
ಕೆ.ಆರ್.ನಗರ, ಸಾಲಿಗ್ರಾಮದಲ್ಲಿ ಎಸ್‌ಎಸ್‌ಎಲ್‌ಸಿ ಸಜ್ಜು: 11 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ
ವರದಿ:-ವಡ್ಡರಕೊಪ್ಪಲು ಶಿವರಾಮು.
ಕೆ.ಆರ್.ನಗರ :- ಮಾರ್ಚ್ 18 ರಿಂದ ಏಪ್ರಿಲ್ 2ರವರೆಗೆ ನಡೆಯುವ ಎಸ್ ಎಸ್ ಎಲ್ ಸಿ ವಾರ್ಷಿಕ ಪರೀಕ್ಷೆಗೆ ಸಾಲಿಗ್ರಾಮ ಮತ್ತು ಕೆ.ಆರ್.ನಗರ ತಾಲೂಕುಗಳಿಂದ ಒಟ್ಟು 2979 ವಿದ್ಯಾರ್ಥಿಗಳು ಹಾಜರಾಗಲು ಹೆಸರು ನೊಂದಾಯಿಸಿಕೊಂಡಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಕೃಷ್ಣಪ್ಪ ಹೇಳಿದರು.
ಪಟ್ಟಣದ ಶ್ರೀ ಕೃಷ್ಣ ರಾಜೇಂದ್ರ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ಪರೀಕ್ಷಾ ಸಿಬ್ಬಂದಿ ಸಭೆ ನಡೆಸಿ ವಿದ್ಯಾರ್ಥಿಗಳ ನೋಂದಣಿ ದಾಖಲಿಸಿ ಮಾತನಾಡಿದ ಅವರು 1348 ಮಂದಿ ಬಾಲಕರು 1340 ಮಂದಿ ಬಾಲಕಿಯರೊಂದಿಗೆ 40 ವಿಶೇಷ ಅಗತ್ಯವುಳ್ಳ ವಿದ್ಯಾರ್ಥಿಗಳೊಂದಿಗೆ ಮರುಪರೀಕ್ಷೆ ಬರೆಯುವ 161 ಬಾಲಕರು ಮತ್ತು 131 ವಿದ್ಯಾರ್ಥಿನಿಯರು ಹಾಜರಾಗುವರು ಎಂದರು.
ಎರಡು ತಾಲೂಕಿನ ವ್ಯಾಪ್ತಿಯಲ್ಲಿ 11 ಪರೀಕ್ಷಾ ಕೆಂದ್ರಗಳನ್ನು ತೆರೆಯಲಾಗಿದ್ದು ಕೆ.ಆರ್.ನಗರ ಪಟ್ಟಣದ ಶ್ರೀಕೃಷ್ಣರಾಜೇಂದ್ರ ಬಾಲಕರಪದವಿ ಪೂರ್ವ ಕಾಲೇಜು, ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು, ಸಂತ ಅಂತೋಣಿಯವರ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಹೆಬ್ಬಾಳು ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆ, ಹಂಪಾಪುರ ಸರ್ಕಾರಿ ಪ್ರೌಢಶಾಲೆ, ಗಂಧನಹಳ್ಳಿ ಸರ್ಕಾರಿ ಪ್ರೌಢಶಾಲೆ ಮತ್ತು ಸಾಲಿಗ್ರಾಮ ತಾಲೂಕಿನ ಭೇರ್ಯ ಸರ್ಕಾರಿ ಪ್ರೌಢಶಾಲೆ, ಚುಂಚನಕಟ್ಟೆ ಆದಿಚುಂಚನಗಿರಿ ಬಾಲಜಗತ್, ದೊಡ್ಡಹನಸೋಗೆ ಸರ್ಕಾರಿ ಪ್ರೌಢಶಾಲೆ ಮಿರ್ಲೆ ಸರ್ಕಾರಿ ಪ್ರೌಢಶಾಲೆ ಮತ್ತು ಸಾಲಿಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪರೀಕ್ಷಾ ಕೇಂದ್ರಗಳನ್ನು ನಿಗಧಿ ಮಾಡಲಾಗಿದೆ ಎಂದು ತಿಳಿಸಿದರು.

ಪ್ರತಿ ಪರೀಕ್ಷಾ ಕೇಂದ್ರ ಗಳಲ್ಲಿ 24 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿದ್ದು ಆ ಕೇಂದ್ರಗಳಿಗೆ ಮೇಲ್ವಿಚಾರಕರನ್ನು ನೇಮಕ ಮಾಡಲಾಗಿದ್ದು ಅವರೊಂದಿಗೆ ಕಚೇರಿ ಸಹಾಯಕರು, ಪೊಲೀಸ್ ಸಿಬ್ಬಂದಿ, ಡಿ.ದರ್ಜೆ ನೌಕರರು, ಕುಡಿಯುವ ನೀರು ಸರಬರಾಜು ಇರುವರು ಎಂದರು ಮಾಹಿತಿ ನೀಡಿದರು.
