HOMENews

ಸೆಕೆಂಡ್ ಹ್ಯಾಂಡ್ ಕಾರು ಖರೀದಿ ಎಚ್ಚರಿಕೆ – ವಂಚಕರ ಜಾಲ ಬಯಲು, ಮೂವರು ಬಂಧನ

ಮೈಸೂರು: ಸೆಕೆಂಡ್ ಹ್ಯಾಂಡ್ ಕಾರು ಖರೀದಿಯಲ್ಲಿಯೇ ವಂಚನೆ ಮಾಡುತ್ತಿದ್ದ ಜಾಲವನ್ನು ಜಿಲ್ಲಾ ಪೊಲೀಸರು ಬೇದಿಸಿದ್ದು, ಕಾರು ಡೀಲರ್ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ.

ಗ್ರಾಹಕರಂತೆ ಕಾರು ಖರೀದಿಸುತ್ತಿದ್ದ ಈ ವಂಚಕರ ತಂಡ ಅದೇ ಕಾರನ್ನು ದುಬಾರಿ ಬೆಲೆಗೆ ಮತ್ತೊಬ್ಬರಿಗೆ ಮಾರಾಟ ಮಾಡುವ ಮೂಲಕ ವಂಚನೆ ಮಾಡುತ್ತಿತ್ತು. ಬಂಧಿತರಿಂದ 1.10 ಕೋಟಿ ರೂ.ಮೌಲ್ಯದ ಎಂಟು ಐಷಾರಾಮಿ ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ಮೈಸೂರಿನ ಗೌಸಿಯಾ ನಗರದ ಹಣ್ಣಿನ ವ್ಯಾಪಾರಿ ರುಮಾನ್ ಷರೀಫ್(26), ರಾಜೀವ್ ನಗರದ ಮುಜಾಹಿದ್ ಪಾಷ(37), ಲಷ್ಕರ್ ಮೊಹಲ್ಲಾದ ಷಾಹಬುದ್ದೀನ್(25) ಬಂಧಿತರಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಗ್ರಾಹಕರಂತೆ ಸೆಕೆಂಡ್ ಹ್ಯಾಂಡ್ ಕಾರುಗಳನ್ನು ಖರೀದಿಸುತ್ತಿದ್ದ ಈ ವಂಚಕರ ತಂಡ, ಮುಂಗಡ ಹಣ ನೀಡಿ ಕಾರು ಪಡೆದುಕೊಳ್ಳುತ್ತಿತ್ತು. ಬಾಕಿ ಹಣವನ್ನು ಕಾರಿನ ದಾಖಲೆ ಪಡೆಯುವಾಗ ನೀಡುತ್ತೇವೆ ಎಂದು ಹೇಳಿ ಕಾರಿನೊಂದಿಗೆ ಪರಾರಿಯಾಗುತ್ತಿದ್ದರು. ಮತ್ತೆ ಕದ್ದ ಕಾರಿಗೆ ತಾವೇ ಮಾಲೀಕರೆಂದು ಹೇಳಿಕೊಳ್ಳುತ್ತಾ ಬೇರೆಯವರಿಗೆ ಮಾರಿ ಹೆಚ್ಚುವರಿ ಹಣ ಪಡೆದು ಯಾವುದೇ ದಾಖಲೆ ನೀಡದೇ ಪರಾರಿಯಾಗುತ್ತಿದ್ದರು. ಹೀಗೆ ಸೆಕೆಂಡ್ ಹ್ಯಾಂಡ್ ಕಾರನ್ನು ಖರೀದಿಸುತ್ತಾ ಮಾರಾಟ ಮಾಡಿ, ಕಾರು ಪ್ರಿಯರಿಗೆ ವಂಚನೆ ಮಾಡುವುದನ್ನೇ ಈ ಖದೀಮರ ತಂಡ ವೃತ್ತಿಯಾಗಿಸಿಕೊಂಡಿತ್ತು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಮಾಹಿತಿ ನೀಡಿದರು.

ಪತ್ತೆ ಹೇಗೆ: ನಗರದ ಹೋಟೆಲ್ ಉದ್ಯಮಿ ಸಿ.ಎಸ್.ಅಭಿಷೇಕ್ ಅವರು ಫೇಸ್‌ಬುಕ್‌ನಲ್ಲಿ ರುಮಾನ್ ಷರೀಫ್ ಅವರನ್ನು ಸಂಪರ್ಕಿಸಿದ್ದರು. ಆಗ ರುಮಾನ್ ತನ್ನ ಬಳಿ ಇರುವ ಐಷಾರಾಮಿ ಕಾರನ್ನು ಕಡಿಮೆ ಬೆಲೆಗೆ ಕೊಡುವುದಾಗಿ ತಿಳಿಸಿದ್ದರು. ಮುಂಗಡವಾಗಿ 5.50 ಲಕ್ಷ ಪಡೆದು ಎರಡು ಕಾರು ಖರೀದಿಸಿದ್ದರು. ಆದರೆ, ಅದರ ದಾಖಲೆ ನೀಡಿರಲಿಲ್ಲ. ಈ ಬಗ್ಗೆ ರಂಗಸಮುದ್ರದ ಬಳಿ ಇಬ್ಬರ ನಡುವೆ ಜಗಳವಾಗಿತ್ತು. ಹೀಗಾಗಿ ಅಭಿಷೇಕ್ ಬನ್ನೂರು ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೂವರನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದಾಗ ಕಾರಿನ ವ್ಯವಹಾರದಲ್ಲಿ ವಂಚಿಸಿರುವುದು ಗೊತ್ತಾಗಿದೆ.

