ಕ್ರೀಡಾಂಗಣ ಹೆಸರಿನಲ್ಲಿ ಮೈಸೂರು ಸಿಲ್ಕ್ ಫ್ಯಾಕ್ಟರಿ ಮುಚ್ಚುವ ಯತ್ನ: ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಆರ್. ಅಶೋಕ್ ಕಿಡಿ

ಮೈಸೂರು, ಫೆ.27: ಮೈಸೂರು ಜಿಲ್ಲೆಯ ಟಿ.ನರಸಿಪುರದಲ್ಲಿ ಕ್ರೀಡಾಂಗಣ ನಿರ್ಮಾಣ ಹೆಸರಿನಲ್ಲಿ ಪ್ರತಿಷ್ಠಿತ ವಿಶ್ವ ಪ್ರಸಿದ್ದ ಮೈಸೂರು ಸಿಲ್ಕ್ ಸಂಸ್ಥೆಯನ್ನು ಮುಚ್ಚುವ ಯತ್ನ ಕಾಂಗ್ರೇಸ್ ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿ, ವಿರೋದ ಪಕ್ಷದ ನಾಯಕ ಆರ್. ಅಶೋಕ್ ಮೈಸೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. “ಸೇವ್ ಮೈಸೂರು ಸಿಲ್ಕ್ – ಉಳಿಸಿ ಮೈಸೂರು ಸಿಲ್ಕ್” ಎಂಬ ಅಭಿಯಾನವನ್ನು ಆರಂಭಿಸಲಾಗುವುದು ಎಂದು ಅವರು ಮೈಸೂರಿನಲ್ಲಿ ಘೋಷಿಸಿದರು.

ಮೈಸೂರು ಸಿಲ್ಕ್ ಸಂಸ್ಥೆ ನಮ್ಮ ಕರ್ನಾಟಕದ ಹೆಮ್ಮೆಯ ಪರಂಪರೆಯ ಬ್ರ್ಯಾಂಡ್ ಆಗಿದ್ದು, ಇದನ್ನು ಯಾವುದೇ ಕಾರಣಕ್ಕೂ ಮುಚ್ಚಲು ಅವಕಾಶ ನೀಡುವುದಿಲ್ಲ ಎಂದು ಅವರು ತಿಳಿಸಿದರು. “ಸಿಲ್ಕ್ ಮತ್ತು ಮಿಲ್ಕ್ ಎರಡೂ ಕರ್ನಾಟಕದ ಹೆಸರನ್ನು ಪ್ರಪಂಚಕ್ಕೆ ಪರಿಚಯಿಸಿದ ಪ್ರಮುಖ ಬ್ರ್ಯಾಂಡ್ಗಳು. ಇಂತಹ ಐತಿಹಾಸಿಕ ಸಂಸ್ಥೆಯನ್ನು ಉಳಿಸುವುದು ಸರ್ಕಾರದ ಹೊಣೆಗಾರಿಕೆ” ಎಂದು ಅವರು ಅಭಿಪ್ರಾಯಪಟ್ಟರು.
ಮೈಸೂರು ಸಿಲ್ಕ್ ಸಂಸ್ಥೆಯ ಇತಿಹಾಸವನ್ನು ಉಲ್ಲೇಖಿಸಿದ ಅವರು, ಮೈಸೂರಿನ ನಮ್ಮ ಹೆಮ್ಮೆಯ ನಾಲ್ವಡಿ ಕೃಷ್ಣರಾಜ ಒಡೆಯರ್ ಇಂಗ್ಲೆಂಡ್ ಪ್ರವಾಸದ ವೇಳೆ ಅಲ್ಲಿನ ರಾಣಿ ಧರಿಸಿರುವ ರೇಷ್ಮೆ ಸೀರೆಗಳನ್ನು ಕಂಡು ಪ್ರೇರಿತರಾಗಿ ನಮ್ಮ ಮೈಸೂರಿನಲ್ಲಿ ರೇಷ್ಮೆ ಕೈಗಾರಿಕೆಯನ್ನು ಅಭಿವೃದ್ಧಿಪಡಿಸಲು ಮುಂದಾದರು ಎಂದು ಹೇಳಿದರು. ರೇಷ್ಮೆ ಬೆಳೆಯ ರೈತರಿಗೆ ಮಾರುಕಟ್ಟೆ ಸಿಗಬೇಕು, ಇಲ್ಲಿನ ಸ್ಥಳೀಯರಿಗೆ ಮುಕ್ತವಾಗಿ ಉದ್ಯೋಗ ದೊರಕಬೇಕು ಎಂಬ ಉದ್ದೇಶದಿಂದಲೇ ಈ ಸಂಸ್ಥೆಯನ್ನು ಆರಂಭಿಸಲಾಗಿತ್ತು ಎಂದು ವಿವರಿಸಿದರು.
ಈ ಸಂಸ್ಥೆ ಇಂದು ನಮ್ಮ ರಾಜ್ಯದಲ್ಲಿ ಸಾವಿರಾರು ಕುಟುಂಬಗಳ ಜೀವನಾಧಾರವಾಗಿದ್ದು, ರೈತರಿಂದ ಹಿಡಿದು ನೇಕಾರರ ತನಕ ಅನೇಕ ಮಂದಿಗೆ ಉಪಯೋಗವಾಗುತ್ತಿದೆ. ಟಿ. ನರಸೀಪುರ ಪ್ರದೇಶದಲ್ಲಿ ರೇಷ್ಮೆ ಉತ್ಪಾದನೆ ನಡೆಯುತ್ತಿದ್ದು, ಚನ್ನಪಟ್ಟಣದಲ್ಲಿ ಮಗ್ಗಗಳ ಮೂಲಕ ರೇಷ್ಮೆ ಸೀರೆ ತಯಾರಿಸಲಾಗುತ್ತಿದೆ. ಆದರೆ ಚನ್ನಪಟ್ಟಣದಲ್ಲಿ ಪ್ರತಿದಿನ ಸುಮಾರು 1200 ಸೀರೆಗಳಷ್ಟೇ ತಯಾರಾಗುತ್ತಿವೆ. ಆದರೆ ಬೇಡಿಕೆ ದಿನಕ್ಕೆ ಸುಮಾರು 10 ಸಾವಿರ ಸೀರೆಗಳಷ್ಟಿದೆ ಎಂದು ಅವರು ಹೇಳಿದರು.
ಮೈಸೂರು ಸಿಲ್ಕ್ ಸೀರೆಗೆ ವಿಶಿಷ್ಟವಾದ ಪವಿತ್ರತೆ ಇದ್ದು, ಪುರಾತನ ಕಾಲದಿಂದಲೂ ಚಾಮುಂಡೇಶ್ವರಿ ದೇವಿಗೆ ಮೈಸೂರು ಸಿಲ್ಕ್ ಸೀರೆಯನ್ನೇ ಉಡಿಸಲಾಗುತ್ತದೆ. ಈ ಪರಂಪರೆ ಮೈಸೂರು ಸಿಲ್ಕ್ನ ಗೌರವವನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಅವರು ಹೇಳಿದರು.

