HOMENews

ಮಹಿಳಾ ದಿನಾಚರಣೆ ಅಂಗವಾಗಿ ರಾಜಮಾತೆ ಕೆಂಪನಂಜಮಣಿ ಸ್ಮರಣೆ ವೀರ ಸಾವರ್ಕರ್ ಯುವ ಬಳಗದಿಂದ ಕಾರ್ಯಕ್ರಮ

ಮೈಸೂರು, ಮಾ.09: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ವೀರ ಸಾವರ್ಕರ್ ಯುವ ಬಳಗದ ವತಿಯಿಂದ ನಗರದ ದಿವಾನ್ಸ್ ರಸ್ತೆಯಲ್ಲಿರುವ ಖಾಸಗಿ ಹೋಟೆಲ್ನಲ್ಲಿ ಸೋಮವಾರ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಿ ಮೈಸೂರಿನ ರಾಜಮಾತೆ ಕೆಂಪನಂಜಮಣಿ ಅವರ ಸೇವೆಯನ್ನು ಸ್ಮರಿಸಲಾಯಿತು.
ಕಾರ್ಯಕ್ರಮದ ಆರಂಭದಲ್ಲಿ ಭಾರತ್ ಮಾತೆ ಹಾಗೂ ರಾಜಮಾತೆ ಕೆಂಪನಂಜಮಣಿ ಅವರ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಲಾಯಿತು. ನಂತರ ಮಾತನಾಡಿದ ಬಿಜೆಪಿ ಸಹ ಪ್ರಭಾರಿಗಳಾದ ಡಾ. ಈ.ಸಿ. ನಿಂಗರಾಜ್ ಗೌಡ ಅವರು, ಮೈಸೂರು ನಗರ ಮತ್ತು ರಾಜ್ಯದ ಅಭಿವೃದ್ಧಿಗೆ ರಾಜಮಾತೆ ಕೆಂಪನಂಜಮಣಿ ನೀಡಿದ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು.


ಕೆ.ಆರ್.ಎಸ್. ಅಣೆಕಟ್ಟು ನಿರ್ಮಾಣದ ವೇಳೆ ಹಣಕಾಸಿನ ಕೊರತೆ ಎದುರಾದಾಗ ತಮ್ಮ ಮೈಮೇಲಿದ್ದ ಅಮೂಲ್ಯ ಒಡವೆಗಳನ್ನು ಮಾರಾಟ ಮಾಡಿ ಅಣೆಕಟ್ಟು ನಿರ್ಮಾಣ ಪೂರ್ಣಗೊಳ್ಳಲು ಸಹಾಯ ಮಾಡಿದ ರಾಜಮಾತೆಯ ತ್ಯಾಗವು ಇತಿಹಾಸದಲ್ಲಿ ಅಮರವಾಗಿದೆ ಎಂದು ಅವರು ಹೇಳಿದರು. ಇಂತಹ ತ್ಯಾಗಮಯ ನಾಯಕಿಯರನ್ನು ಸ್ಮರಿಸುವುದು ಸಮಾಜದ ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಮೈಸೂರು ರಾಜ್ಯದ ಅಭಿವೃದ್ಧಿಯಲ್ಲಿ ರಾಜಮಾತೆ ಮಹತ್ವದ ಪಾತ್ರ ವಹಿಸಿದ್ದರು. ಮೈಸೂರು ನಗರದ ವಿಸ್ತರಣೆ, ಪೈಪ್ಗಳ ಮೂಲಕ ನೀರು ಸರಬರಾಜು ವ್ಯವಸ್ಥೆ, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಶಂಕುಸ್ಥಾಪನೆ, ಶಿವನಸಮುದ್ರದಲ್ಲಿ ದೇಶದಲ್ಲೇ ಮೊದಲ ಬಾರಿಗೆ ವಿದ್ಯುತ್ ಉತ್ಪಾದನೆ ಆರಂಭಿಸುವಂತಹ ಹಲವು ಮಹತ್ವದ ಯೋಜನೆಗಳಿಗೆ ಅವರ ಪ್ರೋತ್ಸಾಹ ದೊರೆತಿತ್ತು ಎಂದು ಅವರು ತಿಳಿಸಿದರು.

