸದ ಯದುವೀರ್ ಒಡೆಯರ್ ಅವರು ಕಾರ್ಮಿಕರನ್ನು ಭೇಟಿ ಮಾಡಿ ಅವರ ಹೋರಾಟಕ್ಕೆ ಬೆಂಬಲ ಸೂಚಿಸಿ ಧೈರ್ಯ ತುಂಬಿದ್ದರು. ಅದೇ ರೀತಿ ಮಾಜಿ ಲೋಕಸಭಾ ಸದಸ್ಯ ಪ್ರತಾಪ್ ಸಿಂಹ ಕೂಡ ಕಾರ್ಮಿಕರ ಪರವಾಗಿ ಧ್ವನಿಯೆತ್ತಿ, ಕಾರ್ಮಿಕರ ಹಿತಾಸಕ್ತಿಯನ್ನು ಕಾಪಾಡಬೇಕು ಎಂದು ಆಗ್ರಹಿಸಿದ್ದರು.
ಇದರ ನಡುವೆ ವಿಧಾನಸಭೆಯ ವಿಪಕ್ಷ ನಾಯಕ ಆರ್. ಅಶೋಕ್ ಅವರು ಟಿ.ನರಸೀಪುರಕ್ಕೆ ಭೇಟಿ ನೀಡಿ ಹೋರಾಟ ನಿರತರನ್ನು ಭೇಟಿಯಾದರು. ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಕಾರ್ಮಿಕರನ್ನು ಮನವೊಲಿಸಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕೆಂದು ತಿಳಿಸಿದರು. ಇದೇ ವೇಳೆ, ಯಾವುದೇ ಕಾರಣಕ್ಕೂ ಸಿಲ್ಕ್ ಫ್ಯಾಕ್ಟರಿ ಆವರಣದಲ್ಲಿ ಕ್ರೀಡಾಂಗಣ ನಿರ್ಮಿಸಲು ಅವಕಾಶ ನೀಡುವುದಿಲ್ಲ ಎಂದು ಭರವಸೆ ನೀಡಿದರು.
ಕಾರ್ಮಿಕರ ಪರವಾಗಿ ಸದನದಲ್ಲಿ ವಿಷಯ ಪ್ರಸ್ತಾಪಿಸುವುದಾಗಿ ಹೇಳಿದ್ದ ಅವರು, ತಮ್ಮ ಮಾತಿನಂತೆ ವಿಧಾನಸಭೆಯಲ್ಲಿ ಈ ವಿಚಾರವನ್ನು ಉತ್ಥಾಪಿಸಿದರು. ಇದರ ಬಳಿಕ ಸಂಬಂಧಿಸಿದ ರೇಷ್ಮೆ ಸಚಿವರು ಸದನದಲ್ಲಿ ಸ್ಪಷ್ಟನೆ ನೀಡಿದ್ದು, ಟಿ.ನರಸೀಪುರದ ಸಿಲ್ಕ್ ಫ್ಯಾಕ್ಟರಿ ಆವರಣದಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡುವ ಯೋಜನೆ ಕೈಬಿಡಲಾಗುತ್ತಿದೆ ಎಂದು ಘೋಷಿಸಿದರು.
ಸರ್ಕಾರದ ಈ ಘೋಷಣೆಯ ನಂತರ ಕಾರ್ಮಿಕರು ಸಂತೋಷ ವ್ಯಕ್ತಪಡಿಸಿ ಕಳೆದ 18 ದಿನಗಳಿಂದ ನಡೆಸುತ್ತಿದ್ದ ಅನಿರ್ದಿಷ್ಟಾವಧಿ ಮುಷ್ಕರವನ್ನು ವಾಪಸ್ ಪಡೆಯಲು ನಿರ್ಧರಿಸಿದರು. ಹೋರಾಟಕ್ಕೆ ಬೆಂಬಲ ನೀಡಿದ ಎಲ್ಲಾ ಸಂಘಟನೆಗಳು ಹಾಗೂ ಜನಪ್ರತಿನಿಧಿಗಳಿಗೆ ಕಾರ್ಮಿಕರು ಕೃತಜ್ಞತೆ ಸಲ್ಲಿಸಿದರು.
ಹೋರಾಟದಲ್ಲಿ ಪಾಲ್ಗೊಂಡಿದ್ದ ಹಲವು ಕಾರ್ಮಿಕರು ಮಾತನಾಡಿ, ಸಿಲ್ಕ್ ಫ್ಯಾಕ್ಟರಿ ನಮ್ಮ ಜೀವನಾಧಾರವಾಗಿದ್ದು, ಇಲ್ಲಿ ಕ್ರೀಡಾಂಗಣ ನಿರ್ಮಾಣವಾದರೆ ಕಾರ್ಮಿಕರ ಭವಿಷ್ಯ ಅಸ್ಪಷ್ಟವಾಗುತ್ತಿತ್ತು. ಈಗ ಸರ್ಕಾರ ಯೋಜನೆ ಕೈಬಿಟ್ಟಿರುವುದರಿಂದ ಕಾರ್ಮಿಕರಲ್ಲಿ ನೆಮ್ಮದಿ ಮೂಡಿದೆ ಎಂದು ಹೇಳಿದರು.
ಯತೀಂದ್ರ ಸಿದ್ದರಾಮಯ್ಯ ಭೇಟಿ ವೇಳೆ ಸಂಚಲನ
ಟಿ.ನರಸೀಪುರದ ಸಿಲ್ಕ್ ಫ್ಯಾಕ್ಟರಿ ಆವರಣದಲ್ಲಿ ನಡೆಯುತ್ತಿದ್ದ ಹೋರಾಟದ ವೇಳೆ ವಿಧಾನ ಪರಿಷತ್ ಸದಸ್ಯರಾದ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಸ್ಥಳಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಕಾರ್ಮಿಕರಲ್ಲಿ ವಿಶೇಷ ಚರ್ಚೆ ಉಂಟಾಗಿತ್ತು.
ಸ್ಥಳ ಪರಿಶೀಲನೆ ನಡೆಸಿದ ಅವರು ಕಾರ್ಮಿಕರೊಂದಿಗೆ ಮಾತುಕತೆ ನಡೆಸಿ, ಅವರ ಹಿತಾಸಕ್ತಿಗೆ ಧಕ್ಕೆ ಬಾರದಂತೆ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ಭರವಸೆ ನೀಡಿದ್ದರು. ಜಿಲ್ಲಾಧಿಕಾರಿಗಳು ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸಿದ ನಂತರವೇ ಕ್ರೀಡಾಂಗಣ ನಿರ್ಮಾಣ ಮಾಡುವುದೋ ಬೇಡವೋ ಎಂಬುದರ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದರು.
ಇದಲ್ಲದೆ, ನಮ್ಮ ಕ್ಷೇತ್ರದ ಮತದಾರರಿಗೆ ತೊಂದರೆ ಉಂಟುಮಾಡುವ ರೀತಿಯಲ್ಲಿ ಕ್ರೀಡಾಂಗಣ ನಿರ್ಮಿಸುವ ಯಾವುದೇ ಉದ್ದೇಶ ಸರ್ಕಾರಕ್ಕೆ ಇಲ್ಲ ಎಂದು ಅವರು ಹೇಳಿದ್ದನ್ನು ಕಾರ್ಮಿಕರು ಸ್ಮರಿಸಿಕೊಂಡಿದ್ದಾರೆ.





