HOMENews

ಮಧ್ಯ ಪ್ರಾಚ್ಯದಲ್ಲಿ ನಡೆಯುತ್ತಿರುವುದು ಯುದ್ಧ ಅಂತ್ಯವಾಗಿ ವಿಶ್ವದಲ್ಲಿ ಶಾಂತಿ ನೆಲೆಸಲಿ : ಮಾಜಿ ಶಾಸಕ ಎಂ.ಕೆ.ಸೋಮಶೇಖರ್

ಮೈಸೂರು: ಮಧ್ಯ ಪ್ರಾಚ್ಯದಲ್ಲಿ ನಡೆಯುತ್ತಿರುವುದು ಯುದ್ಧ ಅಂತ್ಯವಾಗಿ ವಿಶ್ವದಲ್ಲಿ ಶಾಂತಿ ನೆಲೆಸಲಿ ಎಂದು ಎಂದು ಒತ್ತಾಯಿಸಿ ಜನಸ್ಪಂದನ ಟ್ರಸ್ಟ್ ಹಾಗೂ ವಿವಿಧ ಸಂಘಟನೆಗಳ ಸಹಭಾಗಿತ್ವದಲ್ಲಿ ಶಾಂತಿ ಸಂದೇಶ ಕಾರ್ಯಕ್ರಮ ನಡೆಸಲಾಯಿತು.

ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ನೇತೃತ್ವದಲ್ಲಿ ನಗರದ ರಾಮಸ್ವಾಮಿ ವೃತ್ತದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಂತಿ ಸಂದೇಶ ಸಾರಲಾಯಿತು. ಈ ವೇಳೆ ಮಾತನಾಡಿದ ಎಂ.ಕೆ.ಸೋಮಶೇಖರ್, ಲಕ್ಷಾಂತರ ವರ್ಷಗಳ ಶ್ರಮದಿಂದ ಮನುಷ್ಯ ವಿಕಾಸ ಹೊಂದಿದ್ದಾನೆ. ಆದರೆ, ಯುದ್ಧದ ಮೂಲಕ ಮತ್ತೆ ಮನುಷ್ಯ ಸರ್ವನಾಶವಾಗುತ್ತಿದ್ದಾನೆ. ಕಳೆದ ಕೆಲವು ದಿನಗಳಿಂದ ಇರಾನ್, ಇಸ್ರೇಲ್, ಅಮೇರಿಕಾದಂತಹ ರಾಷ್ಟ್ರಗಳ ನಡುವೆ ನಡೆಯುತ್ತಿರುವ ಯುದ್ಧದ ದುಷ್ಪರಿಣಾಮ ಜಗತ್ತಿನ ಮೂಲೆ ಮೂಲೆಗೂ ತಲುಪುತ್ತಿದೆ. ಶಾಂತಿ ಸಾಮರಸ್ಯ ಸಮಾಜದ ಕೀಲಿ ಕೈ ಇದ್ದಂತೆ. ಶಾಂತಿ ನೆಲೆಗೊಂಡರೆ ಮಾತ್ರ ಪ್ರತಿಯೊಂದು ದೇಶವೂ ಸಹೋದರತ್ವದಿಂದ ಇರಲು ಹಾಗೂ ನಾಗರಿಕರಾದ ನಾವು ಸುಸ್ಥಿರ ಜೀವನ ನೆಡೆಸಲು ಸಾಧ್ಯವೇ ಹೊರತು ಯುದ್ಧ ಮತ್ತು ಹಿಂಸಾಚಾರದಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಇತಿಹಾಸದ ಪುಟತೆರೆದು ನೋಡಿದಾಗ ವಿಶ್ವ ಅನೇಕ ಯುದ್ಧ, ಹಿಂಸಾಚಾರ ಚಟುವಟಿಕೆಗಳಿಂದ ನಲುಗಿ ಹೋಗಿದೆ. ಅದರಲ್ಲೂ ವಿಶ್ವ ಯುದ್ಧದ ಸಂದರ್ಭದಲ್ಲಿ ಶಾಂತಿ ಇರಲಿಲ್ಲ. ಇಂದಿಗೂ ಸಹ ಪ್ರಪಂಚದ ಒಂದಷ್ಟು ಭಾಗಗಳಲ್ಲಿ ಆಂತರಿಕ ಬಾಹ್ಯ ಸಂಘರ್ಷಗಳು, ಹಿಂಸಾಚಾರಗಳು ನಿರಂತರವಾಗಿ ನಡೆಯುತ್ತಲೇ ಇವೆ. ನಾಗರಿಕರ ಆಸ್ತಿ ಪಾಸ್ತಿಗೆ ಬೆಲೆ ಇಲ್ಲವೇ? ನಾಗರಿಕರ ಬದುಕಿಗೆ ಬೆಲೆ ಇಲ್ಲವೇ? ಮಾನವೀಯತೆಗಿಂತ ಬೇರೆ ಯಾವುದೂ ದೊಡ್ಡದಲ್ಲ ಎಂದರು.

