
ಮೈಸೂರು, ಫೆಬ್ರವರಿ 27: – ” ಉನ್ನತ ಶಿಕ್ಷಣ ನೀಡುತ್ತಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಕೃಷಿ ಜ್ಞಾನದ ಉನ್ನತಿಗೂ ಕಟಿಬದ್ಧವಾಗಿದೆ. ಕೃಷಿ ಕ್ಷೇತ್ರದ ಅಭಿವೃದ್ದಿಯೇ ದೇಶದ ಅಭಿವೃದ್ದಿ. ರೈತರು ನೆಮ್ಮದಿಯಿಂದ ಬದುಕಲು ಸಮಾಜದ ಎಲ್ಲರೂ ಶ್ರಮಿಸಬೇಕು ” ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ ಎಂದು ಕರೆ ಕೊಟ್ಟರು.
ಆರಂಭವಾದ ಮೂರು ದಿನಗಳ ಕಿಸಾನ್ ಸ್ವರಾಜ್ ಸಮ್ಮೇಳವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ” ಕೃಷಿ ಜ್ಞಾನ ಮತ್ತು ಅನುಭವ ಹಂಚಿಕೆಯಾಗುವ ಕಿಸಾನ್ ಸ್ವರಾಜ್ ಸಮ್ಮೇಳನ ನಿರಂತರವಾಗಿ, ಪ್ರಾದೇಶಿಕವಾಗಿ ನಡೆಯಬೇಕು” ಎಂದರು.

ಸುಸ್ಥಿರ ಮತ್ತು ಸಮಗ್ರ ಕೃಷಿ ಮೈತ್ರಿಕೂಟ ಮತ್ತು ಪ್ರಸಾರಾಂಗ , ಕರ್ನಾಟಕ ರಾಜ್ಯ ಮುಕ್ತ ವಿಶ್ವುವಿದ್ಯಾನಿಲಯ ಜೊತೆಯಾಗಿ ಆಯೋಜಿಸಿರುವ ಕಿಸಾನ್ ಸ್ವರಾಜ್ ಸಮ್ಮೇಳನದಲ್ಲಿ ವಿವಿಧ ರಾಜ್ಯಗಳ ಒಂದು ಸಾವಿರ ಪ್ರತಿನಿಧಿಗಳು ಭಾಗವಹಿಸಿದ್ದಾರೆ.
ಮುಖ್ಯ ಅತಿಥಿಗಳಾಗಿದ್ದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ’ ವಿಶ್ವವಿದ್ಯಾನಿಲಯಗಳು ಶಿಕ್ಷಣ ನೀಡುವ ಕೇಂದ್ರಗಳಷ್ಟೇ ಆಗಬಾರದು. ಸಮಾಜ ಎದುರಿಸುತ್ತಿರುವ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುವ ಮತ್ತು ಅವಕ್ಕೆ ಪರಿಹಾರ ಕಂಡುಕೊಳ್ಳುವ ಕೇಂದ್ರಗಳೂ ಆಗಬೇಕು’ ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವೊವಿದ್ಯಾನಿಲಯದ ಕುಲ ಸಚಿವರಾದ ಪ್ರೊ. ಎಸ್. ಕೆ. ನವೀನ್ ಕುಮಾರ್ ಅಭಿಪ್ರಾಯಪಟ್ಟರು.

