
ಬೆಳಗಾವಿ, ಮಾ.10: ಸಾಮಾಜಿಕ ಜಾಲತಾಣಗಳ ಮೂಲಕ ಶ್ರೀಮಂತ ವ್ಯಕ್ತಿಗಳನ್ನು ಪರಿಚಯ ಮಾಡಿಕೊಂಡು ಹನಿಟ್ರ್ಯಾಪ್ ಮೂಲಕ ಹಣ ಮತ್ತು ಅಮೂಲ್ಯ ವಸ್ತುಗಳನ್ನು ದೋಚುತ್ತಿದ್ದ ಮಹಿಳೆಯನ್ನು ಬೆಳಗಾವಿ ಟಿಳಕವಾಡಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತೆಯನ್ನು ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ಮೂಲದ ದೀಪಾ ಅವಟಗಿ (33) ಎಂದು ಗುರುತಿಸಲಾಗಿದೆ.
ಪೊಲೀಸರ ಮಾಹಿತಿ ಪ್ರಕಾರ, ಫ್ಯಾಶನ್ ಡಿಸೈನರ್ ಎಂದು ಹೇಳಿಕೊಂಡು ಫೇಸ್‌ಬುಕ್ ಹಾಗೂ ಇನ್‌ಸ್ಟಾಗ್ರಾಮ್‌ನಲ್ಲಿ ಶ್ರೀಮಂತ ವ್ಯಕ್ತಿಗಳೊಂದಿಗೆ ಪರಿಚಯ ಬೆಳೆಸುತ್ತಿದ್ದಳು. ಸ್ನೇಹ ಬೆಳೆಸಿದ ನಂತರ ಅವರ ಮೊಬೈಲ್ ಸಂಖ್ಯೆ ಪಡೆದು ವೈಯಕ್ತಿಕವಾಗಿ ಸಂದೇಶ ಕಳುಹಿಸಿ ಭೇಟಿಗೆ ಆಹ್ವಾನಿಸುತ್ತಿದ್ದಳು. ನಂತರ ಬೆಳಗಾವಿಯ ವಿವಿಧ ಲಾಡ್ಜ್‌ಗಳಿಗೆ ಕರೆಸಿಕೊಂಡು ಆತ್ಮೀಯವಾಗಿ ವರ್ತಿಸಿ ಅವರ ವಿಶ್ವಾಸ ಗಳಿಸುತ್ತಿದ್ದಳು ಎಂದು ತಿಳಿದುಬಂದಿದೆ.
ವಿಶ್ವಾಸ ಮೂಡಿದ ನಂತರ ಅವರನ್ನು ಮೊದಲು ಸ್ನಾನಕ್ಕೆ ಹೋಗುವಂತೆ ಹೇಳಿ, ಆ ಸಮಯವನ್ನು ದುರುಪಯೋಗಪಡಿಸಿಕೊಂಡು ಅವರ ಬಳಿಯಿದ್ದ ಹಣ, ಚಿನ್ನಾಭರಣ, ಮೊಬೈಲ್ ಫೋನ್, ಬ್ಯಾಗ್ ಮತ್ತು ಕೆಲವೊಮ್ಮೆ ಕಾರುಗಳನ್ನೂ ಕದ್ದುಕೊಂಡು ಪರಾರಿಯಾಗುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆಗಳಲ್ಲಿ ಮೋಸಹೋಗಿದ್ದ ವ್ಯಕ್ತಿಯೊಬ್ಬರು ಟಿಳಕವಾಡಿ ಪೊಲೀಸ್ ಠಾಣೆಗೆ ದೂರು ನೀಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ದೂರು ಆಧರಿಸಿ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ತನಿಖೆಯಲ್ಲಿ ಇನ್ನೊಂದು ಸಂಗತಿ ಬಹಿರಂಗವಾಗಿದೆ. ಈ ಕೃತ್ಯಗಳಿಗೆ ದೀಪಾಗೆ ಸಹಾಯ ಮಾಡುತ್ತಿದ್ದ ವ್ಯಕ್ತಿ ಶಿವಾನಂದ ಮಠಪತಿ ಎಂಬಾತನಾಗಿದ್ದು, ಆತ ಶ್ರೀಮಂತ ವ್ಯಕ್ತಿಗಳ ಮಾಹಿತಿ ಒದಗಿಸುತ್ತಿದ್ದನೆಂದು ತಿಳಿದುಬಂದಿದೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ಮೂಲದ ಶಿವಾನಂದ ಸದ್ಯ ಪರಾರಿಯಾಗಿದ್ದು, ಅವನ ಬಂಧನಕ್ಕಾಗಿ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ.
ಬಂಧಿತೆಯ ಬಳಿ ಸುಮಾರು 32 ಲಕ್ಷ 86 ಸಾವಿರ ರೂಪಾಯಿ ಮೌಲ್ಯದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಒಂದು ಫಾರ್ಚೂನರ್ ಕಾರು, ಒಂದು ಮಾರುತಿ ಸುಜುಕಿ ಎಸ್-ಕ್ರಾಸ್ ಕಾರು, 11 ಮೊಬೈಲ್ ಫೋನ್‌ಗಳು, ಒಂದು ಟ್ಯಾಬ್ಲೆಟ್, ಒಂದು ಡೊಂಗಲ್, ಮೂರು ಕಾರಿನ ಕೀಗಳು ಹಾಗೂ 14 ಸಾವಿರ ರೂಪಾಯಿ ನಗದು ಸೇರಿದಂತೆ ಹಲವು ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ಈ ಪ್ರಕರಣದ ಕುರಿತು ಟಿಳಕವಾಡಿ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದು, ಇದೇ ರೀತಿಯಲ್ಲಿ ಇನ್ನೂ ಹಲವರು ಮೋಸಕ್ಕೆ ಒಳಗಾಗಿರುವ ಸಾಧ್ಯತೆಗಳನ್ನೂ ಪರಿಶೀಲಿಸಲಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅಪರಿಚಿತರೊಂದಿಗೆ ಸಂಪರ್ಕ ಬೆಳೆಸುವಾಗ ಎಚ್ಚರಿಕೆ ವಹಿಸುವಂತೆ ಪೊಲೀಸರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.





