HOMENews

ಇನ್ನೆರಡು ವಾರದಲ್ಲಿ ಕಬ್ಬಿನ ಬಾಕಿ ಹಣ ಸಂದಾಯ ಮಾಡಲಾಗುವುದು: ಡಿಸಿ ಲಕ್ಷ್ಮಿಕಾಂತ ರೆಡ್ಡಿ

ಕಬ್ಬು ರೈತರಿಗೆ ಪ್ರತಿ ಟನ್‌ಗೆ 100 ಸಹಾಯಧನ: 15 ದಿನಗಳಲ್ಲಿ ಹಣ ಜಮಾ : ಜಿಲ್ಲಾಧಿಕಾರಿ ಜಿ. ಲಕ್ಷ್ಮಿಕಾಂತರೆಡ್ಡಿ ಭರವಸೆ

ಮೈಸೂರು, ಫೆ.03:- ಕಬ್ಬು ಬೆಳೆಗಾರರ ದೀರ್ಘಕಾಲದ ಬೇಡಿಕೆಗೆ ಕೊನೆಗೂ ಸ್ಪಂದಿಸಿರುವ ರಾಜ್ಯ ಸರ್ಕಾರ, ಪ್ರತಿ ಟನ್ ಕಬ್ಬಿಗೆ ?೧೦೦ ಸಹಾಯಧನವನ್ನು ನೀಡಲು ತೀರ್ಮಾನಿಸಿದ್ದು, ಈ ಮೊತ್ತವನ್ನು ಮುಂದಿನ 15 ದಿನಗಳ ಒಳಗಾಗಿ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮಾ ಮಾಡಲಾಗುವುದು ಎಂದು ಮೈಸೂರು ಜಿಲ್ಲಾಧಿಕಾರಿ ಜಿ. ಲಕ್ಷ್ಮಿಕಾಂತರೆಡ್ಡಿ ಅವರು ಭರವಸೆ ನೀಡಿದ್ದಾರೆ.

ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಕಬ್ಬು ಬೆಳೆಗಾರರ ಕುಂದುಕೊರತೆಗಳ ವಿಚಾರಣೆ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಪಾಲಿನ 50 ಸಹಾಯಧನವನ್ನು ಹಣಕಾಸು ಇಲಾಖೆ ಇನ್ನು ನಾಲ್ಕು ದಿನಗಳಲ್ಲಿ ಬಿಡುಗಡೆ ಮಾಡುವುದಾಗಿ ಮಾಹಿತಿ ನೀಡಿದೆ ಎಂದು ತಿಳಿಸಿದರು. ಈ ಮೊತ್ತ ಬಿಡುಗಡೆಗೊಂಡ ನಂತರ ಸುಮಾರು 10 ದಿನಗಳ ಅವಧಿಯಲ್ಲಿ ಬ್ಯಾಂಕ್ ಮೂಲಕ ರೈತರ ಖಾತೆಗಳಿಗೆ ಹಣ ಜಮಾ ಆಗಲಿದೆ. ಒಟ್ಟಾರೆ 15 ದಿನಗಳೊಳಗೆ ಸರ್ಕಾರದ ಸಹಾಯಧನ ಸಂಪೂರ್ಣವಾಗಿ ರೈತರ ಕೈ ಸೇರುತ್ತದೆ ಎಂದು ಸ್ಪಷ್ಟಪಡಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು, ರಾಜ್ಯ ಸರ್ಕಾರದ ಸಹಾಯಧನದ ಜೊತೆಗೆ ಸಕ್ಕರೆ ಕಾರ್ಖಾನೆಗಳೂ ಪ್ರತಿ ಟನ್‌ಗೆ ಹೆಚ್ಚುವರಿಯಾಗಿ 50 ನೀಡಲೇಬೇಕು. ಹೀಗಾಗಿ ಒಟ್ಟು ಪ್ರತಿ ಟನ್ ಕಬ್ಬಿಗೆ 100 ರೈತರಿಗೆ ದೊರೆಯಲಿದೆ ಎಂದು ತಿಳಿಸಿದರು. ಈ ಮೊತ್ತ ನೇರವಾಗಿ ರೈತರ ಬ್ಯಾಂಕ್ ಖಾತೆಗೆ ಜಮೆಯಾಗುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.

ಸಭೆಯಲ್ಲಿ ಭಾಗವಹಿಸಿದ್ದ ರೈತರು, ಸರ್ಕಾರ ತನ್ನ ಪಾಲಿನ ಸಹಾಯಧನ ನೀಡಬಹುದು. ಆದರೆ ಸಕ್ಕರೆ ಕಾರ್ಖಾನೆಗಳು ಹೆಚ್ಚುವರಿ ಹಣ ನೀಡುವುದರಲ್ಲಿ ವಿಳಂಬ ಮಾಡುತ್ತಿವೆ. ಈ ಹಿನ್ನೆಲೆಯಲ್ಲಿ ಸಭೆಗೆ ಹಾಜರಾಗಿರುವ ಸಕ್ಕರೆ ಕಾರ್ಖಾನೆ ಪ್ರತಿನಿಧಿಗಳಿಂದ ಸ್ಪಷ್ಟ ಮತ್ತು ಖಚಿತ ಭರವಸೆ ಪಡೆಯಬೇಕು ಎಂದು ಒತ್ತಾಯಿಸಿದರು.

