ಸುಳ್ಳು ಆರೋಪಗಳ ಸರಮಾಲೆ : ಯದುವೀರ್ ಒಡೆಯರ್ ಪರ ಸಂತೋಷ್ ಕುಮಾರ್ ಬಿ.ಎಂ ಖಂಡನೆ
ಮೈಸೂರು :- ಸಂಸದ ಯದುವೀರ್ ಒಡೆಯರ್ ವಿರುದ್ಧ ಸುಳ್ಳು ಆರೋಪಗಳ ಸರಮಾಲೆ ಕಾಂಗ್ರೆಸ್ ವಕ್ತಾರ ಲಕ್ಷಣ್ ಅವರ ಹತಾಶ ರಾಜಕೀಯದ ಪರಾಕಾಷ್ಠೆ ಸಂತೋಷ್ ಕುಮಾರ್ ಬಿ.ಎಂ ಖಂಡನೆ
ಮೈಸೂರು–ಕೊಡಗು ಸಂಸದರಾದ ಶ್ರೀ ಯದುವೀರ್ ಒಡೆಯರ್ ಅವರ ಹೆಚ್ಚುತ್ತಿರುವ ಜನಪ್ರಿಯತೆ ಮತ್ತು ಜನಪರ ಕಾರ್ಯಶೈಲಿಯನ್ನು ಸಹಿಸಲಾಗದೆ ಕಾಂಗ್ರೆಸ್ ವಕ್ತಾರ ಲಕ್ಷಣ್ ಅವರು ನಡೆಸಿರುವ ಇತ್ತೀಚಿನ ಪತ್ರಿಕಾಗೋಷ್ಠಿ ಸುಳ್ಳು ಆರೋಪಗಳ ಗುಚ್ಛವಾಗಿದ್ದು, ಕಾಂಗ್ರೆಸ್‌ನ ರಾಜಕೀಯ ದಿವಾಳಿತನವನ್ನು ಬಹಿರಂಗಪಡಿಸಿದೆ.
ಎರಡು ವರ್ಷಗಳಲ್ಲಿ ಸಂಸದರು “ಒಂದು ರೂಪಾಯಿಯ ಕೆಲಸವೂ ಮಾಡಿಲ್ಲ” ಎಂಬ ಹೇಳಿಕೆ ವಾಸ್ತವದೊಂದಿಗೆ ಯಾವುದೇ ಸಂಬಂಧವಿಲ್ಲದ ನಿರಾಧಾರ ಆರೋಪವಾಗಿದ್ದು, ಜವಾಬ್ದಾರಿಯುತ ರಾಜಕೀಯ ವಕ್ತಾರನಿಗೆ ಶೋಭೆಯಲ್ಲ.
ಮೈಸೂರು–ಬೆಂಗಳೂರು ದಶಪಥ ಹೆದ್ದಾರಿ ಸೇರಿದಂತೆ ಹಲವು ಪ್ರಮುಖ ಮೂಲಸೌಕರ್ಯ ಯೋಜನೆಗಳು ತಲಮಟ್ಟದಲ್ಲಿ ಕಾರ್ಯಗತವಾಗಿರುವುದು ಜನರಿಗೆ ಸ್ಪಷ್ಟವಾಗಿ ಕಾಣುವ ಸತ್ಯ.
ಈ ಹೆದ್ದಾರಿಯಲ್ಲಿಯೇ ಸಂಚರಿಸಿ ಬೆಂಗಳೂರಿಗೆ ತೆರಳುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈ ಅಭಿವೃದ್ಧಿ ಕಾಣಿಸದಿರುವುದು ಅಚ್ಚರಿಯ ಸಂಗತಿಯಾಗಿದೆ.
ಹಿಂದಿನ ಸಂಸದ ಪ್ರತಾಪ್ ಸಿಂಹ ಅವರ ಅವಧಿಯಲ್ಲಿ ರೂಪುಗೊಂಡ ಯೋಜನೆಗಳನ್ನು ಮುಂದುವರಿಸಿಕೊಂಡು, ಯಾವುದೇ ವಿಳಂಬವಿಲ್ಲದೆ ಅಭಿವೃದ್ಧಿ ಪ್ರಕ್ರಿಯೆಯನ್ನು ಮುಂದಕ್ಕೆ ಕೊಂಡೊಯ್ಯುತ್ತಿರುವವರು ಪ್ರಸ್ತುತ ಸಂಸದ ಯದುವೀರ್ ಒಡೆಯರ್. ಕುಶಾಲನಗರ ಹೆದ್ದಾರಿಯ ಕಾಮಗಾರಿ ಪ್ರಗತಿಯಲ್ಲಿದ್ದು, ದೊಡ್ಡ ಯೋಜನೆಗಳಲ್ಲಿ ಎದುರಾಗುವ ತಾಂತ್ರಿಕ ಹಾಗೂ ಆಡಳಿತಾತ್ಮಕ ಅಡಚಣೆಗಳನ್ನು ಪರಿಹರಿಸುವ ಸಾಮರ್ಥ್ಯ ಮತ್ತು ರಾಜಕೀಯ ಇಚ್ಛಾಶಕ್ತಿ ಸಂಸದರಿಗೆ ಇದೆ.