ಈ ಸಂಸ್ಥೆ ನಷ್ಟದಲ್ಲಿಲ್ಲ, ಬದಲಾಗಿ ಕಳೆದ ವರ್ಷದಲ್ಲಿ ಸುಮಾರು 96 ಕೋಟಿ ರೂಪಾಯಿ ಲಾಭ ಗಳಿಸಿದೆ. ಇಂತಹ ಲಾಭದಾಯಕ ಸಂಸ್ಥೆಯನ್ನು ಮುಚ್ಚುವುದು ಸರಿಯಲ್ಲ ಎಂದು ಅವರು ಆಕ್ಷೇಪಿಸಿದರು. “ಇದು ಮುಚ್ಚಬೇಕಾದ ಸಂಸ್ಥೆ ಅಲ್ಲ, ಅಭಿವೃದ್ಧಿಪಡಿಸಬೇಕಾದ ಸಂಸ್ಥೆ” ಎಂದು ಅಶೋಕ್ ಹೇಳಿದರು.
ರಾಜ್ಯ ರಾಜಕೀಯ ಬೆಳವಣಿಗೆಗಳ ಕುರಿತು ಮಾತನಾಡಿದ ಅವರು, “ಮುಂದಿನ ಮುಖ್ಯಮಂತ್ರಿ ಕುಮಾರಣ್ಣ ಆಗುತ್ತಾರೆ” ಎಂಬ ನಿಖಿಲ್ ಕುಮಾರಸ್ವಾಮಿ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿ, ಅದು ಅವರ ಪಕ್ಷದ ಒಳಗಿನ ವಿಚಾರ ಎಂದು ಹೇಳಿದರು. “ನಮ್ಮ ಹೈಕಮಾಂಡ್ ಏನು ತೀರ್ಮಾನ ಮಾಡುತ್ತದೆಯೋ ಅದೇ ಅಂತಿಮ. ಕೂಸು ಹುಟ್ಟುವ ಮುಂಚೆ ಕುಲಾಯಿ ಹೊಲಿಸುವುದು ಬೇಡ” ಎಂದು ಹೇಳಿದರು.
ಬಿಜೆಪಿ ಶಿಸ್ತುಬದ್ಧವಾದ ಪಕ್ಷವಾಗಿದ್ದು, ಜೆಡಿಎಸ್ ಜೊತೆಗಿನ ಮೈತ್ರಿ ಮುಂದುವರಿಯಲಿದೆ ಎಂದು ಅವರು ತಿಳಿಸಿದರು. ಬಿಬಿಎಂಪಿ ಚುನಾವಣೆಯಲ್ಲಿ ಮೈತ್ರಿ ಕುರಿತಂತೆ ಜೆಡಿಎಸ್ ನಾಯಕರು ಪ್ರಸ್ತಾಪಿಸಿದ್ದು, ಅದರ ಬಗ್ಗೆ ಚರ್ಚೆಗಳು ನಡೆಯುತ್ತಿವೆ ಎಂದರು. ಮುಖ್ಯಮಂತ್ರಿ ಅಭ್ಯರ್ಥಿ ಕುರಿತು ಇನ್ನೂ ಯಾವುದೇ ತೀರ್ಮಾನವಾಗಿಲ್ಲ, ಅದು ವರಿಷ್ಠರಿಗೆ ಬಿಟ್ಟ ವಿಚಾರ ಎಂದು ಹೇಳಿದರು.





