HOMENews

ಸಂಸದ ಯದುವೀರ್ ಹುಟ್ಟುಹಬ್ಬದ ಅಂಗವಾಗಿ ಶ್ರಮದಾನ: ಬೋಗಾದಿ ರಾಜರಾಜೇಶ್ವರಿ ನಗರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಸ್ವಚ್ಛತಾ ಅಭಿಯಾನ

ಮೈಸೂರು, ಮಾ. 23: ನಗರದಲ್ಲಿ ಸ್ವಚ್ಛತೆ ಮತ್ತು ಸಾರ್ವಜನಿಕ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಬಿಜೆಪಿ ಚಾಮುಂಡೇಶ್ವರಿ ನಗರ ಮಂಡಲ ವತಿಯಿಂದ ಬೋಗಾದಿಯ ರಾಜರಾಜೇಶ್ವರಿ ನಗರದ 80 ಅಡಿ ಮುಖ್ಯರಸ್ತೆಯಲ್ಲಿ ಶ್ರಮದಾನ ಮೂಲಕ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಸಂಸದ ಯದುವೀರ್ ಅವರ ಹುಟ್ಟುಹಬ್ಬದ ಅಂಗವಾಗಿ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ಸ್ಥಳೀಯ ಬಿಜೆಪಿ ಕಾರ್ಯಕರ್ತರು ಮತ್ತು ಮುಖಂಡರು ಉತ್ಸಾಹದಿಂದ ಭಾಗವಹಿಸಿದರು.
ಮೈಸೂರಿನ ರಾಜರಾಜೇಶ್ವರಿ ನಗರದ ಪ್ರಮುಖ ರಸ್ತೆಯ ಒಂದು ಬದಿಯ ಪಾದಚಾರಿ ಮಾರ್ಗವು ಗಿಡಗಂಟಿಗಳಿಂದ ಆವೃತಗೊಂಡಿದ್ದು, ಸಾರ್ವಜನಿಕರು ಎಸೆಯುತ್ತಿದ್ದ ಪ್ಲಾಸ್ಟಿಕ್ ತ್ಯಾಜ್ಯ ಮತ್ತು ಕಸದಿಂದ ತುಂಬಿಹೋಗಿದ್ದುದನ್ನು ಗಮನಿಸಿದ ಕಾರ್ಯಕರ್ತರು, ಶ್ರಮದಾನದ ಮೂಲಕ ಅದನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿದರು. ಕಸವನ್ನು ಸಂಗ್ರಹಿಸಿ ತೆರವುಗೊಳಿಸುವುದರೊಂದಿಗೆ, ಗಿಡಗಂಟಿಗಳನ್ನು ಕತ್ತರಿಸಿ ಪಾದಚಾರಿ ಮಾರ್ಗವನ್ನು ಸುಗಮಗೊಳಿಸಲಾಯಿತು.
ಈ ಕಾರ್ಯಕ್ರಮದ ವೇಳೆ ಮಾತನಾಡಿದ ಚಾಮುಂಡೇಶ್ವರಿ ನಗರ ಮಂಡಲದ ಅಧ್ಯಕ್ಷರಾದ ರಾಕೇಶ್ ಭಟ್ ಅವರು, “ಸ್ವಚ್ಛತೆ ಎನ್ನುವುದು ಕೇವಲ ಸರ್ಕಾರದ ಹೊಣೆಗಾರಿಕೆ ಅಲ್ಲ, ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯೂ ಆಗಿದೆ. ಪ್ರಧಾನಿ ನರೇಂದ್ರ ಮೋದಿಯವರು ಕರೆ ನೀಡಿರುವ ಸ್ವಚ್ಛ ಭಾರತ ಅಭಿಯಾನವನ್ನು ನಾವು ಪ್ರತಿದಿನದ ಜೀವನದಲ್ಲಿ ಅನುಸರಿಸಬೇಕು” ಎಂದು ಹೇಳಿದರು. ಜನರಲ್ಲಿ ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಎಂದು ತಿಳಿಸಿದರು.
ಈ ಕಾರ್ಯಕ್ರಮದ ಬಳಿಕ ಕಾರ್ಯಕರ್ತರು ಘೋಷಣೆಗಳ ಮೂಲಕ ಸ್ವಚ್ಛತೆ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು. ರಸ್ತೆ ಬದಿಯಲ್ಲಿ ಕಸ ಎಸೆಯಬಾರದು, ಪರಿಸರವನ್ನು ಸ್ವಚ್ಛವಾಗಿಡಬೇಕು ಎಂಬ ಸಂದೇಶವನ್ನು ಜನರಿಗೆ ತಲುಪಿಸಿದರು.