ಸುಸ್ಥಿರ ಮತ್ತು ಸಮಗ್ರ ಕೃಷಿ ಮೈತ್ರಿಕೂಟದ ಸಂಚಾಲಕ ಕಪಿಲ್ ಶಾ ಮಾತನಾಡಿ ‘ ಸಾವಯವ ಕೃಷಿ ಆಂದೋಲನಕ್ಕೆ ದಕ್ಷಿಣ ಭಾರತ ನೀಡಿದ ಕೊಡುಗೆ ಬಹುದೊಡ್ಡದು. ಸ್ಥಳೀಯ ಸಾಂಪ್ರದಾಯಿಕ ಕೃಷಿ ವಿಧಾನಗಳಿಗೆ ಮಾನ್ಯತೆ ನೀಡಬೇಕಿದೆ. ಕೃಷಿಯಲ್ಲಿ ಗೋವಿನಷ್ಟೇ ಎಮ್ಮೆಯೂ ಮುಖ್ಯ. ಎತ್ತು, ಕತ್ತೆ,ಮೇಕೆಗಳ ಪಾತ್ರವೂ ಹಿರಿದು. ವಿನೋಭ ಭಾವೆ ಹೇಳಿದಂತೆ ವಿಜ್ಞಾನದ ಜೊತೆ ಹಿಂಸೆ ಸೇರಿದರೆ ಸರ್ವನಾಶ, ವಿಜ್ಞಾನ ಮತ್ತು ಅಹಿಂಸೆ ಜೊತೆಯಾದರೆ ಸರ್ವೋದಯ. ಆ. ಸರ್ವೋದಯದ ಸಾಕಾರಕ್ಕೆ ಆಶಾ ಕೆಲಸ ಮಾಡುತ್ತಿದೆ” ಎಂದರು.
ವಿಶ್ವಸಂಸ್ಥೆಯ ಈಕ್ವೇಟರ್ ಇನಿಷಿಯೇಟಿವ್ ಪ್ರಶಸ್ತಿ ಪುರಸ್ಕೃತ ಕುಂದಗೋಳದ ರೈತ ಮಹಿಳೆ ಬೀಬಿ ಜಾನ್ ಮಾತನಾಡಿ ‘ ಕೃಷಿ ಕ್ಷೇತ್ರದಲ್ಲಿ ಮಹಿಳೆಯರ ಪಾತ್ರ ಬಹಳ ದೊಡ್ಡದು. ತೀರ್ಥ ಗ್ರಾಮದಲ್ಲಿ ಬೀಬಿ ಫಾತಿಮ ಮಹಿಳಾ ಸಂಘ ಸಮುದಾಯ ಬೀಜ ಬ್ಯಾಂಕ್ ಸ್ಥಾಪಿಸಿ ,ರೈತರಿಗೆ ಕಣ್ಮರೆಯಾಗುತ್ತಿದ್ದ ಸಿರಿಧಾನ್ಯ ಮತ್ತು ಬೇಳೆಕಾಳುಗಳ ಬೀಜಗಳನ್ನು ಒದಗಿಸುತ್ತಿದೆ. ಐದು ಸಾವಿರಕ್ಕೂ ಹೆಚ್ಚು ರೈತರು ಸಿರಿಧಾನ್ಯದ ಕೃಷಿಗೆ ಹಿಂತಿರುಗಿದ್ದಾರೆ’ ಎಂದರು.
ಹೆಸರಾಂತ ನೈಸರ್ಗಿಕ ಕೃಷಿಕರಾದ ದಾವಣಗೆರೆಯ ರಾಘವ ಮಾತನಾಡಿ ‘ ಪಾರಂಪರಿಕ ಬೀಜಗಳನ್ನು ಕೃಷಿಯಲ್ಲಿ ಬಳಸುವ ಮೂಲಕ ಬೀಜ ಸ್ವಾತಂತ್ರ್ಯವನ್ನು ರೈತರು ಗಳಿಸಿಕೊಳ್ಳಬೇಕು. ದೇಸಿ ಬೀಜಗಳ ಮೂಲಕ ರಾಸಾಯನಿಕ ಗೊಬ್ಬರ,ರಾಸಾಯನಿಕ ಔಷಧಿಗಳ ದಾಸ್ಯದಿಂದ ಹೊರಬರಬಹುದು. ನಮ್ಮ ಜೀವನ ಶೈಲಿ ನಿಸರ್ಗಕ್ಕೆ ಹತ್ತಿರವಾಗಬೇಕು; ಕಂಪನಿ ಉತ್ಪನ್ನಗಳ ಬಳಕೆ ನಿಲ್ಲಿಸಬೇಕು’ ಎಂದು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಗಳಾಗಿದ್ದ ಹೈದರಾಬಾದಿನ ಸುಸ್ಥಿರ ಕೃಷಿ ಕೇಂದ್ರದ ನಿರ್ದೇಶಕರಾದ ಡಾ.ರಾಮಾಂಜನೇಯಲು ಮತ್ತು ಕೇರಳ ಜೈವ ಕರ್ಷಕ ಸಮಿತಿಯ ಅಧ್ಯಕ್ಷರಾದ ವಿಶಾಲಾಕ್ಷನ್ ಅನುಭವ ಹಂಚಿಕೊಂಡರು.
