News

News National and International

HOMENews

ಸಂಘಟಿತ ಹೋರಾಟಕ್ಕೆ ಸಂದ ಜಯ: ಕೆಎಸ್‌ಐಸಿ ಆವರಣದಲ್ಲಿ ಸ್ಡೇಡಿಯಂ ನಿರ್ಮಾಣ ಯೋಜನೆಗೆ ತಿಲಾಂಜಲಿ: ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌

ಹೋರಾಟಕ್ಕೆ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಕೈಜೋಡಿಸಿದವರೆಲ್ಲರಿಗೂ ಧನ್ಯವಾದ ಸಲ್ಲಿಸಿದ ಯದುವೀರ್‌ ಒಡೆಯರ್‌

ಮೈಸೂರು ಮಾ. 9:- ವಿಶ್ವಮಟ್ಟದಲ್ಲಿ ಖ್ಯಾತಿ ತಂದುಕೊಟ್ಟಿರುವ ಮೈಸೂರು ಸಿಲ್ಕ್ಸ್‌ ಪ್ರಿಯರಿಗೆ ಸಂತಸದ ಸುದ್ದಿ. ಟಿ. ನರಸೀಪುರದ ಕೆಎಸ್‌ಐಸಿ ಫಿಲೇಚರ್‌ ಕಾರ್ಖಾನೆ ಆವರಣದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದ್ದ ಸ್ಡೇಡಿಯಂ ಯೋಜನೆಯನ್ನು ಸರ್ಕಾರ ಕೈಬಿಟ್ಟಿದೆ. ಇದು ನಿಜಕ್ಕೂ ಸಂತಸದ ಸುದ್ದಿ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದರಾದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ತಿಳಿಸಿದ್ದಾರೆ.

ಸ್ಡೇಡಿಯಂ ನಿರ್ಮಾಣ ಯೋಜನೆಯನ್ನು ಕೈಬಿಡಲಾಗಿದೆ ಎಂದು ಸಚಿವ ಕೆ.ವೆಂಕಟೇಶ್‌ ವಿಧಾನ ಮಂಡಲ ಅಧಿವೇಶನದಲ್ಲಿ ಘೋಷಣೆ ಮಾಡಿರುವ ಕುರಿತು ಯದುವೀರ್‌ ಒಡೆಯರ್‌ ಪ್ರತಿಕ್ರಿಯೆ ನೀಡಿದರು.

ಸರ್ಕಾರದ ಈ ತೀರ್ಮಾವನ್ನು ಸ್ವಾಗತಿಸುತ್ತೇನೆ. ಇದು ಸಂಘಟಿತ ಹೋರಾಟಕ್ಕೆ ಸಿಕ್ಕಿರುವ ಜಯ. ಕಾರ್ಮಿಕರು ನಡೆಸುತ್ತಿದ್ದ ಪ್ರತಿಭಟನೆಯಲ್ಲಿ ನಾನೂ ಸೇರಿದಂತೆ ನಮ್ಮ ಬಿಜೆಪಿಯ ಹಲವಾರು ನಾಯಕರು ಭಾಗವಹಿಸಿದ್ದರು. ಈಗ ಸರ್ಕಾರ ಯೋಜನೆ ಕೈಬಿಟ್ಟಿರುವುದು ಸ್ವಾಗತಾರ್ಹ ಎಂದರು.

ಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ಅವರೊಂದಿಗೆ ಪಾಲ್ಗೊಂಡು ನೈತಿಕವಾಗಿ ಬೆಂಬಲ ನೀಡಿದ್ದೆ. ನಂತರ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ, ಸ್ಡೇಡಿಯಂ ನಿರ್ಮಾಣ ಯೋಜನೆ ಕೈಬಿಡುವಂತೆ ವೈಯಕ್ತಿಕವಾಗಿ ಮನವಿಯನ್ನೂ ಸಲ್ಲಿಸಿದ್ದೆ. ಇಲ್ಲಿ ಸ್ಡೇಡಿಯಂ ನಿರ್ಮಿಸಿದರೆ ನೂರಾರು ಕಾರ್ಮಿಕರ ಬದುಕು ದುಸ್ತರವಾಗುತ್ತದೆ. ಮತ್ತೆ ಇಲ್ಲಿರುವ ೫೦೦ಕ್ಕೂ ಹೆಚ್ಚು ಐತಿಹಾಸಿಕ ಮರಗಳಿಗೂ ಕೊಡಲಿ ಪೆಟ್ಟು ಬೀಳುತ್ತದೆ. ಹೀಗಾಗಿ ಯೋಜನೆ ಕೈಬಿಡುವಂತೆ ಮನವಿ ಸಲ್ಲಿಸಿದ್ದೆ ಎಂದರು.

 

ಕಾರ್ಮಿಕರ ಜೊತೆಗೆ ಬಿಜೆಪಿಯ ಕಾರ್ಯಕರ್ತರು, ಪ್ರಮುಖ ನಾಯಕರು, ಪರಿಸರವಾದಿಗಳು ಇತರೆ ಸಂಘ-ಸಂಸ್ಥೆಗಳು ಹೋರಾಟ ನಡೆಸಿದ ಫಲವಾಗಿ ಈಗ ಗೆಲುವು ಸಿಕ್ಕಿದೆ. ಈ ಹೋರಾಟದಲ್ಲಿ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಕೈಜೋಡಿಸಿದ ಎಲ್ಲರಿಗೂ ವೈಯಕ್ತಿಕವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಸಂಸದ   ಯದುವೀರ್‌ ಒಡೆಯರ್‌ ತಿಳಿಸಿದರು.

1 30 31 32 33 34 63
Page 32 of 63