ಮಧ್ಯ ಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ತೈಲ, ಇಂಧನ ಸೇರಿದಂತೆ ಜವಳಿ ಕೈಗಾರಿಕೆ, ಗಣಿಗಾರಿಕೆ, ಉಕ್ಕು ಸೇರಿದಂತೆ ಹಲವು ಕೈಗಾರಿಕೆಗಳ ಮೇಲೆ ಪರಿಣಾಮ ಬೀರಿದೆ. ಹೀಗಾಗಿ ಇದ್ದಷ್ಟೂ ಉತ್ಪನ್ನಗಳ ಬೆಲೆ ಗಗನಕ್ಕೇರಿದೆ. ಈಗಾಗಲೇ ಇಂಧನ ಎಲ್‌ಪಿಜಿ ಸಿಲಿಂಡರ್ ಬೆಲೆ ಎಲ್ಲವೂ ಹೆಚ್ಚಾಗಿದ್ದು ಇದರ ಪರಿಣಾಮ ಬೇರೆ ಕೈಗಾರಿಕೆಗಳ ಮೇಲೆ ಬೀರಿದೆ. ಯುದ್ಧಗಳು ದೇಶಗಳ ಪ್ರಗತಿಗೆ ಮಾರಕ. ಯಾವುದೇ ದೇಶಕ್ಕೆ ಯುದ್ಧ ಅನಿವಾರ್ಯವಾಗಬಾರದು. ಜಾಗತೀಕರಣದ ವೈಫಲ್ಯಕ್ಕೆ ಸಾರ್ವಜನಿಕರು ಬಲಿಯಾಗುತ್ತಿದ್ದಾರೆ. ರಾಷ್ಟ್ರಗಳ ನಡುವಿನ ಸಂಘರ್ಷಗಳು ಸಾಮಾನ್ಯ ಜನರ ಜೀವನದ ಮೇಲೆ ತೀವ್ರ ಪರಿಣಾಮ ಬೀರುತ್ತಿವೆ. ಯುದ್ಧದ ಭೀಕರತೆ, ಮಾನವ ಜೀವಹಾನಿ, ಆರ್ಥಿಕ ನಷ್ಟ ತಡೆದು ಜಾಗತಿಕ ಸೌಹಾರ್ದತೆ ನಿರ್ಮಾಣ ಮಾಡಬೇಕಿದೆ. ಯುದ್ಧ ಬೇಡ ಶಾಂತಿ ಬೇಕು ಎಂಬ ಘೋಷ ವಾಕ್ಯದಂತೆ ದೇಶಗಳ ನಡುವಿನ ಭಿನ್ನಾಭಿಪ್ರಾಯವನ್ನು ಸಂವಾದ ಮತ್ತು ಸಹಕಾರದ ಮೂಲಕ ಬಗೆಹರಿಸಿಕೊಳ್ಳಲು ಮುಂದಾಗಬೇಕಿದೆ. ಹೀಗಾಗಿ ಯುದ್ಧಗಳು ನಿಲ್ಲಬೇಕು ಶಾಂತಿ ನೆಲೆಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಾಮಾಜಿಕ ಹೋರಾಟಗಾರ ಪ್ರೊ.ಕಾಳಚನ್ನೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಜಿ.ಸೋಮಶೇಖರ್, ಶ್ರೀಧರ್, ಮಾಜಿ ಸೆನೆಟ್ ಸದಸ್ಯ ಗೋಪಿನಾಥ್, ಮಾಜಿ ಮೇಯರ್ ಟಿ.ಬಿ.ಚಿಕ್ಕಣ್ಣ, ಮಾಜಿ ನಗರಪಾಲಿಕೆ ಸದಸ್ಯರಾದ ಜೆ.ಗೋಪಿ, ಎಂ.ಸುನೀಲ್, ಅನಂತ್, ಆರ್.ಹೆಚ್.ಕುಮಾರ್, ಮೈಸೂರು ಕನ್ನಡ ವೇದಿಕೆ ಅಧ್ಯಕ್ಷ ಬಾಲಕೃಷ್ಣ, ಸಾಗರೋತ್ತರ ಕನ್ನಡ ಸಂಘದ ರವಿ, ಜೈ ಭಾರತ್ ಸಂಘಟನೆಯ ಅಧ್ಯಕ್ಷ ಕಲೀಂ ಷರೀಫ್, ಮುಖಂಡರಾದ ಜೋಗಿ ಮಹೇಶ್, ಪಟಾಕಿ ಮಂಜುನಾಥ್, ಹೇಮಂತ್, ಪುಟ್ಟಣ್ಣ, ರಾಮ್, ಉಪಾಧ್ಯಕ್ಷ ಪುಟ್ಟಸ್ವಾಮಿ, ಜಗನ್ನಾಥ್ ಭೋವಿ, ಇಂದಿರಾ ಪವನ್   ಸೇರಿದಂತೆ ಹಲವರು ಭಾಗವಹಿಸಿದ್ದರು.

Leave a Reply