ಪ್ರೊ. ಎಂ. ರಾಮನಾಥ ನಾಯುಡು, ಡೀನ್ ( ಶೈಕ್ಷಣಿಕ), ಪ್ರೊ ಸಿ ಎಸ್ ಅನಂದ ಕುಮಾರ್ , ಕುಲಸಚಿವರು ( ಪರೀಕ್ಷಾಂಗ), ಡಾ.ಚಂದ್ರೇಗೌಡ ,ಡೀನ್ (ಅಧ್ಯಯನ ಕೇಂದ್ರ), ಪ್ರೊ. ನಿರಂಜನ್ ರಾಜ್,ಹಣಕಾಸು ಅಧಿಕಾರಿಗಳು ಉಪಸ್ಥಿತರಿದ್ದರು.
ಆಶಾ ಕಿಸಾನ್ ಸ್ವರಾಜ್ ಸಂಚಾಲಕರಾದ ಕವಿತಾ ಕುರಗಂಟಿ ಮತ್ತು ಕವಿತಾ ಶ್ರೀನಿವಾಸನ್ ಕಾರ್ಯಕ್ರಮದ ನಿರೂಪಣೆ ಮಾಡಿದರು. ಪ್ರಸಾರಾಂಗ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ನಿರ್ದೇಶಕರಾದ ಡಾ.ಸಂತೋಷ್ ನಾಯಕ್ ಆರ್ ಸ್ವಾಗತಿಸಿದರು.
ಈ ಸಂಧರ್ಭದಲ್ಲಿ ‘ ತಮಿಳುನಾಡಿನ ನೈಸರ್ಗಿಕ ಕೃಷಿಯ ಸ್ಥಿತಿ ಗತಿ’ ವರದಿ ಬಿಡುಗಡೆ ಮಾಡಲಾಯಿತು.ಬಿಡುಗಡೆ
ಕಿಸಾನ್ ಸ್ವರಾಜ್ ಸಮ್ಮೇಳನದ ಅಂಗವಾಗಿ ಜೀವ ವೈವಿಧ್ಯ ಮೇಳ, ಸಾವಯವ ಉತ್ಪನ್ನಗಳ ಮಳಿಗೆಗಳು,ಸಾವಯವ ಆಹಾರ ಮಳಿಗೆ ಮತ್ತು ಗೆಡ್ಡೆ ಗೆಣಸುಗಳ ಪ್ರದರ್ಶನ ಏರ್ಪಡಿಸಲಾಗಿದೆ. ವಿವಿಧ ರಾಜ್ಯಗಳ ಒಂದು ನೂರಕ್ಕೂ ಹೆಚ್ಚಿನ ಬೀಜ ಸಂರಕ್ಷಕರು 40 ಮಳಿಗೆಗಳಲ್ಲಿ ಎರಡು ಸಾವಿರಕ್ಕೂ ಹೆಚ್ಚಿನ ಬೀಜ, ಗೆಡ್ಡೆ ಗೆಣಸು ಮತ್ತು ಹಣ್ಣುಗಳ ಪ್ರದರ್ಶನ ಮಾಡಿದ್ದಾರೆ.
