ಜ್ಞಾನವನ್ನು ಸರಿಯಾದ ಸಮಯದಲ್ಲಿ ಅಳವಡಿಸಿಕೊಂಡರೆ ಮಾತ್ರ ಉನ್ನತ ಸ್ಥಾನ ಸಾಧ್ಯ – ಡಿಸಿಪಿ ಕೆ.ಎಸ್. ಸುಂದರ್ ರಾಜು

ಜ್ಞಾನ ಎಂಬುದು ಯಾರ ಸ್ವತ್ತಲ್ಲ ಅದನ್ನು ಸರಿಯಾದ ಸಮಯದಲ್ಲಿ ಅಳವಡಿಸಿಕೊಂಡರೇ ಮಾತ್ರ ಉನ್ನತ ಸ್ಥಾನ ಕಟ್ಟಿಟ್ಟ ಬುತ್ತಿ- ಡಿ.ಸಿ.ಪಿ ಕೆ ಎಸ್ ಸುಂದರ್ ರಾಜು.
ಮೈಸೂರು, ಫೆ.03:-“ಜ್ಞಾನ ಎಂಬುದು ಯಾರ ಸ್ವತ್ತಲ್ಲ. ಅದನ್ನು ಯಾವ ಸಮಯದಲ್ಲಿ, ಹೇಗೆ ಅಳವಡಿಸಿಕೊಳ್ಳುತ್ತೇವೆ ಎಂಬುದೇ ವ್ಯಕ್ತಿಯ ಭವಿಷ್ಯವನ್ನು ನಿರ್ಧರಿಸುತ್ತದೆ. ಸರಿಯಾದ ಸಮಯದಲ್ಲಿ ಜ್ಞಾನವನ್ನು ಬಳಸಿಕೊಂಡರೆ ಉನ್ನತ ಸ್ಥಾನ ಸಾಧಿಸುವುದು ಕಟ್ಟಿಟ್ಟ ಬುತ್ತಿ” ಎಂದು ಮೈಸೂರು ನಗರದ ಡಿಸಿಪಿ ಕೆ.ಎಸ್. ಸುಂದರ್ ರಾಜು ಅವರು ಅಭಿಪ್ರಾಯಪಟ್ಟರು.
ನಗರದ ಲಕ್ಷ್ಮೀಪುರಂ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜಿನ ಆವರಣದಲ್ಲಿರುವ ಜ್ಞಾನಬುತ್ತಿ ಸಂಸ್ಥೆಯಲ್ಲಿ ಮಂಗಳವಾರ (03-02-2026) ಆಯೋಜಿಸಿದ್ದ ಪಿಸಿ/ಪಿಎಸ್ಐ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ 50 ದಿನಗಳ ಉಚಿತ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಸ್ತುತ ದಿನಮಾನಗಳಲ್ಲಿ ಉನ್ನತ ಶಿಕ್ಷಣ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಅನೇಕ ತರಬೇತಿ ಸಂಸ್ಥೆಗಳು ಲಭ್ಯವಿದ್ದರೂ, ಸಾಕಷ್ಟು ವಿದ್ಯಾರ್ಥಿಗಳು ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳದೇ ಪ್ರಯತ್ನದಿಂದ ಹಿಂದೆ ಸರಿಯುತ್ತಿರುವುದು ವಿಷಾದಕರ ಸಂಗತಿಯಾಗಿದೆ ಎಂದು ಹೇಳಿದರು. ಸರ್ಕಾರಿ ಶಾಲೆ ಮತ್ತು ಕಾಲೇಜುಗಳಲ್ಲಿ ಶಿಕ್ಷಣ ಪಡೆದ ಅನೇಕರು ಇಂದು ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದು, ಆಡಳಿತ ವ್ಯವಸ್ಥೆಯ ಪ್ರಮುಖ ಸ್ಥಾನಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬುದನ್ನು ವಿದ್ಯಾರ್ಥಿಗಳು ಗಮನದಲ್ಲಿಟ್ಟುಕೊಳ್ಳಬೇಕು ಎಂದು ತಿಳಿಸಿದರು.
ಪ್ರತಿಯೊಬ್ಬ ಸಾಧಕರ ಹಿಂದೆಯೂ ಅಪಾರ ಪರಿಶ್ರಮ ಮತ್ತು ದೃಢ ಸಂಕಲ್ಪ ಅಡಗಿರುತ್ತದೆ. ಯಾವುದೇ ಗುರಿಯನ್ನು ಸಾಧಿಸಲು ನಿರಂತರ ಅಭ್ಯಾಸ, ಶಿಸ್ತು ಮತ್ತು ಆತ್ಮವಿಶ್ವಾಸ ಅತ್ಯಗತ್ಯ. ಈ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಮಾತ್ರ ಉನ್ನತ ಹುದ್ದೆಗಳನ್ನು ಅಲಂಕರಿಸಲು ಸಾಧ್ಯವಾಗುತ್ತದೆ ಎಂದು ಡಿಸಿಪಿ ಸುಂದರ್ ರಾಜು ಹೇಳಿದರು.