ಸ್ವಚ್ಛತಾ ಕಾರ್ಯದಲ್ಲಿ ಪಾಲಿಕೆ ಮಾಜಿ ಸದಸ್ಯೆ ಲಕ್ಷ್ಮಿ ಕಿರಣ್, ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಆರ್. ಸೋಮಶೇಖರ್, ಈರೇಗೌಡ, ಉಪಾಧ್ಯಕ್ಷರಾದ ಶಿವು ಪಟೇಲ್, ಹೆಚ್.ಎಸ್. ಹಿರಿಯಣ್ಣ, ಕಾರ್ಯದರ್ಶಿಗಳಾದ ಪಿ. ಸೋಮಣ್ಣ, ರಾಚಪ್ಪಾಜಿ, ಎಸ್.ಟಿ. ಮೋರ್ಚಾ ನಗರ ಉಪಾಧ್ಯಕ್ಷ ಎಸ್. ತ್ಯಾಗರಾಜ್, ಎಸ್.ಸಿ. ಮೋರ್ಚಾ ನಗರ ಉಪಾಧ್ಯಕ್ಷ ಎನ್. ಪ್ರತಾಪ್ ಸೇರಿದಂತೆ ಅನೇಕ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದರು.

ಈ ಬ್ಮಾಕ್ ನ ಮಂಡಲದ ವಿವಿಧ ಮೋರ್ಚಾಗಳ ಪದಾಧಿಕಾರಿಗಳಾದ ಮಧು ಸೋಮಶೇಖರ್, ಜೆ. ರಂಗೇಶ್, ಚಂದನ್ ಗೌಡ, ಎಸ್. ಮಹೇಶ್ ಕುಮಾರ್, ರಾಘವೇಂದ್ರ, ಸಿ. ಲೋಕೇಶ್ ನಾಯಕ್, ಜೀವ ಗೌಡ, ಗೋಪಾಲ್ ಅಯ್ಯಂಗಾರ್, ಎ.ಎಂ. ಗಿರೀಶ್ ಹಾಗೂ ಬೂತ್ ಅಧ್ಯಕ್ಷರಾದ ಚೇತನ್, ಮಹೇಶ್ ಗೌಡ, ಜೀವನ್ ಕೂಡ ಸಕ್ರಿಯವಾಗಿ ಶ್ರಮದಾನದಲ್ಲಿ ಪಾಲ್ಗೊಂಡರು.

ಇಲ್ಲಿನ ಸ್ಥಳೀಯ ನಿವಾಸಿಗಳು ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಇಂತಹ ಸ್ವಚ್ಛತಾ ಅಭಿಯಾನಗಳು ನಿಯಮಿತವಾಗಿ ನಡೆಯಬೇಕೆಂದು ಅಭಿಪ್ರಾಯಪಟ್ಟರು. ಒಟ್ಟಿನಲ್ಲಿ, ಈ ಕಾರ್ಯಕ್ರಮವು ಕೇವಲ ಶ್ರಮದಾನಕ್ಕೆ ಸೀಮಿತವಾಗದೆ, ಸಾರ್ವಜನಿಕರಲ್ಲಿ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸಿದ ಮಹತ್ವದ ಪ್ರಯತ್ನವಾಗಿತ್ತು.

Leave a Reply