HOMEArtical

ವೇದಾಂತ ಬರೀ ಬಾಯಿಪಾಠಕ್ಕಲ್ಲ, ಬದುಕಿನ ನಡವಳಿಕೆಗೆ

ಮನದ ಮಾತು: by Pooja raghunandan

ಇವತ್ತು ನಾವು ಯಾವುದೋ ಒಂದು ವೇದಾಂತದ ಮಾತನ್ನು ನಮಗೆ ಬೇಕಾದ ಹಾಗೆ ಬಳಸಿಕೊಳ್ಳುವ ‘ಅನುಕೂಲಸಿಂಧು’ ಮನಸ್ಥಿತಿಯ ಬಗ್ಗೆ ಮಾತಾಡೋಣ. ನಮ್ಮ ಹಿರಿಯರು ಒಂದು ಮಾತು ಹೇಳ್ತಾರೆ, “ಸ್ಥಳದ ಮಹಿಮೆ ಮತ್ತು ಸಂಸ್ಕಾರ ಒಂದಕ್ಕೊಂದು ಬೆಸೆದುಕೊಂಡಿರುತ್ತವೆ” ಎಂದು. ಈ ಮಾತಿಗೆ ಪೂರಕವಾಗಿ ಒಂದು ಸಣ್ಣ ಕಥೆ ನೆನಪಾಗುತ್ತಿದೆ.

ಒಂದು ಊರಿನಲ್ಲಿ ಅತ್ಯಂತ ಸುಂದರವಾದ, ಪುರಾತನವಾದ ಬೃಂದಾವನವಿತ್ತು. ಅದು ಸಾಧಕರತಪೋಭೂಮಿ. ಅದರ ಎದುರಿಗೇ ಒಂದು ತಿಳಿನೀರಿನ ಪುಷ್ಕರಣಿ ಕೂಡ ಇತ್ತು. ನಿತ್ಯವೂ ಭಕ್ತಾದಿಗಳು ಬಂದು ಅಲ್ಲಿ ಶ್ರದ್ಧೆಯಿಂದ ಪೂಜೆ ಸಲ್ಲಿಸುತ್ತಿದ್ದರು. ಆದರೆ, ಒಂದು ದಿನ ಕೆಲವರು ಬೃಂದಾವನದ ಮುಂಭಾಗದಲ್ಲೇ ಶ್ರಾದ್ಧಕರ್ಮಗಳನ್ನು(ಪಿತೃಕಾರ್ಯ) ಮಾಡಲು ಮುಂದಾದರು. ಇದನ್ನು ಕಂಡ ಭಕ್ತರು, “ಪೂಜೆ ನಡೆಯುವ ಪವಿತ್ರ ಸ್ಥಳದಲ್ಲಿ ಇಂತಹ ಕಾರ್ಯ ಮಾಡಬೇಡಿ” ಎಂದು ಮನವಿ ಮಾಡಿದರು.

ಆಗ ಆ ಕೆಲಸಕ್ಕೆ ಮುಂದಾದವರು ದೊಡ್ಡ ವೇದಾಂತಿಗಳಂತೆ ವಾದಕ್ಕಿಳಿದರು! “ಭಗವಂತ ಎಲ್ಲೆಡೆ ಇದ್ದಾನೆ, ಈ ನೀರು ಕೂಡ ಭಗವಂತನ ಸ್ವರೂಪವೇ ಅಲ್ವಾ? ಪೂಜೆಗೂ ಶ್ರಾದ್ಧಕ್ಕೂ ವ್ಯತ್ಯಾಸವೇನಿದೆ? ಎಲ್ಲವೂ ಒಂದೇ” ಎಂದು ತಮ್ಮ ಮೂಗಿನ ನೇರಕ್ಕೆ ವೇದಾಂತವನ್ನೇ ಬಳಸಿಕೊಂಡರು. ಇದರಿಂದ ಗೊಂದಲಕ್ಕೀಡಾದ ಭಕ್ತರು ತಮ್ಮ ಗುರುಗಳ ಬಳಿ ಹೋಗಿ ವಿಷಯ ತಿಳಿಸಿದರು.

ಗುರುಗಳು ನಸುನಗುತ್ತಾ ಒಂದು ಅದ್ಭುತ ಉತ್ತರ ನೀಡಿದರು: “ಅವರು ಹೇಳಿದ್ದರಲ್ಲಿ ತಪ್ಪೇನಿಲ್ಲ. ಆದರೆ, ಅವರಿಗೆ ಒಂದು ಮಾತು ಹೇಳಿ… ಅವರ ಮನೆಯ ‘ವಾಶ್‌ರೂಮ್’ನಲ್ಲಿ ಬರುವ ನಲ್ಲಿಯ ನೀರನ್ನು ಹಿಡಿದು ಅದರಿಂದಲೇ ಅಡುಗೆ ಮಾಡಿ ಊಟ ಮಾಡಲು ಹೇಳಿ! ಯಾಕಂದ್ರೆ ನಲ್ಲಿಯಲ್ಲೂ ಬರುವುದು ಅದೇ ನೀರು, ಅಡುಗೆ ಮನೆಗೂ ಬರುವುದೂ ಅದೇ ನೀರು ತಾನೇ? ಈ ವ್ಯತ್ಯಾಸವನ್ನೇ ಮರೆತು ಅವರು ಬದುಕಲು ಸಿದ್ಧರಿದ್ದರೆ, ಬೃಂದಾವನದ ಎದುರು ಅವರು ಏನು ಮಾಡಿದರೂ ತಪ್ಪಿಲ್ಲ”

