News

News National and International

HOMENews

ರಾಗಿ ಖರೀದಿ ಕೇಂದ್ರದಲ್ಲಿ ಅವ್ಯವಸ್ಥೆ ಆರೋಪ: ಮಾಜಿ ಸಚಿವ ಸಾ.ರಾ. ಮಹೇಶ್–ಸಿ.ಎನ್.ಮಂಜೇಗೌಡ ದಿಢೀರ್ ಭೇಟಿ

ವರದಿ :-ವಡ್ಡರಕೊಪ್ಪಲು ಶಿವರಾಮು.

ಕೆ.ಆರ್.ನಗರ. ಏ 02:- ಪಟ್ಟಣದ ಎಪಿಎಂಸಿ ಆವರಣದಲ್ಲಿರುವ ರಾಗಿ ಖರೀದಿ ಕೇಂದ್ರಕ್ಕೆ ಮಾಜಿ ಸಚಿವ ಸಾ.ರಾ.ಮಹೇಶ್ ಮತ್ತು ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕೇಂದ್ರದಲ್ಲಿ ರಾಗಿ ಮಾರಾಟ ಮಾಡುವ ರೈತರಿಗೆ ತೊಂದರೆಯಾಗುತ್ತಿದೆ ಮತ್ತು ತೂಕದಲ್ಲಿ ವ್ಯತ್ಯಾಸ ಮಾಡುತ್ತಿದ್ದಾರೆ ಎಂಬ ರೈತರ ದೂರಿನ ಹಿನ್ನಲೆಯಲ್ಲಿ ಭೇಟಿ ನೀಡಿದ ಅವರು ಅಧಿಕಾರಿಗಳು ಮತ್ತು ರೈತರೊಂದಿಗೆ ಚರ್ಚೆ ನಡೆಸಿದರು.

ಸರ್ಕಾರದ ಆದೇಶದನ್ವಯ ಪ್ರತಿ 50 ಕೆ.ಜಿ.ರಾಗಿ ಚೀಲದಲ್ಲಿ ಎಷ್ಟು ತೂಕ ಕಳೆಯ ಬೇಕು ಮತ್ತು ಪ್ರತಿ ಕ್ವಿಂಟಾಲ್ ರಾಗಿಗೆ ಎಷ್ಟು ಹಣ ನೀಡಲಾಗುತ್ತದೆ ಎಂಬ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ ಮಾಜಿ ಸಚಿವರು ಮತ್ತು ವಿಧಾನ ಪರಿಷತ್ ಸದಸ್ಯರು ಮುಂದಿನ ದಿನಗಳಲ್ಲಿ ಯಾವುದೇ ದೂರುಗಳು ಬಾರದಂತೆ ಕಾರ್ಯ ನಿರ್ವಹಿಸಬೇಕು ಎಂದು ಸೂಚಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳು, ಆಹಾರ ಇಲಾಖೆ ಜಂಟಿ ನಿರ್ದೇಶಕರು, ತಹಶೀಲ್ದಾರ್ ರು ಹಾಗೂ ಸಂಬಂಧಿತ ಇಲಾಖೆಯ ಅಧಿಕಾರಿಗಳೊಡನೆ ದೂರವಾಣಿಯಲ್ಲಿ ಮಾತನಾಡಿದ ಸಾ.ರಾ.ಮಹೇಶ್ ಇಲ್ಲಿನ ರಾಗಿ ಖರೀದಿ ಕೇಂದ್ರದಲ್ಲಿ ಕೆಲವು ಅವ್ಯವಸ್ಥೆಗಳು ಇರುವ ಬಗ್ಗೆ ರೈತರಿಂದ ದೂರುಗಳು ಬಂದಿದ್ದು ಈ ಸಂಬಂಧ ಸ್ಥಳಕ್ಕೆ ಭೇಟಿ ನೀಡಿ ಖುದ್ದು ಪರಿಶೀಲನೆ ನಡೆಸಬೇಕೆಂದು ತಿಳಿಸಿದರು.

ಮಾಜಿ ಸಚಿವರು ಮತ್ತು ವಿಧಾನ ಪರಿಷತ್ ಸದಸ್ಯರು ರಾಗಿ ಖರೀದಿ ಕೇಂದ್ರಕ್ಕೆ ಭೇಟಿ ನೀಡಿರುವ ವಿಚಾರ ತಿಳಿದ ತಹಶೀಲ್ದಾರ್ ಜಿ.ಸುರೇಂದ್ರಮೂರ್ತಿ ಸ್ಥಳಕ್ಕೆ ದೌಡಾಯಿಸಿದರಲ್ಲದೆ ಅವರೊಂದಿಗೆ ಮಾತನಾಡಿ ಪೂರ್ಣ ಮಾಹಿತಿ ನೀಡಿ ಮುಂದಿನ ದಿನಗಳಲ್ಲಿ ಯಾವುದೇ ಅವ್ಯವಸ್ಥೆಗಳಾಗದೆ ರೈತರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದಾಗಿ ಹೇಳಿದರು.

 

ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಾ.ರಾ.ಮಹೇಶ್ ಸರ್ಕಾರದ ನಿಯಮದಂತೆಯೇ ರಾಗಿ ಖರೀದಿ ಮಾಡಬೇಕು ಅದನ್ನು ಹೊರತು ಪಡಿಸಿ ತೂಕದಲ್ಲಿ ವ್ಯತ್ಯಾಯ ಮಾಡಿ ರೈತರಿಗೆ ತೊಂದರೆ ನೀಡಿದರೆ ಸಹಿಸಲು ಸಾಧ್ಯವಿಲ್ಲ ಎಂದರಲ್ಲದೆ ಇಂತಹ ವಿಚಾರದಲ್ಲಿ ರಾಗಿ ಸರಬರಾಜು ಮಾಡುವವರು ಯಾವುದೇ ಅಂಜಿಕೆ ಇಲ್ಲದೆ ತಮಗಾಗುತ್ತಿರುವ ತೊಂದರೆಯ ಬಗ್ಗೆ ನಿರ್ಭಯವಾಗಿ ದೂರು ನೀಡಬೇಕು ಎಂದು ಸಲಹೆ ನೀಡಿದರು.

ಆಹಾರ ಶಿರಸ್ತೇದಾರ ಸುರೇಶ್, ರಾಗಿ ಖರೀದಿ ಕೇಂದ್ರದ ಮೇಲ್ವಿಚಾರಕ ಶರತ್, ಜೆಡಿಎಸ್ ಮುಖಂಡ ಪಿ.ಸುರೇಶ್ ಮತ್ತು ರೈತರುಗಳು ಹಾಜರಿದ್ದರು.

1 10 11 12 13 14 63
Page 12 of 63