ಇದಲ್ಲದೆ ರೈತರ ಅನುಕೂಲಕ್ಕಾಗಿ ಚಿತ್ರದುರ್ಗ ಜಿಲ್ಲೆಯ ಮಾರಿಕಣಿವೆ ಅಣೆಕಟ್ಟು ನಿರ್ಮಾಣಕ್ಕೆ ಸಹಕಾರ ನೀಡಿದರೆ, ಮಹಿಳೆಯರ ಶಿಕ್ಷಣಾಭಿವೃದ್ಧಿಗಾಗಿ ಮಹಾರಾಣಿ ಕಾಲೇಜು ಸ್ಥಾಪನೆಗೂ ಉತ್ತೇಜನ ನೀಡಿದರು. ಬೆಂಗಳೂರಿನಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಸ್ಥಾಪನೆಗೆ ಸಹ ಅವರ ಆಶ್ರಯ ದೊರೆತಿದ್ದು, ಇವುಗಳು ಅವರ ದೂರದೃಷ್ಟಿ ಮತ್ತು ಸಮಾಜಮುಖಿ ಚಿಂತನೆಯ ಸಾಕ್ಷಿಗಳಾಗಿವೆ ಎಂದು ಹೇಳಿದರು.

ರಾಜಮಾತೆ ಕೆಂಪನಂಜಮಣಿ ಅವರು ಹಿಂದೂ ಧರ್ಮದ ನಿಷ್ಠಾವಂತ ಅನುಯಾಯಿಯಾಗಿದ್ದು, ಸಮಾಜದ ಪ್ರಗತಿ ಹಾಗೂ ಮಹಿಳೆಯರ ಸಬಲೀಕರಣದ ಕಡೆ ವಿಶೇಷ ಗಮನ ಹರಿಸಿದ್ದರು. ಅವರ ಜೀವನ ಹಾಗೂ ಸೇವೆ ಇಂದಿನ ಮಹಿಳೆಯರಿಗೆ ಪ್ರೇರಣೆಯಾಗಿದ್ದು, ಸಮಾಜದಲ್ಲಿ ಮಹಿಳೆಯರು ನಾಯಕತ್ವ ವಹಿಸುವ ದಾರಿಯನ್ನು ಅವರು ತೋರಿಸಿದ್ದಾರೆ ಎಂದು ಡಾ. ನಿಂಗರಾಜ್ ಗೌಡ ಅವರು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಪರಮೇಶ್ ಗೌಡ, ಬಾಲಣ್ಣ, ಸಂದೇಶ್, ಉಮೇಶ್, ಪ್ರಮೋದ್ ಗೌಡ, ಭೈರಪ್ಪ, ಗಂಗಣ್ಣ, ಗೋಪಾಲ್, ಅಶ್ವಥ್, ಜಯಪ್ಪ, ಕೆ.ಎನ್. ಸಂತೋಷ್, ಮಂಜುನಾಥ್ ಎಸ್. ಗೌಡ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.


ಅದೇ ರೀತಿ ಕೋಆಪರೇಟಿವ್ ಬ್ಯಾಂಕ್ ನಿರ್ದೇಶಕರಾದ ವಸಂತ ಮನೀಶ್, ಚಂದ್ರಕಲಾ, ರಶ್ಮಿ, ಮಧು, ಗೀತಾ, ಒಕ್ಕಲಿಗರ ಸಂಘದ ನಿರ್ದೇಶಕರಾದ ಚೇತನ್ ಗೌಡ, ಪ್ರವೀಣ್, ರಾಜಣ್ಣ, ವಿಜಯ್, ಅಭಿ, ವಿನೋದ್, ವಿ.ಎಸ್. ಕಿರಣ್, ಬ್ರಹ್ಮಚಾರ್, ಯೋಗೇಶ್, ನಾಗೇಶ್, ಅನೋಜ್, ರಾಜೇಶ್, ಮೋಹಿತ್ ಗೌಡ, ಚೇತನ್ ಗೌಡ, ಟಿ.ಎಸ್. ಅರುಣ್, ವಿನೋದ್ ಅರಸ್, ಮಂಜುನಾಥ್, ಮೋಹನ್ ಹಾಗೂ ಇನ್ನಿತರ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ರಾಜಮಾತೆ ಕೆಂಪನಂಜಮಣಿ ಅವರ ಸೇವೆಯನ್ನು ಸ್ಮರಿಸಿ ಮಹಿಳಾ ಸಬಲೀಕರಣದ ಮಹತ್ವದ ಕುರಿತು ಮಾತನಾಡಿ, ಸಮಾಜದಲ್ಲಿ ಮಹಿಳೆಯರಿಗೆ ಸಮಾನ ಅವಕಾಶಗಳು ಸಿಗುವಂತೆ ಕಾರ್ಯನಿರ್ವಹಿಸಬೇಕೆಂಬ ಸಂದೇಶವನ್ನು ನೀಡಲಾಯಿತು.

Leave a Reply