ಯಾವುದೇ ಹುದ್ದೆಗೆ ಸೇರುವ ಬಯಕೆ ಹೊಂದಿರುವ ವಿದ್ಯಾರ್ಥಿಗಳು ತಮ್ಮ ಕೆಲಸದಲ್ಲಿ ಸೇವೆ ಎಂಬ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ನಿಷ್ಠೆಯಿಂದ ಮತ್ತು ಪ್ರಾಮಾಣಿಕವಾಗಿ ಪ್ರತಿದಿನವೂ ಪರಿಶ್ರಮ ಪಟ್ಟರೆ ಯಾವುದೇ ವಿದ್ಯಾರ್ಥಿಯೂ ಪೊಲೀಸ್ ಅಧಿಕಾರಿಯಾಗಬಹುದು ಎಂದು ತಮ್ಮ ಅನುಭವದ ಮಾತುಗಳನ್ನು ಹಂಚಿಕೊಂಡರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮೈಸೂರು ಜಿಲ್ಲಾ ಶಾಲಾ ಶಿಕ್ಷಣ ಉಪ ನಿರ್ದೇಶಕ ಡಿ. ಉದಯ್ ಕುಮಾರ್ ಮಾತನಾಡಿ, ಜ್ಞಾನಬುತ್ತಿ ಸಂಸ್ಥೆ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಯಲ್ಲಿ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿರುವ ಪ್ರಮುಖ ಸಂಸ್ಥೆಯಾಗಿದೆ. ತಾವು ಕೂಡ ಇದೇ ಸಂಸ್ಥೆಯಲ್ಲಿ ವಿದ್ಯಾರ್ಥಿಯಾಗಿ ತರಬೇತಿ ಪಡೆದು ಯಶಸ್ಸು ಕಂಡಿದ್ದಾಗಿ ತಿಳಿಸಿದರು. ವಿದ್ಯಾರ್ಥಿಗಳು ಇಲ್ಲಿ ಲಭ್ಯವಿರುವ ತರಬೇತಿಯನ್ನು ಸಂಪೂರ್ಣವಾಗಿ ಬಳಸಿಕೊಂಡು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮಾಹಿತಿ, ಜ್ಞಾನ ಮತ್ತು ಬುದ್ಧಿವಂತಿಕೆ ಎಂಬ ಮೂರು ಅಂಶಗಳನ್ನು ಓದುವ ಹವ್ಯಾಸದಲ್ಲಿ ಅಳವಡಿಸಿಕೊಂಡರೆ ಅಧಿಕಾರಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಕೇವಲ ಓದುವುದರಿಂದ ಪ್ರಯೋಜನವಿಲ್ಲ, ಪ್ರತಿಯೊಂದು ವಿಷಯವನ್ನೂ ವಿವೇಕಬುದ್ಧಿಯಿಂದ ಅಧ್ಯಯನ ಮಾಡಿದರೆ ಮಾತ್ರ ಪರೀಕ್ಷೆಗಳಲ್ಲಿ ಉತ್ತಮ ಅಂಕ ಗಳಿಸಲು ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಅಖಿಲ ಭಾರತ ವಯಸ್ಕರ ಶಿಕ್ಷಣ ಕೌನ್ಸಿಲ್ನ ನಿರ್ದೇಶಕ ವೈ.ಎನ್. ಶಂಕರೇಗೌಡ ಮಾತನಾಡಿ, ಸಾರ್ವಜನಿಕರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಪ್ರಮುಖ ಇಲಾಖೆಗಳಲ್ಲೊಂದು ಪೊಲೀಸ್ ಇಲಾಖೆ ಎಂದು ಹೇಳಿದರು. ವಿಷಯಗಳನ್ನು ಪಠ್ಯವಾರು ವಿಂಗಡಿಸಿಕೊಂಡು ಅಧ್ಯಯನ ಮಾಡಿದರೆ ಜ್ಞಾನಾರ್ಜನೆ ಸುಲಭವಾಗುತ್ತದೆ. ವಿದ್ಯಾರ್ಥಿಗಳು ಹಿಂಜರಿಕೆತನವನ್ನು ತೊರೆದು ಆತ್ಮವಿಶ್ವಾಸದಿಂದ ಮುಂದೆ ಸಾಗಬೇಕು ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ಹೆಚ್. ಬಾಲಕೃಷ್ಣ, ಪ್ರೊ. ವಿ. ಜಯಪ್ರಕಾಶ್, ಡಾ. ಐಪನಹಳ್ಳಿ ವಸಂತ್ ಕುಮಾರ್, ಡಾ. ಎಸ್.ಬಿ.ಎಂ. ಪ್ರಸನ್ನ, ಕೆ.ವೈ. ನಾಗೇಂದ್ರ, ಕಿರಣ್ ಕೌಶಿಕ್, ಜೈನಹಳ್ಳಿ ಸತ್ಯನಾರಾಯಣ ಗೌಡ, ಡಾ. ಪಳಿನಿ ಸ್ವಾಮಿ ಮೂಡುಗೂರು, ಡಾ. ವಿ. ಕೃಷ್ಣಕುಮಾರ್, ಯು.ಎಂ. ಶರದ್ ರಾವ್, ಎಂ. ರಾಜೀವ್ ಶರ್ಮ ಸೇರಿದಂತೆ ಹಲವರು ಉಪಸ್ಥಿತರಿದ್ದರು.



