HOMENews

ಕ್ಲಾಸ್‌ ರೂಮಲ್ಲೇ ಪ್ರಪೋಸ್‌ ಮಾಡಿದ ಪ್ರೊಫೆಸರ್‌ಗೆ ವಿದ್ಯಾರ್ಥಿಗಳ ಆಕ್ರೋಶ: ಚಪ್ಪಲಿ ಏಟು, ಕ್ಯಾಂಪಸ್‌ನಲ್ಲಿ ಹಲ್ಲೆ

ನೆಲಮಂಗಲ, ಮಾ. 26: ತರಗತಿ ನಡೆಯುತ್ತಿದ್ದ ಸಮಯದಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ನೀಡಿ ಪ್ರಪೋಸ್‌ ಮಾಡಿದ ಆರೋಪದ ಮೇಲೆ ಮೆಡಿಕಲ್ ಕಾಲೇಜಿನ ಪ್ರೊಫೆಸರ್ ವಿರುದ್ಧ ವಿದ್ಯಾರ್ಥಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನಲ್ಲಿರುವ ಖಾಸಗಿ ಮೆಡಿಕಲ್ ಕಾಲೇಜಿನಲ್ಲಿ ನಡೆದಿದೆ. ಘಟನೆಯಿಂದ ಕೆಲಕಾಲ ಕಾಲೇಜು ಆವರಣದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು.

ಮಾಹಿತಿಯ ಪ್ರಕಾರ, ಅಬ್ದುಲ್ ಎಂಬ ಪ್ರೊಫೆಸರ್ ತರಗತಿ ನಡೆಯುತ್ತಿರುವ ವೇಳೆ ವಿದ್ಯಾರ್ಥಿನಿಗೆ ಚಾಕೊಲೇಟ್ ನೀಡುತ್ತಾ ಪ್ರೀತಿಯ ಪ್ರಸ್ತಾಪ ಮಾಡಿದ್ದಾರೆ ಎನ್ನಲಾಗಿದೆ. ಅಕಸ್ಮಾತ್ ನಡೆದ ಈ ವರ್ತನೆಯಿಂದ ಬೆಚ್ಚಿಬಿದ್ದ ವಿದ್ಯಾರ್ಥಿನಿ ತಕ್ಷಣವೇ ಪ್ರೊಫೆಸರ್‌ನನ್ನು ಪ್ರಶ್ನಿಸಿದ್ದಾರೆ. “ಇಂತಹ ವಿಷಯಗಳ ಬಗ್ಗೆ ಮಾತನಾಡಬೇಕಾದರೆ ಪ್ರಿನ್ಸಿಪಾಲ್ ಮುಂದೆ ಮಾತನಾಡಿ” ಎಂದು ಸ್ಪಷ್ಟವಾಗಿ ಪ್ರತಿಕ್ರಿಯಿಸಿದ್ದಾಗಿ ತಿಳಿದುಬಂದಿದೆ.

