HOME

HOME

HOMENews

ಕಾಂಗ್ರೆಸ್ ಸರ್ಕಾರ ಭ್ರಷ್ಟ ಲೂಟಿ ಸರ್ಕಾರ: ಜೆಡಿಎಸ್ ಕಾರ್ಯಕರ್ತರಿಗೆ ಹೋರಾಟಕ್ಕೆ ಕುಮಾರಸ್ವಾಮಿ ಕರೆ

ವರದಿ:-ವಡ್ಡರಕೊಪ್ಪಲು ಶಿವರಾಮು.

ಕೆ ಆರ್ ನಗರ. ಫೆ. 26:- ರಾಜ್ಯದ ಅತ್ಯಂತ ಭ್ರಷ್ಟ ಲೂಟಿ ಸರ್ಕಾರ ಕಾಂಗ್ರೆಸ್ ಸರ್ಕಾರವಾಗಿದ್ದು ಅಧಿಕಾರದ ಆಸೆಗಾಗಿ ರಾಜ್ಯದ ಅಭಿವೃದ್ಧಿಯನ್ನೇ ಮೈ ಮರೆತು ಕುರ್ಚಿಗಾಗಿ ಕಿತ್ತಾಡುತ್ತಿರುವ ಈ ಸರ್ಕಾರವನ್ನು ಕಿತ್ತೊಗೆಯಲು ಇಂದಿನಿಂದಲೇ ಪ್ರತಿಜ್ಞೆ ಮಾಡಿ ಎಂದು ಜೆಡಿಎಸ್ ಕಾರ್ಯಕರ್ತರಿಗೆ ಮಾಜಿ ಮುಖ್ಯಮಂತ್ರಿ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಕರೆ ಕೊಟ್ಟರು.
ಪಟ್ಟಣದಲ್ಲಿ ಗುರುವಾರ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು ಬೆಲೆಕುಸಿತದಿಂದ ಕಂಗಾಲಾಗಿರುವ ತಂಬಾಕು ಬೆಳೆಗಾರರ ಹಿತಕಾಯುವ ನಿಟ್ಟಿನಲ್ಲಿ ವಾಣಿಜ್ಯ ಸಚಿವ ಪಿಯೂಸ್ ಗೋಯಲ್ ಅವರನ್ನು ಶೀಘ್ರದಲ್ಲೆ ಭೇಟಿ ಮಾಡಿ ಚರ್ಚಿಸಲಾಗುವುದು ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ತಿಳಿಸಿದರು.
ಪಿಯೂಸ್ ಗೋಯಲ್ ಅವರು ನಿರಂತರ ಕಾರ್ಯಕ್ರಮಗಳ ಒತ್ತಡದಲ್ಲಿದ್ದು,ಮಾರ್ಚ್ ಒಂದರಂದು ಅವರನ್ನು ಭೇಟಿ ಮಾಡುತ್ತೇನೆ. ಕಳೆದ ವರ್ಷ ತಂಬಾಕಿಗೆ ಬೆಲೆ ಕುಸಿತವಾದಾಗ ರೈತರ ನಿಯೋಗದೊಂದಿಗೆ ಭೇಟಿ ಮಾಡಿ ಪಿಯೂಷ್ ಗೋಯಲ್ ಅವರಿಗೆ ಸಮಸ್ಯೆ ಮನವರಿಕೆ ಮಾಡಿದ್ದೆ. ಪರಿಣಾಮ ಉತ್ತಮ ಬೆಲೆ ದೊರಕಿತ್ತು.ಈ ಬಾರಿಯೂ ತಂಬಾಕಿಗೆ ನ್ಯಾಯಯುತ ದರ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.


