HOMENews

ನೌಕರರ ದೈಹಿಕ-ಮಾನಸಿಕ ಸದೃಢತೆಗೆ  ಕ್ರೀಡಾಕೂಟ ಪೂರಕ: ಬಿ. ರಂಗೇಗೌಡ

ಮೈಸೂರು, ಫೆ.23:- ಕೆಲಸದ ಒತ್ತಡದಲ್ಲೂ  ಕ್ರೀಡಾಕೂಟ ಕಾರ್ಯಕ್ರಮಗಳು ನೌಕರರಿಗೆ  ದೈಹಿಕವಾಗಿ  ಹಾಗೂ ಮಾನಸಿಕವಾಗಿ  ಮನರಂಜನೆ ನೀಡಲು ಸಹಾಯಕವಾಗಲಿವೆ ಎಂದು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಬಿ. ರಂಗೇಗೌಡ ಅವರು ಹೇಳಿದರು.

ಇಂದು ಮೈಸೂರು ವಿಭಾಗದ ಜಿಲ್ಲಾ ಮಟ್ಟದ  ಸಮಾಜ ಕಲ್ಯಾಣ ಇಲಾಖೆ ನೌಕರರ  ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಸ್ಪರ್ಧೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕೆಲಸದ ಒತ್ತಡದ ನಡುವೆ ಮನುಷ್ಯ ತನ್ನ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಮರೆಯಬಾರದು. ಕ್ರೀಡೆಗಳು ನೌಕರರಲ್ಲಿ ಹೊಸ ಹುರುಪನ್ನು ತುಂಬಿ, ಕೆಲಸದಲ್ಲಿ ಹೆಚ್ಚಿನ ದಕ್ಷತೆ ತೋರಲು ಸಹಕಾರಿಯಾಗುತ್ತದೆ ಎಂದರು.

ಸಮಾಜ ಕಲ್ಯಾಣ ಇಲಾಖೆಯು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರ ಜನರ ಸೇವೆಯನ್ನು ಮಾಡುವ ಇಲಾಖೆಯಾಗಿದೆ.. ಸಮಾಜ ಕಲ್ಯಾಣ ಇಲಾಖೆಯ ನೌಕರರು ಕೆಲಸದ ಒತ್ತಡವನ್ನು ನಿವಾರಿಸಿಕೊಳ್ಳಲು ಹಾಗೂ ಮನರಂಜನೆ  ಪಡೆಯಲು ಇಂತಹ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಬೇಕಾಗಿದೆ ಎಂದರು.

 

ಸಮಾಜ ಕಲ್ಯಾಣ ಇಲಾಖೆಗೆ ಸರ್ಕಾರದಿಂದ 1. ಕೋಟಿ ರೂ ಅನ್ನು ಇಂತಹ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲು ನೀಡಲಾಗಿದೆ. ನೌಕರರು ಇಂತಹ ಕ್ರೀಡಾಕೂಟಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಮತ್ತೆ ನೌಕರರು ಮಕ್ಕಳಂತೆ ಬಾಲ್ಯದಲ್ಲಿ ಆಡುತ್ತಿದ್ದ ಆಟಗಳನ್ನು ನೆನಪಿಸಿಕೊಳ್ಳಬೇಕು ಎಂದು ಹೇಳಿದರು.

ಸಮಾಜ ಕಲ್ಯಾಣ ಇಲಾಖೆಯು ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ನಾವೆಲ್ಲರೂ ಶ್ರಮಿಸಬೇಕಾಗಿದೆ ಎಂದು ಹೇಳಿದರು.  ಮೈಸೂರು ಜಿಲ್ಲೆಯ ಅಲೆಮಾರಿ ಸಮುದಾಯದಲ್ಲಿ  ಮೊದಲ ಬಾರಿಗೆ ಕಾನೂನು ಪದವಿಯನ್ನು ಪಡೆದ   ಕುಮಾರಿ ಅರುಣಾ ರವರನ್ನು   ಕಾರ್ಯಕ್ರಮದಲ್ಲಿ ಗೌರವಿಸಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಮೈಸೂರು ತಾಲೂಕಿನ ಸಹಾಯಕ ನಿರ್ದೇಶಕರಾದ ಜನಾರ್ಧನ್, ಚಾಮರಾಜನಗರ ತಾಲೂಕಿನ ಸಹಾಯಕ ನಿರ್ದೇಶಕರಾದ ಮೇಘ, ಕೆ ಆರ್ ನಗರದ ಸಹಾಯಕ ನಿರ್ದೇಶಕರಾದ ಶಂಕರ್ ಮೂರ್ತಿ, ನಂಜನಗೂಡು ತಾಲೂಕಿನ ಸಹಾಯಕ ನಿರ್ದೇಶಕರಾದ ಸಿದ್ಲಿಂಗು, ಗುಂಡ್ಲುಪೇಟೆ ತಾಲೂಕಿನ ಸಹಾಯಕ ನಿರ್ದೇಶಕರಾದ ಮೋಹನ್, ಪಿರಿಯಾಪಟ್ಟ  ತಾಲೂಕಿನ ಸಹಾಯಕ ನಿರ್ದೇಶಕರಾದ ಚಂದ್ರಶೇಖರ್, ಎಚ್ ಡಿ ಕೋಟೆ ತಾಲೂಕಿನ ಸಹಾಯಕ ನಿರ್ದೇಶಕರಾದ ರಮೇಶ್, ಸಮಾಜ ಕಲ್ಯಾಣ ಇಲಾಖೆಯ ನೌಕರರು  ಮತ್ತಿತರರು ಉಪಸ್ಥಿತರಿದ್ದರು.

Leave a Reply