ಆದರೆ ಪ್ರೊಫೆಸರ್ ತನ್ನ ವರ್ತನೆಯನ್ನು ಸಮರ್ಥಿಸಿಕೊಳ್ಳಲು ಯತ್ನಿಸಿದರೆಂದು ಆರೋಪಿಸಲಾಗಿದೆ. “ನೀನೇ ನನಗೆ ಪ್ರಪೋಸ್ ಮಾಡಿದ್ದೀಯ” ಎಂಬ ಹೇಳಿಕೆಯನ್ನು ನೀಡಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿ ಮತ್ತಷ್ಟು ಆಕ್ರೋಶಗೊಂಡು, ತರಗತಿಯಲ್ಲೇ ಚಪ್ಪಲಿಯಿಂದ ಪ್ರೊಫೆಸರ್‌ಗೆ ಹೊಡೆದಿದ್ದಾರೆ ಎಂದು ಹೇಳಲಾಗಿದೆ. ಈ ದೃಶ್ಯವನ್ನು ನೋಡಿದ ಇತರ ವಿದ್ಯಾರ್ಥಿಗಳು ಕೂಡ ರೊಚ್ಚಿಗೆದ್ದು ಪ್ರೊಫೆಸರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದಾದ ಬಳಿಕ ಪರಿಸ್ಥಿತಿ ತೀವ್ರಗೊಂಡಿದ್ದು, ಕೆಲ ವಿದ್ಯಾರ್ಥಿಗಳು ಪ್ರೊಫೆಸರ್‌ನನ್ನು ತರಗತಿಯಿಂದ ಹೊರಗೆ ಬೆನ್ನಟ್ಟಿದರೆಂದು ತಿಳಿದುಬಂದಿದೆ. ಕ್ಯಾಂಪಸ್‌ನಲ್ಲೇ ಅಟ್ಟಾಡಿಸಿ ಕಾರಿನವರೆಗೂ ಬೆನ್ನಟ್ಟಿದ ವಿದ್ಯಾರ್ಥಿಗಳು ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಈ ವೇಳೆ ಭಯಗೊಂಡ ಪ್ರೊಫೆಸರ್ ಹೇಗೋ ವಿದ್ಯಾರ್ಥಿಗಳಿಂದ ತಪ್ಪಿಸಿಕೊಂಡು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಘಟನೆಯ ಮಾಹಿತಿ ತಿಳಿದ ನಂತರ ಕಾಲೇಜು ಆಡಳಿತವು ಪರಿಸ್ಥಿತಿಯನ್ನು ನಿಯಂತ್ರಿಸಲು ಮುಂದಾಗಿದೆ. ಈ ಬಗ್ಗೆ ಒಳಾಂಗಣ ತನಿಖೆ ಆರಂಭಿಸುವ ಸಾಧ್ಯತೆ ಇದ್ದು, ಸಂಬಂಧಪಟ್ಟವರಿಂದ ಸ್ಪಷ್ಟನೆ ಪಡೆಯಲಾಗುತ್ತಿದೆ ಎಂದು ತಿಳಿದುಬಂದಿದೆ. ಜೊತೆಗೆ, ಈ ಘಟನೆ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವುದರಿಂದ, ಪೊಲೀಸ್ ಅಧಿಕಾರಿಗಳು ಕೂಡ ಪ್ರಾಥಮಿಕ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಶಿಕ್ಷಣ ಸಂಸ್ಥೆಗಳಲ್ಲಿ ಗುರು-ವಿದ್ಯಾರ್ಥಿ ಸಂಬಂಧದ ಮೌಲ್ಯಗಳು ಮತ್ತು ನೈತಿಕತೆಗಳ ಬಗ್ಗೆ ಈ ಘಟನೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ. ವಿದ್ಯಾರ್ಥಿಗಳ ಗೌರವ, ಸುರಕ್ಷತೆ ಮತ್ತು ಖಾಸಗಿತನ ಕಾಪಾಡುವುದು ಶಿಕ್ಷಕರ ಮೂಲಭೂತ ಜವಾಬ್ದಾರಿಯಾಗಿದೆ. ಇಂತಹ ಘಟನೆಗಳು ಶಿಕ್ಷಣ ವಾತಾವರಣದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಪೋಷಕರು ಮತ್ತು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ.

ತರಗತಿ ಕೊಠಡಿಯಲ್ಲೇ ನಡೆದ ಈ ಘಟನೆ ಶಿಕ್ಷಣ ಕ್ಷೇತ್ರದಲ್ಲಿ ಶಿಸ್ತು ಮತ್ತು ನೈತಿಕತೆ ಕಾಪಾಡುವ ಅಗತ್ಯವನ್ನು ಮತ್ತೊಮ್ಮೆ ನೆನಪಿಸುವಂತಾಗಿದೆ. ಪ್ರಕರಣದ ನಿಜಾಸ್ತಿ ತನಿಖೆಯ ನಂತರ ಸ್ಪಷ್ಟವಾಗಲಿದ್ದು, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವ ನಿರೀಕ್ಷೆ ವ್ಯಕ್ತವಾಗಿದೆ.

Leave a Reply