HOME

HOME

HOMENews

ಸಾಕು ಪ್ರಾಣಿಗಳಿಗೆ ಗೌರವಯುತ ಅಂತ್ಯಕ್ರಿಯೆಗಾಗಿ ಚಿತಾಗಾರ ಬೇಕು: ಸದನದಲ್ಲಿ ಶಾಸಕ ಟಿ.ಎಸ್. ಶ್ರೀವತ್ಸ ಒತ್ತಾಯ

ಮೈಸೂರಿನಲ್ಲಿ ಪ್ರಾಣಿಗಳ ಅಂತ್ಯಕ್ರಿಯೆಗೆ ಪ್ರತ್ಯೇಕ ಚಿತಾಗಾರ ಸ್ಥಾಪನೆಗೆ ಒತ್ತಾಯ

ಮೈಸೂರು: ಮನುಷ್ಯರು ನಿಧನರಾದರೆ ಗೌರವಯುತವಾಗಿ ಅಂತ್ಯಕ್ರಿಯೆ ಮಾಡಲು ಸ್ಮಶಾನ, ಚಿತಾಗಾರಗಳ ವ್ಯವಸ್ಥೆ ಇದೆ. ಆದರೆ ಸಾಕು ಪ್ರಾಣಿಗಳು ಅಥವಾ ಪ್ರಾಣಿಗಳು ಸತ್ತರೆ ಏನು ಮಾಡುವುದು ಎಂದು ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಶಾಸಕ ಟಿ.ಎಸ್.ಶ್ರೀವತ್ಸ ಅವರು ಸ್ವಾರಸ್ಯಕರ ಪ್ರಶ್ನೆಯನ್ನು ಸದನದ ಮುಂದಿಟ್ಟರು.

ವಿಧಾನಸಭೆಯಲ್ಲಿ ನಡೆಯುತ್ತಿರುವ ಬಜೆಟ್ ಅಧಿವೇಶನದ ಪ್ರಶ್ನೋತ್ತರ ಅವಧಿಯಲ್ಲಿ ಮಾತನಾಡಿದ ಅವರು, ಮೈಸೂರು ನಗರದಲ್ಲಿ ಪ್ರಾಣಿಗಳು ಹಾಗೂ ಸಾಕು ಪ್ರಾಣಿಗಳ ಅಂತ್ಯಕ್ರಿಯೆಗಾಗಿ ಪ್ರತ್ಯೇಕ ಚಿತಾಗಾರದ ವ್ಯವಸ್ಥೆ ಮಾಡುವಂತೆ ಒತ್ತಾಯ ಮಾಡಿದರು.

ಮೈಸೂರು ನಗರದಲ್ಲಿ ಹೆಚ್ಚಿನ ಸಂಖ್ಯೆಯ ಟಾಂಗಾ ಗಾಡಿಗಳಿವೆ. ಜೀವನೋಪಾಯಕ್ಕಾಗಿ ಜನರು ಹಸುಗಳನ್ನೂ ಸಾಕುತ್ತಿದ್ದಾರೆ. ಅನೇಕರು 10-12 ವರ್ಷ ನಾಯಿ, ಬೆಕ್ಕು ಮುಂತಾದ ಪ್ರಾಣಿಗಳನ್ನು ಬಹಳ ಪ್ರೀತಿಯಿಂದ ಸಲುಹಿರುತ್ತಾರೆ. ಅವುಗಳ ಮೃತಪಟ್ಟರೆ ಗೌರವಯುತವಾಗಿ ಅಂತ್ಯಕ್ರಿಯೆ ಮಾಡಲು ವ್ಯವಸ್ಥೆಯೇ ಇಲ್ಲ.

