HOMENews

50 ಕೆಜಿ ಚಿನ್ನ ಸಾಗಣೆ ಸಂಚು ಬಯಲು – ಉಗಾಂಡಾ ಏಜೆಂಟ್ ಜೊತೆ ಡೀಲಿಂಗ್ ಮಾಡಿದ ರನ್ಯಾ ರಾವ್?

ಬೆಂಗಳೂರು:- ಬಹು ಕೋಟಿ ಮೌಲ್ಯದ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಹೊಸ ತಿರುವು ಕಂಡುಬಂದಿದ್ದು, ನಟಿ ರನ್ಯಾ ರಾವ್ ಅವರು ಉಗಾಂಡಾ ಮೂಲದ ಏಜೆಂಟ್ ಜೊತೆ ದೊಡ್ಡ ಮಟ್ಟದ ಡೀಲಿಂಗ್ ನಡೆಸಿದ್ದ ಸಂಗತಿ ತನಿಖೆಯಲ್ಲಿ ಬಹಿರಂಗವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ Enforcement Directorate (ಇ.ಡಿ) ಬುಧವಾರ ನ್ಯಾಯಾಲಯಕ್ಕೆ ಸಲ್ಲಿಸಿದ ಸುದೀರ್ಘ ಚಾರ್ಜ್‌ಶೀಟ್‌ನಲ್ಲಿ ಈ ಮಾಹಿತಿ ಉಲ್ಲೇಖಿಸಲಾಗಿದೆ.

ತನಿಖಾ ವಿವರಗಳ ಪ್ರಕಾರ, ಸುಮಾರು 102.55 ಕೋಟಿ ರೂ. ಮೌಲ್ಯದ ಚಿನ್ನವನ್ನು ಅಕ್ರಮವಾಗಿ ಭಾರತಕ್ಕೆ ಸಾಗಿಸಲು ಸಂಚು ರೂಪಿಸಲಾಗಿತ್ತು. ಆರಂಭದಲ್ಲಿ ಸಣ್ಣ ಪ್ರಮಾಣದಲ್ಲಿ ಚಿನ್ನವನ್ನು ಸಾಗಿಸುವ ಮೂಲಕ ವ್ಯವಸ್ಥೆ ಪರೀಕ್ಷಿಸಿದ ಬಳಿಕ, ದೊಡ್ಡ ಮಟ್ಟದ ಕಳ್ಳಸಾಗಣೆಗೆ ಮುಂದಾಗಿರುವುದು ತಿಳಿದುಬಂದಿದೆ. ಮೊದಲ ಹಂತದಲ್ಲಿ 5 ಕೆಜಿ ಚಿನ್ನವನ್ನು ಪ್ರಯೋಗಾತ್ಮಕವಾಗಿ ಸಾಗಿಸಲು ಯತ್ನಿಸಿದ ತಂಡ, ನಂತರ ಬರೋಬ್ಬರಿ 50 ಕೆಜಿ ಚಿನ್ನ ಸಾಗಿಸಲು ಉಗಾಂಡಾ ಮೂಲದ ಏಜೆಂಟ್ ಜೊತೆ ಒಪ್ಪಂದಕ್ಕೆ ಬಂದಿತ್ತು ಎಂಬುದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖವಾಗಿದೆ.

ಇನ್ನಷ್ಟು ಆತಂಕಕಾರಿ ಸಂಗತಿಯೆಂದರೆ, ಈ ವ್ಯವಹಾರವನ್ನು ಸುಗಮಗೊಳಿಸಲು ದುಬೈನಲ್ಲಿ “ವೀರಾ ಡೈಮಂಡ್ಸ್ ಟ್ರೇಡಿಂಗ್” ಹೆಸರಿನ ಕಂಪನಿಯನ್ನು ಸ್ಥಾಪಿಸಲಾಗಿತ್ತು ಎನ್ನಲಾಗಿದೆ. ಈ ಕಂಪನಿಯ ಮೂಲಕ ಹಣಕಾಸು ವ್ಯವಹಾರಗಳನ್ನು ನಡೆಸಿ, ಚಿನ್ನವನ್ನು ವಿವಿಧ ಮಾರ್ಗಗಳಲ್ಲಿ ಭಾರತಕ್ಕೆ ತರುವ ಯೋಜನೆ ರೂಪಿಸಲಾಗಿತ್ತು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಚಿನ್ನ ಖರೀದಿಗೆ ಮುಂಗಡವಾಗಿ ಸುಮಾರು 33 ಲಕ್ಷ ರೂಪಾಯಿ ಪಾವತಿಸಲಾಗಿತ್ತು. ಬಳಿಕ 2024ರ ಜನವರಿಯಲ್ಲಿ ‘ರಾಜು’ ಎಂಬಾತ ಉಗಾಂಡಾದ ರಾಜಧಾನಿ ಕಂಪಾಲಾಗೆ ತೆರಳಿ ಚಿನ್ನ ತರಲು ಪ್ರಯತ್ನಿಸಿದ್ದಾನೆ. ಈ ವೇಳೆ ಅಲ್ಲಿನ ಏಜೆಂಟ್ ಹೆಚ್ಚುವರಿಯಾಗಿ ಸುಮಾರು 1.7 ಕೋಟಿ ರೂಪಾಯಿ ಬೇಡಿಕೆ ಇಟ್ಟಿದ್ದಾನೆ ಎಂದು ತಿಳಿದುಬಂದಿದೆ. ಈ ಹಣವನ್ನು ದುಬೈ ಮೂಲದ ಸಂಪರ್ಕದ ಮೂಲಕ ಪಾವತಿಸಲು ಒಪ್ಪಂದವಾಗಿದ್ದರೂ, ಕೊನೆಗೆ ವ್ಯವಹಾರದಲ್ಲಿ ಗೊಂದಲ ಉಂಟಾಗಿ ವಂಚನೆ ನಡೆದಿದೆ ಎಂಬ ಅನುಮಾನ ವ್ಯಕ್ತವಾಗಿದೆ.

ತನಿಖೆಯ ವೇಳೆ, ಈ ಅಕ್ರಮ ಜಾಲವು ಕೇವಲ ದುಬೈಗೆ ಸೀಮಿತವಾಗಿರದೆ, ಆಫ್ರಿಕಾದ ಇತರ ರಾಷ್ಟ್ರಗಳಿಗೂ ವ್ಯಾಪಿಸಿಕೊಂಡಿರುವ ಸಾಧ್ಯತೆಗಳನ್ನೂ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ವಿದೇಶಿ ಏಜೆಂಟರು, ಮಧ್ಯವರ್ತಿಗಳು ಹಾಗೂ ಹಣಕಾಸು ಮಾರ್ಗಗಳ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಲಾಗುತ್ತಿದೆ.

ಈ ಪ್ರಕರಣವು ಚಿನ್ನ ಕಳ್ಳಸಾಗಣೆಯ ಅಂತರರಾಷ್ಟ್ರೀಯ ಜಾಲದ ಗಂಭೀರತೆಯನ್ನು ಮತ್ತೊಮ್ಮೆ ಬಯಲು ಮಾಡಿದ್ದು, ಭವಿಷ್ಯದಲ್ಲಿ ಇಂತಹ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟಲು ಕಾನೂನು ಜಾರಿ ಸಂಸ್ಥೆಗಳು ಕಠಿಣ ಕ್ರಮ ಕೈಗೊಳ್ಳುವ ಸೂಚನೆ ನೀಡಿವೆ.

Leave a Reply