ಜನರ ಸಮಸ್ಯೆಗೆ ಸ್ಪಂದಿಸುವ ಸರಕಾರ ತನ್ನಿ:ನಿರುದ್ಯೋಗ ಸಮಸ್ಯೆ ನಿವಾರಿಸಲು ,ರೈತರ ಬೆಳೆಗೆ ಉತ್ತಮ ಬೆಲೆ ಕೊಡಿಸಲು ರಾಜ್ಯದ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ.ಯುವನಿಧಿ ಯಾರಿಗೆ ಕೊಟ್ಟಿದ್ದಾರೋ ಗೊತ್ತಿಲ್ಲ.ಯುವಜನತೆಗೆ ಉದ್ಯೋಗ ಕೊಡಲು ಸಾಧ್ಯವಾಗಿಲ್ಲ.ನಾನು ಮೊದಲಬಾರಿ ಸಿಎಂ ಆಗಿದ್ದಾಗ 56 ಸಾವಿರ ಮಂದಿಗೆ ಉದ್ಯೋಗ ಕಲ್ಪಿಸಿದ್ದೆ.ಶಿಕ್ಷಣ ಸಂಸ್ಥೆಗಳನ್ನು ತೆರೆಯುವುದರ ಜೊತೆಗೆ ಸಾಕಷ್ಟು ಉದ್ಯೋಗ ನೀಡಿದ್ದೆ.ದೇಶದಲ್ಲಿ ತೆರಿಗೆ ಕಟ್ಟುವಲ್ಲಿ ಎರಡನೆ ಸ್ಥಾನದಲ್ಲಿರುವ ಸಂಪದ್ಬರಿತ ರಾಜ್ಯ ಕರ್ನಾಟಕದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರಕಾರಕ್ಕೆ ಯಾವುದಕ್ಕೆ ಆದ್ಯತೆ ನೀಡಬೇಕೆಂಬುದು ಗೊತ್ತಿಲ್ಲ ಎಂದು ಟೀಕಿಸಿದರು.
ಈ ಸರಕಾರ 37 ಸಾವಿರ ಕೋಟಿ ಬಾಕಿ ಉಳಿಸಿಕೊಂಡು ಗುತ್ತಿಗೆದಾರರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.ನಾನು ಹಾಗು ಸಹೋದರ ಹೆಚ್.ಡಿ.ರೇವಣ್ಣನವರು ಅಧಿಕಾರದಲ್ಲಿದ್ದಾಗ ಗುತ್ತಿಗೆದಾರರಿಗೆ ಸಕಾಲಕ್ಕೆ ಹಣ ಪಾವತಿಸಿದ್ದೆವು.ನಾನು ಹೆಚ್ಚಿನ ತೆರಿಗೆ ವಿಧಿಸದೆ ಬರುವ ಆದಾಯದಲ್ಲೆ ಸಹಸ್ರಾರು ರೈತರ 25 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಸಾಲ ಮನ್ನಾ ಮಾಡಿದ್ದೆ.ರಾಜ್ಯದ ಜನತೆಯ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡದ ಭ್ರಷ್ಟ ಕಾಂಗ್ರೆಸ್ ಸರಕಾರವನ್ನು ತೊಲಗಿಸಿ ಉತ್ತಮ ಸರಕಾರವನ್ನು ಅಧಿಕಾರಕ್ಕೆ ತನ್ನಿ ಎಂದು ಮನವಿ ಮಾಡಿದರು.
ಕೆ.ಆರ್.ನಗರ ವಿಧಾನಸಭಾ ಕ್ಷೇತ್ರವನ್ನು ಅಭಿವೃದ್ದಿಯೆಡೆಗೆ ಕೊಂಡೋಯ್ದಿದ್ದ ಸಾ.ರಾ.ಮಹೇಶ್ ಅವರನ್ನೆ ಸೋಲಿಸಿದಿರಲ್ಲ.ಅವರೇನು ತಪ್ಪು ಮಾಡಿದ್ದರು.ಪ್ರತಿನಿತ್ಯ ತೆರಿಗೆ ಹಣ ಲೂಟಿ ಹೊಡೆಯುವವರನ್ನು ಆಯ್ಕೆ ಮಾಡಿದರೆ ನಿಮ್ಮ ಸಂಕಷ್ಟಕ್ಕೆ ಸ್ಪಂದಿಸುವರೆ? ಎಂದು ಪ್ರಶ್ನಿಸಿದರು.ನಾನು ಎಲ್ಲೆ ಹೋದರೂ ಜನ ಸಾಕಷ್ಟು ಸಂಖ್ಯೆಯಲ್ಲಿ ನೆರೆದಿರುತ್ತಾರೆ.ಆದರೆ ನಿರೀಕ್ಷೆಯಂತೆ ನಮ್ಮ ಪಕ್ಷಕ್ಕೆ ಮತ ಬೀಳುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.


ಸಹೋದರನನ್ನು ಶ್ಳಾಘಿಸಿದ ಹೆಚ್ಡಿಕೆ: ಗುಜರಾತ್ ಅಮೂಲ್ ಸಂಸ್ಥೆಯ ಸರಿಸಮವಾಗಿ ಕರ್ನಾಟಕದ ಕೆಎಂಎಫ್ ಅನ್ನು ಉತ್ತುಂಗಕ್ಕೇರಿಸಿದ ಕೀರ್ತಿ ಸಹೋದರ ಹೆಚ್.ಡಿ.ರೇವಣ್ಣ ಅವರಿಗೆ ಸಲ್ಲಬೇಕು.ಕೆಎಂಎಫ್ ಅಧ್ಯಕ್ಷನಾಗಿದ್ದಾಗ ಹೆಚ್ಚು ಹಾಲು ಉತ್ಪಾದನೆಗೆ ಕ್ರಮ ಕೈಗೊಂಡು ನಷ್ಟದಲ್ಲಿದ್ದ ರಾಜ್ಯದ ಎಲ್ಲಾ 13 ಹಾಲು ಒಕ್ಕೂಟಗಳನ್ನು ಆರ್ಥಿಕವಾಗಿ ಹಳಿಗೆ ತಂದಿದ್ದು ಹೆಚ್.ಡಿ.ರೇವಣ್ಣ.ಕೃಷಿಯಲ್ಲಿ ಜೀವನ ಮಾಡಲು ಸಾಧ್ಯವಾಗದ ಪರಿಸ್ಥಿತಿಯಲ್ಲಿದ್ದಾಗ ರೈತರು ಹೈನುಗಾರಿಕೆಯಲ್ಲಿ ತೊಡಗಿ ಜೀವನ ರೂಪಿಸಿಕೊಳ್ಳಲು ನೆರವಾದದ್ದು ಹೆಚ್.ಡಿ.ರೇವಣ್ಣ.ಆದರೆ ಪ್ರಸ್ತುತ ಹೈನುಗಾರಿಕೆಯಲ್ಲಿ ಸಾಧನೆ ಮಾಡಿದ್ದೇವೆ ಎಂದು ಕೆಲವರು ಜಂಭ ಕೊಚ್ಚಿಕೊಳ್ಳುತ್ತಾರೆ ಎಂದು ನುಡಿದರು.

1 23 24 25 26 27 51
Page 25 of 51