
ಮೈಸೂರು:- ಸರಗೂರು ತಾಲೂಕಿನ ಕುಂದೂರು ಗ್ರಾಮದ ಶ್ರೀ ಚಿಕ್ಕದೇವಮ್ಮನವರ ಜಾತ್ರೆ ಯುಗಾದಿ ಹಬ್ಬದಂದು ಭಕ್ತಿಭಾವದಿಂದ ಜರುಗಲಿರುವ ಹಿನ್ನೆಲೆ, ಜಾತ್ರೆಯಲ್ಲಿ ನಡೆಯಬಹುದಾದ ಪ್ರಾಣಿಬಲಿಯನ್ನು ಸಂಪೂರ್ಣವಾಗಿ ತಡೆಗಟ್ಟುವಂತೆ ಸರ್ಕಾರ ಮತ್ತು ಜಿಲ್ಲಾಡಳಿತಕ್ಕೆ ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ ಹಾಗೂ ಪಶು-ಪ್ರಾಣಿ ಬಲಿ ನಿರ್ಮೂಲನ ಜಾಗೃತಿ ಮಹಾಸಂಘದ ಅಧ್ಯಕ್ಷರಾದ ಶ್ರೀ ದಯಾನಂದ ಸ್ವಾಮೀಜಿಯವರು ಮನವಿ ಮಾಡಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಜಾತ್ರೆ ಸಂದರ್ಭಕ್ಕೆ ಸಹಸ್ರಾರು ಭಕ್ತರು ಆಗಮಿಸಿ ದೇವರಿಗೆ ಪೂಜೆ, ಹರಕೆ ಹಾಗೂ ಧಾರ್ಮಿಕ ವಿಧಿಗಳನ್ನು ನೆರವೇರಿಸುತ್ತಾರೆ. ಆದರೆ ಇದೇ ಸಂದರ್ಭದಲ್ಲಿ ಕೆಲವರು ದೇವರ ಹೆಸರಿನಲ್ಲಿ ಆಡು, ಕುರಿ, ಕೋಳಿ ಸೇರಿದಂತೆ ವಿವಿಧ ಪ್ರಾಣಿಗಳನ್ನು ಬಲಿಯಾಗಿ ಅರ್ಪಿಸುವ ಪ್ರಕ್ರಿಯೆ ನಡೆಯುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
“ಪ್ರಾಣಿಬಲಿ ಕರ್ನಾಟಕ ಪ್ರಾಣಿ ಬಲಿಗಳ ಪ್ರತಿಬಂಧಕ ಅಧಿನಿಯಮ 1959, ನಿಯಮಗಳು 1963 ಹಾಗೂ ತಿದ್ದುಪಡಿ ಕಾಯ್ದೆ 1975ರ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ. ಹೈಕೋರ್ಟ್ ಆದೇಶಗಳೂ ಇದನ್ನು ನಿಷೇಧಿಸುತ್ತವೆ. ಆದ್ದರಿಂದ ಈ ಬಾರಿ ಜಾತ್ರೆಯಲ್ಲಿ ಯಾವುದೇ ರೀತಿಯ ಪ್ರಾಣಿಬಲಿ ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು,” ಎಂದು ಅವರು ಒತ್ತಾಯಿಸಿದ್ದಾರೆ.
ಚಿಕ್ಕದೇವಮ್ಮನವರ ಬೆಟ್ಟದ ಪರಿಸರ, ಉತ್ಸವ ಮೆರವಣಿಗೆ ಮಾರ್ಗಗಳು, ರಸ್ತೆ ಬದಿಗಳು, ಅಕ್ಕಪಕ್ಕದ ಹೊಲಗದ್ದೆಗಳು ಹಾಗೂ ಹಾಲ್ಗಡ, ಇಟ್ನಾ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬಲಿ ಪ್ರಕ್ರಿಯೆ ನಡೆಯುವ ಸಾಧ್ಯತೆ ಇರುವುದರಿಂದ, ಈ ಪ್ರದೇಶಗಳಲ್ಲಿ ಪೊಲೀಸ್ ಮತ್ತು ಆಡಳಿತ ಕಟ್ಟೆಚ್ಚರ ವಹಿಸಬೇಕು. ಜೊತೆಗೆ ಜಾತ್ರಾ ಪ್ರದೇಶಕ್ಕೆ ಪ್ರಾಣಿಗಳನ್ನು ತರದಂತೆ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಸ್ವಾಮೀಜಿಯವರು ಪ್ರಾಣಿಬಲಿಯ ವಿರುದ್ಧ ತೀವ್ರ ಅಭಿಪ್ರಾಯ ವ್ಯಕ್ತಪಡಿಸಿ, “ಪ್ರಾಣಿಬಲಿ ಅನಾಗರಿಕ, ಅಂಧಶ್ರದ್ಧೆಯ ಹಾಗೂ ಪರಿಸರ ಮಾಲಿನ್ಯಕ್ಕೆ ಕಾರಣವಾಗುವ ಕ್ರಿಯೆಯಾಗಿದೆ. ಇದು ಕಾನೂನು ವಿರೋಧಿಯಾಗಿರುವುದಷ್ಟೇ ಅಲ್ಲ, ನಿಜವಾದ ಧರ್ಮದ ಮೌಲ್ಯಗಳಿಗೂ ವಿರುದ್ಧವಾಗಿದೆ,” ಎಂದು ತಿಳಿಸಿದ್ದಾರೆ.
