News

News National and International

HOMENews

ಕೊಪ್ಪಳದಲ್ಲಿ ‘ಲವ್ ಜಿಹಾದ್’ ಆರೋಪ: ಯುವಕನ ಮೊಬೈಲ್‌ನಲ್ಲಿ ಅನೇಕ ಯುವತಿಯರ ಫೋಟೋ ವೀಡಿಯೋ ಪತ್ತೆ, ತನಿಖೆಗೆ ಒತ್ತಾಯ

ಕೊಪ್ಪಳ, ಏಪ್ರಿಲ್ 11:-  ಹುಬ್ಬಳ್ಳಿಯ ನಂತರ ಇದೀಗ ಕೊಪ್ಪಳ ಜಿಲ್ಲೆಯಲ್ಲಿಯೂ ‘ಲವ್ ಜಿಹಾದ್’ ಆರೋಪ ಕೇಳಿಬಂದಿದ್ದು, ಯುವಕನೊಬ್ಬನ ಮೊಬೈಲ್‌ನಲ್ಲಿ ಅನೇಕ ಯುವತಿಯರ ಫೋಟೋ ಹಾಗೂ ವೀಡಿಯೋಗಳು ಪತ್ತೆಯಾದ ಪ್ರಕರಣ ಸ್ಥಳೀಯವಾಗಿ ಚರ್ಚೆಗೆ ಗ್ರಾಸವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಧ ಸಂಘಟನೆಗಳು ಪೊಲೀಸ್ ಇಲಾಖೆಗೆ ದೂರು ನೀಡಿದ್ದು, ಸಮಗ್ರ ತನಿಖೆಗೆ ಒತ್ತಾಯಿಸಿದ್ದಾರೆ.

ಕೊಪ್ಪಳ ತಾಲೂಕಿನ ಕಂಪ್ಲಿ ಗ್ರಾಮದ ಮುಸ್ತಫಾ ಎಂಬ ಯುವಕನ ವಿರುದ್ಧ ಈ ಆರೋಪ ಕೇಳಿಬಂದಿದೆ. ಮೂಲಗಳ ಪ್ರಕಾರ, ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿಯೊಬ್ಬಳನ್ನು ಪರಿಚಯ ಮಾಡಿಕೊಂಡು ಆಕೆಯನ್ನು ತನ್ನ ಪ್ರೀತಿಗೆ ಒಳಪಡಿಸಿದ್ದಾನೆ ಎನ್ನಲಾಗಿದೆ. ಈ ಹಿನ್ನೆಲೆ ಇಬ್ಬರೂ ಹಲವು ಕಡೆಗಳಿಗೆ ತೆರಳಿದ್ದು, ಸಂಬಂಧ ಗಾಢವಾಗಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ :- ಮದುವೆಯಾಗುವುದಾಗಿ  ನಂಬಿಸಿ ಕೈಕೊಟ್ಟ ಇಂಜಿನಿಯರ್ : ಫೋಟೋ ವೀಡಿಯೋ ಸಾಕ್ಷ್ಯಗಳೊಂದಿಗೆ ಮಹಿಳೆಯ ದೂರು

