News

News National and International

HOMENews

ದೇಶದಲ್ಲಿ ಭಾರೀ ಮಳೆ, ಬಿರುಗಾಳಿ ಎಚ್ಚರಿಕೆ: ಮಾ.24ರವರೆಗೆ ಹವಾಮಾನ ಅಸ್ಥಿರತೆ ಸಾಧ್ಯ

ನವದೆಹಲಿ, ಮಾ.22: ದೇಶದಲ್ಲಿ ಬೇಸಿಗೆ ಕಾಲ ನಿಧಾನವಾಗಿ ಆರಂಭವಾಗುತ್ತಿರುವ ನಡುವೆಯೇ ಹವಾಮಾನದಲ್ಲಿ ಅಚ್ಚರಿಯ ತಿರುವು ಕಂಡುಬರುತ್ತಿದೆ. ಭಾರತೀಯ ಹವಾಮಾನ ಇಲಾಖೆ (IMD) ನೀಡಿರುವ ಮುನ್ಸೂಚನೆಯ ಪ್ರಕಾರ, ಮಾ.24ರವರೆಗೆ ದೇಶದ ಹಲವು ರಾಜ್ಯಗಳಲ್ಲಿ ಗುಡುಗು, ಆಲಿಕಲ್ಲು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಕೆಲವು ಪ್ರದೇಶಗಳಲ್ಲಿ ಬಿರುಗಾಳಿಯೂ ಬೀಸುವ ಸಂಭವವಿದೆ.

ವಿಶೇಷವಾಗಿ ಪಶ್ಚಿಮ ಬಂಗಾಳ, ಸಿಕ್ಕಿಂ ಮತ್ತು ಒಡಿಶಾ ರಾಜ್ಯಗಳಲ್ಲಿ ವ್ಯಾಪಕ ಮಳೆಯಾಗುವ ನಿರೀಕ್ಷೆಯಿದೆ. ಈ ಪ್ರದೇಶಗಳಲ್ಲಿ ಆಲಿಕಲ್ಲು ಸಹಿತ ಮಳೆಯೊಂದಿಗೆ 70 ರಿಂದ 80 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ಇಲಾಖೆ ಎಚ್ಚರಿಕೆ ನೀಡಿದೆ. ಪರಿಣಾಮವಾಗಿ ಮರಗಳು ಉರುಳುವ, ವಿದ್ಯುತ್ ವ್ಯತ್ಯಯ ಉಂಟಾಗುವಂತಹ ಪರಿಸ್ಥಿತಿಗಳು ನಿರ್ಮಾಣವಾಗಬಹುದು ಎಂದು ಸೂಚಿಸಲಾಗಿದೆ. ಸಾರ್ವಜನಿಕರು ಅನಗತ್ಯವಾಗಿ ಹೊರಗೆ ತೆರಳದಂತೆ ಹಾಗೂ ಸುರಕ್ಷತಾ ಕ್ರಮಗಳನ್ನು ಪಾಲಿಸುವಂತೆ ಮನವಿ ಮಾಡಲಾಗಿದೆ.

ಇದೇ ವೇಳೆ ಈಶಾನ್ಯ ಭಾರತ ಹಾಗೂ ಉತ್ತರ ಭಾರತದ ಹಲವೆಡೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಹವಾಮಾನದಲ್ಲಿ ಏಕಾಏಕಿ ಬದಲಾವಣೆ ಕಾಣಿಸಿಕೊಳ್ಳುತ್ತಿರುವುದರಿಂದ ಕೃಷಿ ಚಟುವಟಿಕೆಗಳ ಮೇಲೂ ಪರಿಣಾಮ ಬೀರುವ ಆತಂಕ ವ್ಯಕ್ತವಾಗಿದೆ.

ಇನ್ನೊಂದೆಡೆ, ಅತಿಯಾದ ಬಿಸಿಯಿಂದ ಬಳಲುತ್ತಿದ್ದ ದೆಹಲಿಯಲ್ಲಿ ಕಳೆದ ಕೆಲವು ದಿನಗಳಿಂದ ಮಳೆಯಾಗುತ್ತಿದ್ದು, ತಾಪಮಾನದಲ್ಲಿ 2ರಿಂದ 3 ಡಿಗ್ರಿ ಸೆಲ್ಸಿಯಸ್‌ಗಳಷ್ಟು ಇಳಿಕೆ ಕಂಡು ಬಂದಿದೆ. ಇದರಿಂದ ಜನರಿಗೆ ಸ್ವಲ್ಪ ಮಟ್ಟಿನ ತಂಪಿನ ಅನುಭವ ಸಿಕ್ಕಿದೆ.

ದಕ್ಷಿಣ ಭಾರತದಲ್ಲಿಯೂ ಹವಾಮಾನದಲ್ಲಿ ಚಲನವಲನ ಮುಂದುವರಿದಿದೆ. ಕೆಲವು ಭಾಗಗಳಲ್ಲಿ ಚದುರಿದ ಮಳೆಯಾಗುವ ಸಾಧ್ಯತೆ ಇದೆ. ಆದರೆ ಕರ್ನಾಟಕ, ಗೋವಾ ಹಾಗೂ ಕೇರಳ ರಾಜ್ಯಗಳಲ್ಲಿ ಬಿಸಿ ಮತ್ತು ಆದ್ರತೆಯ ವಾತಾವರಣ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ದೇಶದ ಹಲವೆಡೆ ಮುಂದಿನ ಕೆಲ ದಿನಗಳು ಅಸ್ಥಿರ ಹವಾಮಾನ ಮುಂದುವರಿಯಲಿದ್ದು, ಜನರು ಎಚ್ಚರಿಕೆಯಿಂದ ಇರುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.

1 22 23 24 25 26 63
Page 24 of 63