ಈ ಮಾತು ಕೇಳುತ್ತಿದ್ದಂತೆ ಜಿಲ್ಲಾಧಿಕಾರಿ ಲಕ್ಷ್ಮಿಕಾಂತರೆಡ್ಡಿ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಸರ್ಕಾರದ ಆದೇಶವನ್ನು ಪಾಲಿಸುವುದು ಸಕ್ಕರೆ ಕಾರ್ಖಾನೆಗಳಿಗೆ ಕಡ್ಡಾಯವಾಗಿದೆ. ಹೆಚ್ಚುವರಿ ಹಣ ಕೊಡುತ್ತೀರಾ ಅಥವಾ ಇಲ್ಲವಾ ಎಂದು ಪ್ರಶ್ನೆ ಮಾಡುವ ಅಗತ್ಯವೇ ಇಲ್ಲ. ಸರ್ಕಾರದ ಆದೇಶ ಪಾಲನೆ ಮಾಡಬೇಕಷ್ಟೇ ಎಂದು ಕಠಿಣವಾಗಿ ತಾಕೀತು ಮಾಡಿದರು.

ಯಾವುದೇ ಸಕ್ಕರೆ ಕಾರ್ಖಾನೆ ಸರ್ಕಾರದ ಆದೇಶವನ್ನು ಉಲ್ಲಂಘಿಸಿದರೆ, ದಂಡ ವಿಧಿಸುವುದು ಸೇರಿದಂತೆ ಕಾನೂನುಬದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ರೈತರ ಹಿತಾಸಕ್ತಿಯನ್ನು ಕಾಪಾಡುವುದರಲ್ಲಿ ಜಿಲ್ಲಾಡಳಿತ ಯಾವುದೇ ರೀತಿಯ ಸಡಿಲತೆ ತೋರಿಸುವುದಿಲ್ಲ ಎಂದು ಎಚ್ಚರಿಸಿದರು.

ಈ ವೇಳೆ ಮಾತನಾಡಿದ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ವೇಲುಸ್ವಾಮಿ, ಹೆಚ್ಚುವರಿ ಹಣ ನೀಡುವ ವಿಚಾರ ಸಂಬಂಧ ಹೈಕೋರ್ಟ್‌ನಲ್ಲಿ ಪ್ರಕರಣ ವಿಚಾರಣೆಯಲ್ಲಿದೆ ಎಂದು ಸ್ಪಷ್ಟನೆ ನೀಡಿದರು. ಇದರಿಂದ ಸಭೆಯಲ್ಲಿ ಮತ್ತೆ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು.

ಈ ಮಾತು ಕೇಳುತ್ತಿದ್ದಂತೆಯೇ ಜಿಲ್ಲಾಧಿಕಾರಿ ಲಕ್ಷ್ಮಿಕಾಂತರೆಡ್ಡಿ ಅವರು ಇನ್ನಷ್ಟು ಕಠಿಣ ಧಾಟಿಯಲ್ಲಿ ಪ್ರತಿಕ್ರಿಯಿಸಿದರು. ಹೆಚ್ಚುವರಿ ಹಣ ನೀಡದಂತೆ ನೀವು ಅನಗತ್ಯ ಕಾನೂನು ಪ್ರಕ್ರಿಯೆಗಳಿಗೆ ಹೋಗಿರುವುದು ನಮಗೆ ತಿಳಿದಿದೆ. ಆದರೆ ಈ ವಿಷಯದಲ್ಲಿ ಹೈಕೋರ್ಟ್ ಯಾವುದೇ ತಡೆಯಾಜ್ಞೆ ನೀಡಿಲ್ಲ. ಅಂದರೆ ಸರ್ಕಾರದ ಆದೇಶವನ್ನು ಪಾಲಿಸುವುದಕ್ಕೆ ನಿಮಗೆ ಯಾವುದೇ ಅಡ್ಡಿಯಿಲ್ಲ ಎಂದು ಸ್ಪಷ್ಟಪಡಿಸಿದರು.

ಸರ್ಕಾರದ ಆದೇಶವನ್ನು ನಿರ್ಲಕ್ಷಿಸಿದರೆ ಅಥವಾ ಪಾಲನೆ ಮಾಡದೇ ವಿಳಂಬ ಮಾಡಿದರೆ, ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಮತ್ತೆ ಎಚ್ಚರಿಕೆ ನೀಡಿದರು. ರೈತರಿಗೆ ನ್ಯಾಯ ಒದಗಿಸುವುದು ಜಿಲ್ಲಾಡಳಿತದ ಮೊದಲ ಆದ್ಯತೆಯಾಗಿದ್ದು, ಯಾವುದೇ ಒತ್ತಡಕ್ಕೆ ಒಳಗಾಗುವುದಿಲ್ಲ ಎಂದು ತಿಳಿಸಿದರು.