ಮೂರು ದಿನಗಳ ಹಿಂದೆ ಜಿಲ್ಲಾಸ್ಪತ್ರೆ ಸಮೀಪ ಇಬ್ಬರೂ ಇದ್ದಾಗ ಕೆಲವು ಸಂಘಟನೆಗಳ ಕಾರ್ಯಕರ್ತರು ಇವರನ್ನು ಪ್ರಶ್ನಿಸಿದ್ದು, ಬಳಿಕ ಮುಸ್ತಫಾ ಬಳಿಯಿದ್ದ ಮೊಬೈಲ್‌ನ್ನು ಪರಿಶೀಲಿಸಿದ ವೇಳೆ ಹಲವಾರು ಯುವತಿಯರೊಂದಿಗೆ ತೆಗೆದಿರುವ ಫೋಟೋಗಳು ಮತ್ತು ವೀಡಿಯೋಗಳು ಪತ್ತೆಯಾಗಿವೆ ಎಂದು ಆರೋಪಿಸಲಾಗಿದೆ. ಈ ವೀಡಿಯೋಗಳಲ್ಲಿ ಕೆಲವು ಯುವತಿಯರು ಮದ್ಯಪಾನ ಮಾಡುತ್ತಿರುವುದು, ಮಾಂಸಾಹಾರ ಸೇವಿಸುತ್ತಿರುವುದು ಹಾಗೂ ಅಶ್ಲೀಲ ಸ್ಥಿತಿಗಳಲ್ಲಿ ಕಾಣಿಸಿಕೊಂಡಿರುವ ದೃಶ್ಯಗಳೂ ಇದ್ದವೆ ಎಂದು ಕಾರ್ಯಕರ್ತರು ಹೇಳಿದ್ದಾರೆ. ಜೊತೆಗೆ ಗಾಂಜಾ ಮತ್ತು ಹುಕ್ಕಾ ಬಳಸುತ್ತಿರುವ ದೃಶ್ಯಗಳೂ ಕಂಡುಬಂದಿವೆ ಎಂಬ ಆರೋಪಗಳೂ ಕೇಳಿಬಂದಿವೆ.

ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ಸ್ಥಳೀಯವಾಗಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಹಿಂದೂ ಜಾಗರಣಾ ವೇದಿಕೆ ಹಾಗೂ ವಿಶ್ವ ಹಿಂದೂ ಪರಿಷತ್ನ ಮುಖಂಡರು ಪೊಲೀಸ್ ಅಧಿಕಾರಿಗಳನ್ನು ಭೇಟಿಯಾಗಿ ವಿಷಯವನ್ನು ಗಮನಕ್ಕೆ ತಂದಿದ್ದಾರೆ. ಆರೋಪಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಈ ಹಿಂದೆ ಇಂತಹ ಪ್ರಕರಣಗಳು ನಡೆದಿವೆಯೇ ಎಂಬುದನ್ನು ಸಹ ಪರಿಶೀಲಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.

ಇನ್ನೊಂದೆಡೆ, ಮುಸ್ತಫಾ ಮಟ್ಕಾ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡಿದ್ದಾನೆ ಎಂಬ ಶಂಕೆಯೂ ವ್ಯಕ್ತವಾಗಿದೆ. ಆದರೆ ಈ ಬಗ್ಗೆ ಇನ್ನೂ ಅಧಿಕೃತ ದೃಢೀಕರಣವಾಗಿಲ್ಲ.

ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಅರಸಿದ್ದಿ ಪ್ರತಿಕ್ರಿಯಿಸಿ, “ಪ್ರಕರಣದ ಬಗ್ಗೆ ದೂರು ಬಂದಿದ್ದು, ಸಂಬಂಧಿಸಿದ ಎಲ್ಲಾ ಅಂಶಗಳನ್ನು ಪರಿಶೀಲಿಸಲಾಗುತ್ತಿದೆ. ಮೊಬೈಲ್‌ನಲ್ಲಿರುವ ಡೇಟಾ ಪರಿಶೀಲನೆ, ಸಂಬಂಧಿತ ವ್ಯಕ್ತಿಗಳ ಹೇಳಿಕೆ ದಾಖಲಿಸುವುದು ಸೇರಿದಂತೆ ತನಿಖೆ ಪ್ರಗತಿಯಲ್ಲಿದೆ. ಯಾವುದೇ ಆರೋಪ ಸತ್ಯಾಸತ್ಯತೆ ಆಧರಿಸಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ” ಎಂದು ತಿಳಿಸಿದ್ದಾರೆ.

ಪ್ರಕರಣವು ಸಂವೇದನಾಶೀಲ ಸ್ವರೂಪದ್ದಾಗಿರುವುದರಿಂದ, ಪೊಲೀಸರು ಸಾರ್ವಜನಿಕರು ಶಾಂತಿ ಕಾಪಾಡಿಕೊಳ್ಳುವಂತೆ ಮನವಿ ಮಾಡಿದ್ದಾರೆ. ತನಿಖೆಯ ಬಳಿಕವೇ ನಿಜಸ್ಥಿತಿ ಹೊರಬರುವ ಸಾಧ್ಯತೆಯಿದೆ.

1 4 5 6 7 8 63
Page 6 of 63