ಭಕ್ತರಿಗೆ ಕರೆ ನೀಡಿದ ಅವರು, “ದೇವಾಲಯಗಳು ವಧಾಲಯಗಳಾಗದೆ ದಿವ್ಯಾಲಯಗಳಾಗಬೇಕು. ಜಾತ್ರೆಗಳು ಪ್ರಾಣಿಹಿಂಸೆ, ಮದ್ಯಪಾನ ಮತ್ತು ಮಾದಕ ಪದಾರ್ಥಗಳಿಂದ ಮುಕ್ತವಾಗಿರಬೇಕು. ಅಹಿಂಸೆ, ಕರುಣೆ, ಪ್ರೇಮ, ಜೀವದಯೆ, ಮಾನವೀಯತೆ ಇವೇ ನಿಜವಾದ ಧಾರ್ಮಿಕ ಮೌಲ್ಯಗಳು. ಆದ್ದರಿಂದ ಭಕ್ತರು ಪ್ರಾಣಿಬಲಿಯನ್ನು ತ್ಯಜಿಸಿ ಸಾತ್ವಿಕ ಪೂಜೆಗಳನ್ನು ನೆರವೇರಿಸಬೇಕು,” ಎಂದು ಮನವಿ ಮಾಡಿದ್ದಾರೆ.
ಈ ಹಿನ್ನೆಲೆಯಲ್ಲಿ, ಜನತೆಯಲ್ಲಿ ಜಾಗೃತಿ ಮೂಡಿಸಲು “ಅಹಿಂಸಾ – ಪ್ರಾಣಿದಯಾ – ಆಧ್ಯಾತ್ಮ ಸಂದೇಶ ಯಾತ್ರೆ” ಕೈಗೊಳ್ಳುವುದಾಗಿ ಸ್ವಾಮೀಜಿಯವರು ಘೋಷಿಸಿದ್ದಾರೆ. ಇಂದಿನಿಂದ ಜಾತ್ರೆ ಮುಗಿಯುವವರೆಗೆ ಸರಗೂರು ತಾಲೂಕಿನ ವಿವಿಧ ಭಾಗಗಳು ಹಾಗೂ ಚಿಕ್ಕದೇವಮ್ಮ ಬೆಟ್ಟದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಈ ಯಾತ್ರೆ ನಡೆಯಲಿದೆ. ಇದರ ಮೂಲಕ ಪ್ರಾಣಿದಯೆ ಮತ್ತು ಅಹಿಂಸೆಯ ಸಂದೇಶವನ್ನು ಜನರಲ್ಲಿ ಬಿತ್ತುವ ಉದ್ದೇಶ ಹೊಂದಲಾಗಿದೆ.
ಇದಲ್ಲದೆ, ಈ ವಿಷಯವಾಗಿ ಈಗಾಗಲೇ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ, ಗೃಹ ಹಾಗೂ ಪಶು ಸಂಗೋಪನಾ ಇಲಾಖೆ ಅಧಿಕಾರಿಗಳು, ರಾಜ್ಯ ಪೊಲೀಸ್ ಮಹಾನಿರ್ದೇಶಕರು, ಮೈಸೂರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಚಿಕ್ಕದೇವಮ್ಮ ದೇವಸ್ಥಾನವು ರಾಜ್ಯ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆಯ ಅಧೀನದಲ್ಲಿರುವುದರಿಂದ, ಜಾತ್ರೆಯ ಸಂದರ್ಭದಲ್ಲಿ ಕಾನೂನು ಮತ್ತು ಶಾಂತಿ ಕಾಪಾಡುವುದು ಆಡಳಿತದ ಜವಾಬ್ದಾರಿ ಎಂದು ಅವರು ಒತ್ತಿಹೇಳಿದ್ದಾರೆ.
ಒಟ್ಟಿನಲ್ಲಿ, ಭಕ್ತಿಯ ಜೊತೆಗೆ ಮಾನವೀಯತೆಗೂ ಮಹತ್ವ ನೀಡುವ ಈ ಮನವಿ, ಜಾತ್ರೆಯ ಸಂಪ್ರದಾಯದಲ್ಲಿ ಹೊಸ ಚಿಂತನೆಗೆ ದಾರಿ ಮಾಡಿಕೊಡಬಹುದೆಂಬ ನಿರೀಕ್ಷೆ ವ್ಯಕ್ತವಾಗಿದೆ.