ಈ ಸಂದರ್ಭದಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರವು ಸಂಸದರಿಗೆ ಅಗತ್ಯ ಸಹಕಾರ ನೀಡುವ ಬದಲು, ತಮ್ಮದೇ ಪಕ್ಷದ ವಕ್ತಾರರಿಂದ ಸುಳ್ಳು ಆರೋಪಗಳನ್ನು ಮಾಡಿಸುವ ಮೂಲಕ ಜನರ ಗಮನವನ್ನು ಬೇರೆಡೆ ಸೆಳೆಯಲು ಪ್ರಯತ್ನಿಸುತ್ತಿದೆ.
ಮಾಹಿತಿ ಕೊರತೆಯಿಂದ ಮೊಸರಲ್ಲಿ ಕಲ್ಲು ಹುಡುಕುವ ಕೆಲಸವನ್ನು ಕಾಂಗ್ರೆಸ್ ವಕ್ತಾರ ಲಕ್ಷಣ್ ಮಾಡುತ್ತಿದ್ದು, ಚುನಾವಣೆಯಲ್ಲಿ ಜನರಿಂದ ತಿರಸ್ಕೃತಗೊಂಡ ನಂತರದ ಹತಾಶ ಮನಸ್ಥಿತಿಯೇ ಅವರ ಪ್ರತಿಯೊಂದು ಹೇಳಿಕೆಯಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ.
ಈ ಕುರಿತು ಮಾತನಾಡಿದ ಸಂತೋಷ್ ಕುಮಾರ್ ಬಿ.ಎಂ, ಮಾಧ್ಯಮ ಸಹ ಸಂಚಾಲಕರು, ಮೈಸೂರು ಮಹಾನಗರ ಅವರು, “ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರನ್ನು ಹಗುರವಾಗಿ ‘ಅಂಧಭಕ್ತರು’ ಎಂದು ಕರೆಯುವ ಕಾಂಗ್ರೆಸ್‌ನ ರಾಜಕೀಯ ಸಂಸ್ಕೃತಿಯ ನೈಜ ಮುಖವನ್ನು ತೋರಿಸುತ್ತದೆ.
ಬಿಜೆಪಿಗೆ ತನ್ನದೇ ಆದ ಸ್ಪಷ್ಟ ನೀತಿ, ನಿಯಮ ಮತ್ತು ಶಿಸ್ತು ಇದೆ. ಆದರೆ ವೈಯಕ್ತಿಕ ನಿಂದನೆ, ಅವಾಚ್ಯ ಪದ ಪ್ರಯೋಗ ಮತ್ತು ಹಗುರ ಭಾಷೆಯೇ ಕಾಂಗ್ರೆಸ್ ವಕ್ತಾರರ ರಾಜಕೀಯ ಅಸ್ತ್ರವಾಗಿರುವುದು ಅತ್ಯಂತ ದುಃಖಕರ” ಎಂದು ಹೇಳಿದರು.
ಸಂಸದ ಯದುವೀರ್ ಒಡೆಯರ್ ಅವರು ಕೇವಲ ಒಬ್ಬ ಜನಪ್ರತಿನಿಧಿಯಲ್ಲ; ಮೈಸೂರು ರಾಜಮನೆತನದ ಪ್ರತಿನಿಧಿಯಾಗಿದ್ದು, ಆ ಮನೆತನದ ಕೊಡುಗೆ ರಾಜ್ಯಕ್ಕೂ ರಾಷ್ಟ್ರಕ್ಕೂ ಅಪಾರವಾಗಿದೆ.
ಇಂತಹ ಗೌರವಯುತ ಪರಂಪರೆ ಮತ್ತು ವ್ಯಕ್ತಿತ್ವದ ಬಗ್ಗೆ ನೆಲೆಯ ಅರಿವಿಲ್ಲದೆ, ಸಂಯಮವಿಲ್ಲದೆ ಮಾತನಾಡುವುದು ಲಕ್ಷಣ್ ಅವರ ರಾಜಕೀಯ ಅಪಕ್ವತೆಯನ್ನೇ ತೋರಿಸುತ್ತದೆ.
ಅಭಿವೃದ್ಧಿ ವಿಚಾರಗಳಲ್ಲಿ ಮಾತನಾಡುವ ಧೈರ್ಯವಿಲ್ಲದೆ ಉಡಾಪೆ, ಹಗುರ ಹಾಗೂ ನಿರಾಧಾರ ಆರೋಪಗಳಿಗೆ ಇಳಿಯುವುದು ರಾಜಕೀಯ ಶಿಷ್ಟಾಚಾರಕ್ಕೆ ವಿರುದ್ಧ. ಕಾಂಗ್ರೆಸ್ ವಕ್ತಾರ ಲಕ್ಷಣ್ ಅವರ ಈ ಹೇಳಿಕೆಗಳನ್ನು ರಾಜ್ಯದ ಜನ ಗಂಭೀರವಾಗಿ ಗಮನಿಸುತ್ತಿದ್ದು, ಮುಂದಿನ ದಿನಗಳಲ್ಲಿ ಜನತೆಯೇ ಅವರಿಗೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಮೈಸೂರು ನಗರ ಮಾಧ್ಯಮ ಸಹ ಸಂಚಾಲಕರಾದ ಸಂತೋಷ್ ಕುಮಾರ್ ಬಿ ಎಂ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ..