ಬೀಜಗಳು ಮಾರಾಟಕ್ಕೂ ಸಿಗುತ್ತವೆ.

ಅಸ್ಸಾಂನಿಂದ ಬಂದಿರುವ ‘ಪಭೋಯ್ ಗ್ರೀನ್ಸ’ ಸಂಸ್ಥೆ ಬಣ್ಣ ಬಣ್ಣದ ಟೊಮೊಟೋಗಳ ಪ್ರದರ್ಶನಕ್ಕೆ ತಂದಿದಾರೆ. ಕುಂದಗೋಳದ ರೈತ ಮಹಿಳೆಯರು ಪ್ರದರ್ಶಿಸಿರುವ 32 ಬಗೆಯ ಗೋಧಿಗಳ ತಳಿಗಳು ನೋಡುಗರನ್ನು ಆಕರ್ಷಿಸುತ್ತಿವೆ. ತೆಲಂಗಾಣದ ಡೆಕ್ಕನ್ ಡೆವಲಪ್ ಮೆಂಟ್ ಸೊಸೈಟಿಯ ರೈತ ಗುಂಪು ಸಿರಿಧಾನ್ಯದ ತಳಿಗಳ ಪ್ರದರ್ಶನಕ್ಕೆ ತಂದಿದ್ದಾರೆ.
ರಾಷ್ಟ್ರೀಯ ಪುರಸ್ಕೃತ ಕೇರಳದ ವಯನಾಡಿನ ಶಾಜಿ ವೈವಿಧ್ಯಮಯ ಗೆಡ್ಡೆ ಗೆಣಸುಗಳನ್ನು ಪ್ರದರ್ಶನಕ್ಕೆ ತಂದಿದ್ದಾರೆ. ತಮಿಳುನಾಡಿನ ಕೀ ಸ್ಟೋನ್ ಸಂಸ್ಥೆಯು ನೀಲಗಿರಿ ಬೆಟ್ಟದ ಶ್ರೇಣಿಯ ಅಪರೂಪದ ಗೆಡ್ಡೆಗಳ ಮತ್ತು
ಹೆಗ್ಗಡದೇವನಕೋಟೆಯ ಹುಲಿಕಾಡು ರೈತ ಉತ್ಪಾದಕರ ಕಂಪನಿ ಪರ್ಪಲ್ ಯಾಮ್, ಬಳ್ಳಿ ಆಲೂಗೆಡ್ಡೆ ಮತ್ತು ಉತ್ತರಿ ಗೆಣಸುಗಳನ್ನು ಮೇಳಕ್ಕೆ ತಂದಿವೆ. ಆಂಧ್ರ ಪ್ರದೇಶದ ಅರಕು ವ್ಯಾಲಿಯ ಸಂಜೀವಿನಿ ಆದಿವಾಸಿ ಸಂಘದವರು ಪೂರ್ವ ಘಟ್ಟಗಳ ಕಾಡಿನ ಬೀಜ ವೈವಿಧ್ಯ ಪ್ರದರ್ಶಿಸಿದ್ದಾರೆ.
ಮೈಸೂರಿನ ಬೆಳುವಲ ಫೌಂಡೇಷನ್, ನಗರವಾಸಿಗಳು ಸುಲಭನಾಗಿ ಮಾಡಿಕೊಳ್ಳಬಹುದಾದ ಜೈವಿಕ ತೋಟದ ಮಾದರಿಗಳನ್ನು ರೂಪಿಸಿ, ಆಸಕ್ತರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.
