
ಜೈಪುರ, ಮಾ. 25: ನಗರದ ಶಿಪ್ರಾ ಪಾತ್ ರಸ್ತೆಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ನಟಿ ಹಾಗೂ ರೂಪದರ್ಶಿ ಹರ್ಷಿಲ್ ಕಾಲಿಯಾ ದುರ್ಮರಣ ಹೊಂದಿರುವ ಘಟನೆ ತೀವ್ರ ದುಃಖಕ್ಕೆ ಕಾರಣವಾಗಿದೆ. ಮಂಗಳವಾರ ತಡರಾತ್ರಿ ಸುಮಾರು 11:30ರ ವೇಳೆಯಲ್ಲಿ ಈ ದುರ್ಘಟನೆ ಸಂಭವಿಸಿದೆ.
ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ಕೆಲಸ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದ ಹರ್ಷಿಲ್ ಕಾಲಿಯಾ ಅವರ ಕಾರು ಏಕಾಏಕಿ ನಿಯಂತ್ರಣ ತಪ್ಪಿ ರಸ್ತೆಯ ಮಧ್ಯದಲ್ಲಿದ್ದ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ಪರಿಣಾಮ ಕಾರು ಪಲ್ಟಿಯಾಗಿ ಎಡಭಾಗಕ್ಕೆ ಉರುಳಿದ್ದು, ವಾಹನವು ಭಾರೀ ಪ್ರಮಾಣದಲ್ಲಿ ಜಖಂಗೊಂಡಿದೆ. ಸಮೀಪದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಈ ಭೀಕರ ದೃಶ್ಯ ಸೆರೆಹಿಡಿಯಲಾಗಿದೆ.

ಅಪಘಾತದ ಶಬ್ದ ಕೇಳಿ ಸ್ಥಳೀಯರು ತಕ್ಷಣ ಸ್ಥಳಕ್ಕೆ ಧಾವಿಸಿ ಕಾರಿನೊಳಗೆ ಸಿಲುಕಿಕೊಂಡಿದ್ದ ಕಾಲಿಯಾಳನ್ನು ಹೊರತೆಗೆದಿದ್ದಾರೆ. ತಕ್ಷಣವೇ ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದರೂ, ತಲೆಗೆ ತೀವ್ರ ಪೆಟ್ಟಾಗಿದ್ದ ಕಾರಣ ಮಾರ್ಗ ಮಧ್ಯೆಯೇ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಅಪಘಾತದ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ ಶವವನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಅಪಘಾತದ ನಿಖರ ಕಾರಣ ತಿಳಿದುಕೊಳ್ಳಲು ತನಿಖೆ ಮುಂದುವರೆಸಿದ್ದಾರೆ. ವೇಗದ ಅತಿರೇಕ ಅಥವಾ ನಿಯಂತ್ರಣ ಕಳೆದುಕೊಳ್ಳುವಿಕೆ ಕಾರಣವಾಗಿರಬಹುದೆಂಬ ಅನುಮಾನ ವ್ಯಕ್ತವಾಗಿದೆ.
ಹರ್ಷಿಲ್ ಕಾಲಿಯಾ ಮನೋರಂಜನಾ ಕ್ಷೇತ್ರದಲ್ಲಿ ಬಹುಮುಖ ಪ್ರತಿಭೆ ಹೊಂದಿದವರಾಗಿದ್ದರು. ಅವರು ‘ಕ್ರೈಮ್ ನೆಕ್ಸ್ಟ್ ಡೋರ್’ ವೆಬ್ ಸರಣಿಯಲ್ಲಿ ಅಭಿನಯಿಸಿದ್ದು, ಸುದ್ದಿ ವಾಹಿನಿಯ ನಿರೂಪಕಿಯಾಗಿಯೂ ಸೇವೆ ಸಲ್ಲಿಸಿದ್ದರು. ಇದಲ್ಲದೆ ಹಲವು ರಾಜಸ್ಥಾನಿ ಹಾಡುಗಳಲ್ಲಿ ಪ್ರಮುಖ ಮಹಿಳಾ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಇತ್ತೀಚಿನ ದಿನಗಳಲ್ಲಿ ಮಾಡೆಲಿಂಗ್ ಕ್ಷೇತ್ರದಲ್ಲೂ ಸಕ್ರಿಯರಾಗಿದ್ದರು.
ಅವರ ಆಕಸ್ಮಿಕ ನಿಧನದಿಂದ ಮನೋರಂಜನಾ ವಲಯದಲ್ಲಿ ಶೋಕದ ಛಾಯೆ ಆವರಿಸಿದೆ. ಅಭಿಮಾನಿಗಳು ಮತ್ತು ಸ್ನೇಹಿತರು ಸಾಮಾಜಿಕ ಜಾಲತಾಣಗಳಲ್ಲಿ ಸಂತಾಪ ಸೂಚಿಸುತ್ತಿದ್ದಾರೆ.
ಕಾಲಿಯಾ ಅವರ ತಂದೆ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಖಾಸಗಿ ಪತ್ರಿಕೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಯುವ ವಯಸ್ಸಿನಲ್ಲೇ ಅವರ ನಿಧನ ಕುಟುಂಬಕ್ಕೆ ಅಸಹನೀಯ ನಷ್ಟವನ್ನುಂಟುಮಾಡಿದೆ.