ಮನೆಯಲ್ಲಿ ದೊಡ್ಡ ಜಾಗದಲ್ಲಿವಿದ್ದರೆ ಗುಂಡಿ ತೋಡಿ ಮೃತ ನಾಯಿ, ಬೆಕ್ಕುಗಳನ್ನು ಹೂತುಹಾಕುತ್ತಾರೆ. ಜಾಗ ಇಲ್ಲದವರು ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಆಗುತ್ತಿಲ್ಲ. ಇನ್ನು ಲಾರಿ, ಕಾರಿನ ಚಕ್ರಕ್ಕೆ ಸಿಲುಕಿ ನಾಯಿ ಮೃತಪಟ್ಟರೆ ಅವುಗಳನ್ನು ಎತ್ತಿಕೊಂಡು ಹೋಗಲು ಆಂಬುಲೆನ್ಸ್ ಮಾದರಿಯ ವಾಹನ ಇಲ್ಲ. ಒಂದು ವೇಳೆ ಮೃತ ನಾಯಿಯ ದೇಹವನ್ನು ಚರಂಡಿಯಲ್ಲಿ ಬಿಸಾಡಿದರೆ ʼಸ್ವಚ್ಛ ನಗರʼ ಎನ್ನುವ ಹೆಸರು ಕೆಡಲೂ ಕಾರಣವಾಗುತ್ತದೆ ಎಂದು ವಿವರಿಸಿದರು.

ಆದ್ದರಿಂದ, ಮನುಷ್ಯರ ಮೃತದೇಹಗಳ ಅಂತ್ಯಕ್ರಿಯೆಗಾಗಿ ನಿರ್ಮಿಸಿರುವ ಚಿತಾಗಾರದ ಆವರಣದಲ್ಲಿ ಪ್ರಾಣಿಗಳಿಗೂ ಪ್ರತ್ಯೇಕವಾದ ಸುಡುವ ಚಿತಾಗಾರ ನಿರ್ಮಿಸಬೇಕು. ಪ್ರತ್ಯೇಕವಾದ ವಾಹನವನ್ನು ನೀಡಬೇಕು ಎಂದು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ, ಶ್ರೀವತ್ಸ ಅವರು ಮಂಡಿಸಿರುವ ಪ್ರಸ್ತಾಪವು ಇಡೀ ದೇಶದಲ್ಲೇ ಎಲ್ಲೂ ಇಲ್ಲ. ನಾನೂ ಇದೇ ಮೊದಲ ಬಾರಿಗೆ ಇಂತಹ ವಿಚಾರ ಕೇಳುತ್ತಿದ್ದೇನೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮೈಸೂರಿನಲ್ಲಿ ಪ್ರಾಣಿಜನ್ಯ ತ್ಯಾಜ್ಯಗಳ ವಿಲೇವಾರಿಗಾಗಿ ರಾಯನಕೆರೆಯಲ್ಲಿ 5 ಎಕರೆ ಜಾಗದಲ್ಲಿ ಘಟಕ ನಿರ್ಮಿಸಲಾಗಿದೆ. ಸಣ್ಣ ಪ್ರಾಣಿಗಳಾದರೆ ಕಸದ ಆಟೋಗಳಲ್ಲಿ, ದೊಡ್ಡ ಪ್ರಾಣಿಗಳಾದರೆ ಟಿಪ್ಪರ್ಗಳಲ್ಲಿ ಸಾಗಿಸಿ ಹೂತುಹಾಕಲಾಗುತ್ತಿದೆ. ಮನುಷ್ಯರ ಚಿತಾಗಾರದ ಆವರಣದಲ್ಲೇ ಪ್ರತ್ಯೇಕವಾಗಿ ಪ್ರಾಣಿಗಳಿಗೂ ಸುಡುವ ಚಿತಾಗಾರ ನಿರ್ಮಿಸುವುದು ಒಳ್ಳೆಯ ಸಲಹೆ. ಸಂಬಂಧಪಟ್ಟ ಸಚಿವರಿಂದ ಸೂಕ್ತ ಉತ್ತರ ಕೊಡಿಸುತ್ತೇನೆ ಎಂದರು.

1 9 10 11 12 13 52
Page 11 of 52