
ಮೈಸೂರು : ಮಾ.24 : ಮುಖ್ಯಮಂತ್ರಿ ಸಿದ್ದರಾಮಯ್ಯರವರ ಸ್ವ-ಇಚ್ಚಾಶಕ್ತಿಯಿಂದ ಮೈಸೂರು ಹಾಗೂ ಸುತ್ತಮುತ್ತಲ 5 ಜಿಲ್ಲೆಗಳ ಜನರಿಗೆ ಅನುಕೂಲವಾಗಲು ಹೆಚ್ಚು ಆಸ್ಪತ್ರೆಗಳನ್ನು ನಿರ್ಮಿಸುವುದರ ಮೂಲಕ ಆರೋಗ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಜಯದೇವ ಹೃದ್ರೋಗ ಮತ್ತು ವಿಜ್ಞಾನ ಸಂಸ್ಥೆಯ ವೈದ್ಯಕೀಯ ಅಧೀಕ್ಷಕ ಡಾ. ಕೆ.ಎಸ್. ಸದಾನಂದ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯರವರು ಮೈಸೂರಿನಲ್ಲಿ ಜಯದೇವ ಆಸ್ಪತ್ರೆ, ಜಿಲ್ಲಾ ಆಸ್ಪತ್ರೆ, ಟ್ರಾಮಾ ಸೆಂಟರ್, ಸೂಪರ್‌ಸ್ಪೆಷಾಲಿಟಿ ಆಸ್ಪತ್ರೆ, ಆಯುರ್ವೇದ ಆಸ್ಪತ್ರೆ, ನೆಪ್ರೊಯುರೋಲಜಿ ಆಸ್ಪತ್ರೆ, ತುಳಸಿದಾಸಪ್ಪ ಆಸ್ಪತ್ರೆ, ಕ್ಯಾನ್ಸರ್ ಆಸ್ಪತ್ರೆಗಳನ್ನು ನಿರ್ಮಿಸಿ ಸಾರ್ವಜನಿಕರಿಗೆ ತುಂಬ ಅನುಕೂಲ ಮಾಡಿಕೊಟ್ಟಿದ್ದಾರೆ. ಇದಲ್ಲದೆ ರಾಜ್ಯಾದ್ಯಂತ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು, ಮೆಡಿಕಲ್ ಕಾಲೇಜುಗಳು, ಡಯಾಲಿಸಿಸ್ ಕೇಂದ್ರಗಳನ್ನು ನಿರ್ಮಿಸಿ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚು ಒತ್ತನ್ನು ನೀಡಿದ್ದಾರೆ.

ಪದ್ಮಶ್ರೀ ಡಾ. ಸಿ.ಎನ್. ಮಂಜುನಾಥ್‌ರವರು ಜಯದೇವ ಆಸ್ಪತ್ರೆಯ ನಿರ್ದೇಶಕರಾಗಿದ್ದ ಅವಧಿಯಲ್ಲಿ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯರವರು ಮೈಸೂರಿಗೆ 400 ಹಾಸಿಗೆ ಸಾಮರ್ಥ್ಯದ ಹೃದ್ರೋಗ ಆಸ್ಪತ್ರೆ ನಿರ್ಮಿಸಿದ್ದರು. ಆದರೆ ಹೃದಯರೋಗಿಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಡಾ. ಬಿ. ದಿನೇಶ್‌ರವರು ನಿರ್ದೇಶಕರಾಗಿರುವ ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳು ಬಜೆಟ್‌ನಲ್ಲಿ 180 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿ, ಇನ್ನೂ 200 ಹಾಸಿಗೆ ಸಾಮರ್ಥ್ಯವನ್ನು ಹೆಚ್ಚಿಸಲು ಕ್ರಮ ಕೈಗೊಂಡಿರುವುದು ಸ್ವಾಗತಾರ್ಹವಾಗಿದೆ.

ಬಜೆಟ್‌ನಲ್ಲಿ ಬಿಡುಗಡೆಯಾಗಿರುವ 180 ಕೋಟಿಯಿಂದ ಕ್ಯಾಂಟಿನ್ ಕಟ್ಟಡದ ಮೇಲೆ ಆಸ್ಪತ್ರೆ ನಿರ್ಮಿಸಿ, ಹಳೇ ಕಟ್ಟಡದಿಂದ ಲಿಂಕ್‌ಮಾಡಿ, ಮಕ್ಕಳ ಹೃದಯ ಚಿಕಿತ್ಸೆ, ವ್ಯಾಸ್‌ಕ್ಯೂಲರ್ ಸರ್ಜರಿ, ಎಲೆಕ್ಟೊçà ಫಿಸಿಯೋಥೆರಫಿ ವಿಭಾಗ, 2 ಕ್ಯಾತ್‌ಲ್ಯಾಬ್, ಐ.ಸಿ.ಯು ಮಾಡಬಹುದು ಎಂದ ಅವರು, ಬದಲಾದ ಜೀವನ ಶೈಲಿಯಿಂದ ಹೃದಯ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಪ್ರತಿದಿನ 800 ರಿಂದ 900 ಜನ ಹೊರರೋಗಿಗಳು ಅಲ್ಲದೆ 100 ಜನ ತುರ್ತುಚಿಕಿತ್ಸೆಗೆ ಆಸ್ಪತ್ರೆಗೆ ಬರುತ್ತಾರೆ. ಪ್ರಸ್ತುತ ಪ್ರತಿದಿನ 60 ರಿಂದ 70 ಜನರಿಗೆ ಆಂಜಿಯೋಗ್ರಾಮ್, ಆಂಜಿಯೋಪ್ಲಾಸ್ಟಿ ಮಾಡುತ್ತೇವೆ. 4 ರಿಂದ 5 ಜನರಿಗೆ ತೆರೆದ ಹೃದಯ ಚಿಕಿತ್ಸೆ ಮಾಡಲಾಗುತ್ತಿದೆ. ಆದರೂ ಐ.ಸಿ.ಸಿ.ಯು.ನಲ್ಲಿ ಬೆಡ್ ಸಾಲದೆ ಸ್ಟೆçಚರ್‌ಮೇಲೆ ಹಾಕಿಕೊಂಡು ಕಡಿಮೆ ದರದಲ್ಲಿ ಗುಣಮಟ್ಟದ ಚಿಕಿತ್ಸೆ ನೀಡುತ್ತಿದ್ದೇವೆ. ಇದಕ್ಕೆ ಪರಿಹಾರವಾಗಿ ಮುಖ್ಯಮಂತ್ರಿಗಳು ಹೆಚ್ಚುವರಿಯಾಗಿ 200 ಹಾಸಿಗೆ ಸಾಮರ್ಥ್ಯ ಹೆಚ್ಚಿಸಲು 180 ಕೋಟಿ ಬಿಡುಗಡೆ ಮಾಡಿರುವುದಕ್ಕೆ ಧನ್ಯವಾದ ತಿಳಿಸಿದರು.