ಪರೀಕ್ಷಾ ಕಾರ್ಯಗಳು ಸುಸೂತ್ರವಾಗಿ ನಡೆಯುವಂತೆ ನೋಡಿಕೊಳ್ಳಲು ಮುಖ್ಯ ಅಧೀಕ್ಷಕರು, ಉಪ ಅಧೀಕ್ಷಕರು, ಪ್ರಶ್ನೆ ಪತ್ರಿಕೆ ಅಭಿರಕ್ಷಕರು, ಸ್ಥಾನಿಕಜಾಗೃತ ದಳ, ಮೊಬೈಲ್ ಸ್ವಾಧೀನಾಧಿಕಾರಿ ಸೇರಿದಂತೆ ಇತರ ಅಗತ್ಯ ಸಿಬ್ಬಂದಿಯನ್ನು ನೇಮಕ ಮಾಡಲಾಗಿದ್ದು ಪಾರದರ್ಶಕವಾಗಿ ಪರೀಕ್ಷೆ ನಡೆಸುವ ಉದ್ದೇಶದಿಂದ ಪ್ರತಿ ಕೇಂದ್ರದ ಲ್ಲಿಯೂ ಸಿಸಿ ಕ್ಯಾಮರ ಅಳವಡಿಸಲಾಗಿದೆ ಎಂದು ನುಡಿದರು.
ಬೆಳಿಗ್ಗೆ 10 ಗಂಟೆಗೆ ಪರೀಕ್ಷೆ ಆರಂಭವಾಗಲಿದ್ದು 15 ನಿಮಿಷಗಳು ಪ್ರಶ್ನೆಪತ್ರಿಕೆ ಓದಿಕೊಳ್ಳಲು ವಿದ್ಯಾರ್ಥಿಗಳಿಗೆ ನಿಗಧಿ ಪಡಿಸಲಾಗಿದ್ದು ಆನಂತರ 1.15 ರವರೆಗೆ ಪ್ರಶ್ನೆಗಳಿಗೆ ಉತ್ತರಿಸಲು ಸಮಯಾವಕಾಶ ನಿಗಧಿ ಪಡಿಸಲಾಗಿದ್ದು ಪರೀಕ್ಷೆಗೆ ಹಾಜರಾಗುವವರು ಯಾವುದೇ ಗೊಂದಲಕ್ಕೀಡಾಗದೆ ಶಾಂತ ರೀತಿಯಲ್ಲಿ ಎಲ್ಲಾ ವಿಷಯವಾರು ಪರೀಕ್ಷೆಗಳನ್ನು ಎದುರಿಸಬೇಕು ಎಂದು ಸಲಹೆ ನೀಡಿದರು.
ಪರೀಕ್ಷಾ ಕಾರ್ಯಕ್ಕೆ 220 ಮೇಲ್ವಿಚಾರಕರು ಮತ್ತು 75 ಹೆಚ್ಚುವರಿ ಸಹಾಯಕರನ್ನು ನೇಮಕ ಮಾಡಿಕೊಂಡಿದ್ದು ಇದರೊಂದಿಗೆ ತಹಶೀಲ್ದಾರರು, ತಾ.ಪಂ.ಇಒ ಮತ್ತು ತಮ್ಮನ್ನೊಳಗೊಂಡಂತೆ ಸಂಚಾರಿ ಗಸ್ತು ಪಡೆ ಕಾರ್ಯನಿರ್ವಹಿಸಲಿದ್ದು ಸರ್ಕಾರದ ಆದೇಶದಂತೆ ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸಲು ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳು ಪ್ರಕಟಿಸಿದರು.
ಮುಖ್ಯ ಅಧೀಕ್ಷ ಕೆ.ಸಿ.ಮಧು, ಉಪ ಮುಖ್ಯ ಅಧೀಕ್ಷಕ ಕೆ.ಸಿ.ಪ್ರಕಾಶ್, ಪ್ರಶ್ನೆ ಪತ್ರಿಕೆ ಪಾಲಕ ಆರ್.ಕೃಷ್ಣ, ದೈಹಿಕ ಶಿಕ್ಷಣ ಪರಿವೀಕ್ಷಕ ಎಂ.ಬಿ.ಕುಮಾರಸ್ವಾಮಿ, ಪರೀಕ್ಷಾ ನೋಡಲ್ ಅಧಿಕಾರಿ ಪೂರ್ಣಿಮ ಮತ್ತಿತರರು ಇದ್ದರು. ಪಟ್ಟಣದ ಶ್ರೀ ಕೃಷ್ಣ ರಾಜೇಂದ್ರ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ಪರೀಕ್ಷಾ ಸಿಬ್ಬಂದಿಯೊಂದಿಗೆ ಬಿ.ಇ.ಒ ಆರ್. ಕೃಷ್ಣಪ್ಪ ಸಭೆ ನಡೆಸಿ ಕೊಠಡಿ ಪರಿಶೀಲನೆ ನಡೆಸಿದರು.