ವಂಚನೆ ಹೇಗೆ: ಷಾಹಬುದ್ದೀನ್ ಬನ್ನಿಮಂಟಪದ ಗ್ಯಾರೇಜ್ ಒಂದರಲ್ಲಿ ಕೆಲಸ ಮಾಡುತ್ತಿದ್ದ. ಅಲ್ಲಿ ಬರುತ್ತಿದ್ದ ಕಾರಿನ ಮಾಲಿಕರೊಂದಿಗೆ ಸಂಪರ್ಕ ಸಾಧಿಸುತ್ತಿದ್ದರು. ಕಾರು ಡೀಲರ್ ಆಗಿದ್ದ ಮುಜಾಹಿದ್ ಪಾಷಾ ವ್ಯವಹಾರ ಕುದುರಿಸುತ್ತಿದ್ದರು. ರುಮಾನ್ ಷರೀಫ್ ಕಾರಿನ ಮಾಲೀಕನಂತೆ ಗ್ರಾಹಕರೊಂದಿಗೆ ಮಾತನಾಡುತ್ತಿದ್ದ. ಕಾರಿನ ಆರ್‌ಸಿ ಮಾಲೀಕರನ್ನು ಸಂಪರ್ಕಿಸಿ, ಕಾರಿಗೆ ಹೆಚ್ಚಿನ ಬೆಲೆ ಕೊಡಿಸುವುದಾಗಿ ಹೇಳಿ ಮುಂಗಡವಾಗಿ ಸ್ವಲ್ಪ ಹಣ ನೀಡಿ ಕಾರು ಖರೀದಿಸುತ್ತಿದ್ದರು. ಅದೇ ರೀತಿ ಸೆಕೆಂಡ್ ಹ್ಯಾಂಡ್ ಕಾರು ಖರೀದಿಯಲ್ಲಿ ಆಸಕ್ತಿ ಇರುವವರಿಗೆ ಕಡಿಮೆ ಬೆಲೆಗೆ ಐಷರಾಮಿ ಕಾರು ಕೊಡಿಸುವುದಾಗಿ ತಿಳಿಸಿ, ಕಾರು ಮಾರಿ ಮುಂಗಡ ಹಣ ಪಡೆಯುತ್ತಿದ್ದರು. ಆದರೆ, ದಾಖಲೆ ನೀಡದೆ ಸತಾಯಿಸಿ ವಂಚಿಸುತ್ತಿದ್ದರು.

ಚಿನ್ನದಂಗಡಿ ದರೋಡೆ ಕೇಸ್: ಹುಣಸೂರಿನ ಚಿನ್ನದ ಅಂಗಡಿ ದರೋಡೆ ಪ್ರಕರಣದ ಪ್ರಮುಖ ಆರೋಪಿಯ ತಮ್ಮ ಹಾಗೂ ಮ್ಯಾನೇಜರ್‌ನನ್ನ ಬಂಧಿಸಿ ಆತನ ಮಾಹಿತಿ ಪಡೆಯಲಾಗಿದೆ ಎಂದು ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಮಾಹಿತಿ ನೀಡಿದರು.

ಕಾರ್ಯಾಚರಣೆಯಲ್ಲಿ ಎಎಸ್ಪಿ ಎಲ್.ನಾಗೇಶ್, ಡಿಎಸ್‌ಪಿ ಜಿ.ಎಸ್.ರಘು, ಬನ್ನೂರು ಠಾಣೆಯ ಇನ್ಸ್‌ಪೆಕ್ಟರ್ ಸತೀಶ್, ಎಸ್‌ಐ ಸುದರ್ಶನ್, ಎಎಸ್‌ಐ ಸತೀಶ್, ಸಿಬ್ಬಂದಿಗಳಾದ ಅಬ್ದುಲ್ ಲತೀಫ್, ಎನ್.ಎ.ಅಶೋಕ, ಭಾಸ್ಕರ್ ಇದ್ದರು.

 

ಸಾರ್ವಜನಿಕರು ಸೆಕೆಂಡ್ ಹ್ಯಾಂಡ್ ಕಾರು ಖರೀದಿ ಮಾಡುವಾಗ ದಾಖಲೆ ಪಡೆದೇ ಖರೀದಿ ಮಾಡಬೇಕು. ಇಲ್ಲದಿದ್ದರೆ ವಂಚನೆಗೊಳಗಾಗಬೇಕಾಗುತ್ತದೆ. ವಂಚಕರ ಬಂಧನದಿಂದ ಎಂಟು ಕಾರು ಪತ್ತೆಯಾಗಿವೆ. ಅದರ ಮಾಲಿಕರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.

– ಮಲ್ಲಿಕಾರ್ಜುನ ಬಾಲದಂಡಿ, ಎಸ್ಪಿ

Leave a Reply