ಸಭೆಯಲ್ಲಿ ಮತ್ತೊಂದು ಪ್ರಮುಖ ವಿಚಾರವಾಗಿ ಸಕ್ಕರೆ ಇಳುವರಿ ಪ್ರಮಾಣದ ಬಗ್ಗೆ ರೈತರು ಅನುಮಾನ ವ್ಯಕ್ತಪಡಿಸಿದರು. ಒಂದು ಟನ್ ಕಬ್ಬು ಅರೆದಾಗ ಜಿಲ್ಲೆಯಲ್ಲಿ ಶೇಕಡಾ 9.25 ರಷ್ಟು ಮಾತ್ರ ಸಕ್ಕರೆ ಇಳುವರಿ ಸಿಗುತ್ತಿದೆ. ಆದರೆ ಉತ್ತರ ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ಶೇಕಡಾ 10 ರಿಂದ 11 ರಷ್ಟು ಇಳುವರಿ ದೊರೆಯುತ್ತಿದೆ. ಇದರಿಂದ ಮೈಸೂರು ಭಾಗದ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಹಳ್ಳಿಕೆರೆ ಹುಂಡಿ ಭಾಗ್ಯರಾಜ್ ಅವರು ಆಕ್ಷೇಪ ವ್ಯಕ್ತಪಡಿಸಿದರು.

ಈ ಆರೋಪಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಲಕ್ಷ್ಮಿಕಾಂತರೆಡ್ಡಿ ಅವರು, ತಾವು ಸ್ವತಃ ಸಕ್ಕರೆ ಕಾರ್ಖಾನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾಗಿ ತಿಳಿಸಿದರು. ಕಬ್ಬನ್ನು ಪರೀಕ್ಷೆಗೆ ಒಳಪಡಿಸಿದಾಗ ಶೇಕಡಾ 9.25 ರಷ್ಟು ಇಳುವರಿ ಬರುತ್ತಿದೆ. ರೈತರು ಹೇಳುವಂತೆ ಬಹಳ ದೊಡ್ಡ ವ್ಯತ್ಯಾಸ ಕಂಡುಬಂದಿಲ್ಲ ಎಂದು ಸ್ಪಷ್ಟಪಡಿಸಿದರು.

ಆದರೂ ಕೆಲ ರೈತರು ಇನ್ನೂ ಅನುಮಾನ ವ್ಯಕ್ತಪಡಿಸುತ್ತಿರುವ ಹಿನ್ನೆಲೆಯಲ್ಲಿ, ರೈತ ಪ್ರತಿನಿಧಿಗಳೊಂದಿಗೆ ಸಕ್ಕರೆ ಕಾರ್ಖಾನೆಗಳಿಗೆ ದಿಢೀರ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು. ಅಲ್ಲಿಯೇ ನೇರವಾಗಿ ಪರೀಕ್ಷೆ ನಡೆಸಿ ಇಳುವರಿಯ ನಿಖರ ಮಾಹಿತಿ ಪಡೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು. ಜಿಲ್ಲಾಧಿಕಾರಿಗಳ ಈ ಪ್ರಸ್ತಾವನೆಗೆ ರೈತರು ಒಪ್ಪಿಗೆ ಸೂಚಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಯುಕೇಶ್ ಕುಮಾರ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ರವಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿ ಮಂಟೇಸ್ವಾಮಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಮಲ್ಲಿಕ್ ಉಪಸ್ಥಿತರಿದ್ದರು. ಅಲ್ಲದೆ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್, ಅತ್ತಳ್ಳಿ ದೇವರಾಜ್, ಸಿದ್ದೇಶ್, ಬರಡನಪುರ ನಾಗರಾಜ್, ಪ್ರದೀಪ್, ಪ್ರಸಾದ್ ನಾಯಕ್, ಕಿರಸಗೂರು ಶಂಕರ್ ಸೇರಿದಂತೆ ಹಲವಾರು ರೈತ ಮುಖಂಡರು ಸಭೆಯಲ್ಲಿ ಭಾಗವಹಿಸಿ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು.

ಸಭೆ ಕೊನೆಯಲ್ಲಿ ಜಿಲ್ಲಾಧಿಕಾರಿ ಲಕ್ಷ್ಮಿಕಾಂತರೆಡ್ಡಿ ಅವರು, ರೈತರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸಲು ಜಿಲ್ಲಾಡಳಿತ ಬದ್ಧವಾಗಿದೆ. ರೈತರು ಆತಂಕಪಡಬೇಕಾಗಿಲ್ಲ. ಸರ್ಕಾರ ಹಾಗೂ ಆಡಳಿತ ಯಂತ್ರ ರೈತರ ಬೆನ್ನಿಗೆ ನಿಂತಿದೆ ಎಂದು ಭರವಸೆ ನೀಡಿದರು.

Leave a Response