ನೈಸರ್ಗಿಕ ಕೃಷಿ ಉತ್ಪನ್ನಗಳು ಮತ್ತು ಮೌಲ್ಯವರ್ಧಿತ ಪದಾರ್ಥಗಳ 37 ಸಾವಯವ ಮಳಿಗೆಗಳಿವೆ. ವಿವಿಧ ರಾಜ್ಯಗಳ ಏಳು ಸಾವಯವ ಆಹಾರ ಮಳಿಗೆಗಳು ಸಾಂಪ್ರದಾಯಿಕ ಶೈಲಿಯ ಆಹಾರಗಳನ್ನು ಉಣಬಡಿಸುತ್ತಿವೆ. ದೇಸಿರಿ ನ್ಯಾಚುರಲ್ಸನವರು ಎತ್ತಿನ ಗಾಣವನ್ನು ಸ್ಥಾಪಿಸಿ, ಸಾಂಪ್ರದಾಯಿಕವಾಗಿ ಎಣ್ಣೆ ತೆಗೆಯುವ ವಿಧಾನವನ್ನು ಮೇಳಕ್ಕೆ ಬಂದವರಿಗೆ ತೋರುತ್ತಿದ್ದಾರೆ. ಹರಳನ್ನು ಸ್ಥಳದಲ್ಲೇ ಬೇಯಿಸಿ ತೋರುತ್ತಿದ್ದಾರೆ. ಗ್ರಾಹಕರು ತಮ್ಮ ಇಷ್ಟದ ಗಾಣದ ಎಣ್ಣೆ ಖರೀದಿಸಬಹುದು. ಆಂಧ್ರ ಪ್ರದೇಶದ ಪೊಂಡೂರಿನ ನೇಕಾರರು ಚರಕದಿಂದ ನೂಲು ತೆಗೆಯುವುದನ್ನು ತೋರುತ್ತಿದ್ದಾರೆ. ಚೆನ್ನೈನ ತುಲಾ ಇಂಡಿಯಾದವರು ಅಪ್ಪಟ ದೇಸಿ ಹತ್ತಿಯ ಉಡುಪುಗಳನ್ನು ಮಾರಾಟ ಮಾಡುತ್ತಿದ್ದಾರೆ.

ಬೀಜ ಸಾರ್ವಭೌಮತ್ವ, ರೈತ- ವನ್ಯಜೀವಿ ಸಂಘರ್ಷಕ್ಕೆ ಪರಿಹಾರ, ಕೃಷಿಯಲ್ಲಿ ಕಾರ್ಮಿಕರು, ನೈಸರ್ಗಿಕ ಕೃಷಿಗೆ ಸರ್ಕಾರದ ನೆರವು, ಕಳೆ ಸಹಿಷ್ಣು ಕುಲಾಂತರಿ ತಳಿಗಳು ಮತ್ತು ರಾಸಾಯನಿಕ ರಹಿತ ಕಳೆ ನಿಯಂತ್ರಣ ವಿಧಾನಗಳ ಬಗ್ಗೆ ಸಮಾನಾಂತರ ಅಧಿವೇಷನಗಳು ನಡೆದವು.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ನೈಸರ್ಗಿಕ ಕೃಷಿಕರಾದ ಸುಭಾಷ್ ಶರ್ಮಾ ಮತ್ತು ಡಾ.ರಾಮಾಂಜನೇಯಲು ರೈತರಿಗೆ ಮಾರ್ಗದರ್ಶನ ನೀಡಿದರು.
ಕೃಷಿ ಮತ್ತು ಪರಿಸರ ವಿಷಯಾಧಾರಿತ ಸಾಕ್ಷ್ಯಚಿತ್ರಗಳನ್ನು ಪ್ರದರ್ಶಿಸಲಾಯಿತು. ಖ್ಯಾತ ಗಾಯಕ ವಾಸು ದೀಕ್ಷಿತ್ ಅವರು “ಸಾಂಗ್ಸ್ ಫಾರ್ ದ ಸೋಲ್” ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಶಾಲಾ ಕಾಲೇಜುಗಳ ವಿದ್ಯಾರ್ಥಿ,ವಿದ್ಯಾರ್ಥಿನಿಯರು , ಮೈಸೂರಿನ ಗ್ರಾಹಕರು ಮತ್ತು ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿದರು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9880862058/ 8105579839





