HOMENews

ಸಮರ್ಥನಂ ಜೀವನೋಪಾಯ ಸಂಪನ್ಮೂಲ ಕೇಂದ್ರದಲ್ಲಿ ಉಚಿತ ಕಂಪ್ಯೂಟರ್ ತರಬೇತಿ ವಿದ್ಯಾರ್ಥಿಗಳಿಗೆ ವೆಲ್ಕಮ್ ಕಿಟ್ ವಿತರಣೆ.

ಮೈಸೂರು:- ನಗರದ ಚಾಮರಾಜ ಜೋಡಿ ರಸ್ತೆದಲ್ಲಿರುವ ಸಮರ್ಥನಂ ಅಂಗವಿಕಲರ ಸಂಸ್ಥೆಯ ಜೀವನೋಪಾಯ ಸಂಪನ್ಮೂಲ ಕೇಂದ್ರದಲ್ಲಿ ಉಚಿತ ಕಂಪ್ಯೂಟರ್ ತರಬೇತಿ ಪಡೆಯುತ್ತಿರುವ ಹೊಸ ಬ್ಯಾಚ್‌ನ ತರಬೇತಿದಾರರಿಗೆ ವೆಲ್ಕಮ್ ಕಿಟ್ (ಸ್ವಾಗತ ಕಿಟ್) ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾದ ಡಾ. ಪಿ.ವಿ. ನಾಗರಾಜು ಅವರು ಉದ್ಘಾಟಿಸಿ ಮಾತನಾಡಿದರು. ಅವರು, “ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ನಾವು ಎಷ್ಟೇ ಓದಿ ಪದವಿಗಳನ್ನು ಪಡೆದರೂ, ಕಂಪ್ಯೂಟರ್ ಜ್ಞಾನ ಇಲ್ಲದಿದ್ದರೆ ಅದು ಅನಕ್ಷರತೆಗೆ ಸಮಾನವಾಗಿದೆ. ಔಪಚಾರಿಕ ಶಿಕ್ಷಣದ ಜೊತೆಗೆ ತಾಂತ್ರಿಕ ಶಿಕ್ಷಣವನ್ನು ಪಡೆದುಕೊಂಡರೆ ಮಾತ್ರ ಉತ್ತಮ ಉದ್ಯೋಗಾವಕಾಶಗಳನ್ನು ಪಡೆದುಕೊಳ್ಳಲು ಸಾಧ್ಯ” ಎಂದು ಹೇಳಿದರು. ವಿಶೇಷವಾಗಿ ಮಹಿಳೆಯರಿಗೆ ಕಂಪ್ಯೂಟರ್ ತರಬೇತಿ ಸ್ವಾವಲಂಬನೆಯತ್ತ ಸಾಗಲು ಬಹಳ ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಸಮರ್ಥನಂ ಅಂಗವಿಕಲರ ಸಂಸ್ಥೆಯ ಮೈಸೂರು ವಿಭಾಗದ ಮುಖ್ಯಸ್ಥರಾದ ಶಿವರಾಜು ಮಾತನಾಡಿ, ಜೀವನೋಪಾಯ ಸಂಪನ್ಮೂಲ ಕೇಂದ್ರದಲ್ಲಿ ಲಭ್ಯವಿರುವ ಉಚಿತ ತರಬೇತಿ ಹಾಗೂ ಸೌಲಭ್ಯಗಳನ್ನು ತರಬೇತಿದಾರರು ಸಂಪೂರ್ಣವಾಗಿ ಬಳಸಿಕೊಳ್ಳಬೇಕು ಎಂದು ತಿಳಿಸಿದರು. ಜೊತೆಗೆ, ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳಲು ಉತ್ತಮ ಗುಣಗಳು, ಶಿಸ್ತು ಹಾಗೂ ಆತ್ಮವಿಶ್ವಾಸ ಅಗತ್ಯವೆಂದು ತಿಳಿಸಿ, ಇಂದಿನ ಡಿಜಿಟಲ್ ಯುಗದಲ್ಲಿ ಕಂಪ್ಯೂಟರ್ ಶಿಕ್ಷಣದ ಮಹತ್ವವನ್ನು ವಿವರಿಸಿದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಉದ್ಯೋಗಾಧಿಕಾರಿ ಆರ್. ಸುಬ್ರಮಣಿ, ಶಿಕ್ಷಕರಾದ ಸ್ಪರ್ಶ, ಎಸ್. ಲತಾ, ಅಜಯಕುಮಾರ್, ಲಕ್ಷ್ಮಿ ಹೇಮಲತಾ ಸೇರಿದಂತೆ ಇನ್ನಿತರ ಸಿಬ್ಬಂದಿ ಹಾಗೂ ತರಬೇತಿದಾರರು ಭಾಗವಹಿಸಿದ್ದರು. ಕಾರ್ಯಕ್ರಮವು ಸೌಹಾರ್ದಯುತ ವಾತಾವರಣದಲ್ಲಿ ಯಶಸ್ವಿಯಾಗಿ ನಡೆಯಿತು.