ನೋಡಿ ಬಾಸ್, ಇದು ಕೇವಲ ಒಂದು ಕಥೆಯಲ್ಲ, ಇವತ್ತಿನ ಯಾಂತ್ರಿಕ ಜೀವನದಲ್ಲಿ ನಾವೆಲ್ಲರೂ ಮಾಡ್ತಿರೋ ತಪ್ಪು ಕೂಡ ಇದೇ.. ನಮಗೆ ಅನುಕೂಲ ಬೇಕಾದಾಗ ದೊಡ್ಡ ದೊಡ್ಡ ವೇದಾಂತದ ಮಾತುಗಳನ್ನು ಆಡ್ತೀವಿ, “ಎಲ್ಲವೂ ಭಗವಂತನ ಸ್ವರೂಪ” ಅಂತೀವಿ. ಆದರೆ ಅದನ್ನು ಬದುಕಿನ ಆಚರಣೆಗೆ ತರುವಾಗ ಮಾತ್ರ ನಮಗೆ ನಮ್ಮದೇ ಆದ ಮಿತಿಗಳು ಬೇಕಾಗುತ್ತವೆ.

ಸಂಪ್ರದಾಯ ಮತ್ತು ಶಾಸ್ತ್ರಗಳು ಕೇವಲ ನಿಯಮಗಳಲ್ಲ; ಅವು ಬದುಕಿಗೆ ಶಿಸ್ತು ಮತ್ತು ಗೌರವವನ್ನು ಕಲಿಸಿಕೊಡುವ ಸೂತ್ರಗಳು. ನಮಗೆ ಅಗತ್ಯವಿದ್ದಾಗ ಮಾತ್ರ ವೇದಾಂತವನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳುವುದು ನಮ್ಮ ಸಂಸ್ಕಾರದ ಹಳಿ ತಪ್ಪಿದಂತೆ ಲೆಕ್ಕ.

ನೋಡಿ ಸ್ನೇಹಿತರೇ, ವೇದಾಂತ ಎನ್ನುವುದು ಕೇವಲ ತರ್ಕಕ್ಕಾಗಿ ಬಳಸುವ ವಸ್ತುವಲ್ಲ, ಅದು ನಮ್ಮ ಅರಿವಿನ ಆಳವಾಗಬೇಕು. ಜ್ಞಾನ ಎನ್ನುವುದು ಅಡುಗೆ ಮನೆಯಲ್ಲಿರುವ ಉಪ್ಪಿನಂತೆ; ಅದು ಅಡುಗೆಗೆ ರುಚಿ ಕೊಡಬೇಕೇ ಹೊರತು, ಕಣ್ಣಿಗೆ ಬಿದ್ದು ಉರಿ ತರಿಸಬಾರದು. ನಾವು ಮಾತನಾಡುವ ವೇದಾಂತ ಮತ್ತು ನಾವು ಬದುಕುವ ಜೀವನದ ನಡುವೆ ಅಜಗಜಾಂತರ ವ್ಯತ್ಯಾಸವಿದ್ದರೆ, ಆ ಜ್ಞಾನಕ್ಕೆ ಬೆಲೆಯೇ ಇರುವುದಿಲ್ಲ. ನಮ್ಮ ಅನುಕೂಲಕ್ಕೆ ತಕ್ಕಂತೆ ಧರ್ಮವನ್ನೋ, ತತ್ವವನ್ನೋ ಬಗ್ಗಿಸುವುದು ಜಾಣತನವಲ್ಲ, ಅದು ನಮ್ಮ ಅಜ್ಞಾನದ ಪರಮಾವಧಿ. ಜ್ಞಾನವು ನಡವಳಿಕೆಯಲ್ಲಿ ಇಳಿದಾಗ ಮಾತ್ರ ಅದು ಬದುಕಿಗೆ ದಾರಿದೀಪವಾಗುತ್ತದೆ

ಮನದ ಸೂತ್ರ:

  • ಅರಿವು ಮತ್ತು ಆಚರಣೆ ಒಂದಾಗಲಿ: ಬಾಯಲ್ಲಿ ಹೇಳುವ ವೇದಾಂತವು ನಮ್ಮ ನಡವಳಿಕೆಯಲ್ಲೂ ಪ್ರತಿಫಲಿಸಿದಾಗ ಮಾತ್ರ ಸಮಾಜದಲ್ಲಿ ನಮಗೆ ಗೌರವ ಸಿಗುತ್ತದೆ.
  • ವಿವೇಚನೆ ಇರಲಿ: ಭಗವಂತ ಎಲ್ಲೆಡೆ ಇದ್ದಾನೆ ಎಂಬುದು ಸತ್ಯವಾದರೂ, ಆ ಸತ್ಯವನ್ನು ತಪ್ಪಾದ ಕೆಲಸಕ್ಕೆ ಸಮರ್ಥನೆಯಾಗಿ ಬಳಸಿಕೊಳ್ಳುವುದು ಅಧರ್ಮ.
  • ಸ್ಥಳದ ಮಹಿಮೆ ತಿಳಿಯಿರಿ: ಹೂವಿನ ಹಾರ ಹಾಕುವ ಜಾಗದಲ್ಲಿ ಹಾರವನ್ನೇ ಹಾಕಬೇಕು. ಎಲ್ಲವೂ ಒಂದೇ ಅಂತ ಪಾದರಕ್ಷೆಯನ್ನು ತಲೆಯ ಮೇಲೆ ಹೊತ್ತುಕೊಳ್ಳಲು ಸಾಧ್ಯವಿಲ್ಲ ಅಲ್ವಾ?

Leave a Reply