News

News National and International

HOMENews

ಹುಣಸೂರು ಬಳಿ ರೈಲ್ವೆ ತಡೆಗೋಡೆಗೆ ಸಿಲುಕಿದ ಸಲಗ – ಗ್ರಾಮಸ್ಥರ ಕೂಗಾಟ, ಆನೆ ಕಾವಲು ಪಡೆಯ ನೆರವಿನಿಂದ ಕಾಡಿಗೆ ಮರಳಿ

ಹುಣಸೂರು : ಮೇವನ್ನರಸಿ ಕಾಡಿನಿಂದ  ಹೊರಬಂದಿದ್ದ ಒಂದು ಕಾಡಾನೆ (ಸಲಗ) ರೈಲ್ವೆ ಕಂಬಿ ತಡೆಗೋಡೆಗೆ ಸಿಲುಕಿಕೊಂಡು ಕೆಲಕಾಲ ಆತಂಕ ಸೃಷ್ಟಿಸಿದ ಘಟನೆ ತಾಲೂಕಿನ ಉಡುವೆಪುರದ ಸಮೀಪ ಮಂಗಳವಾರ ರಾತ್ರಿ ನಡೆದಿದೆ.

ಮಂಗಳವಾರ ರಾತ್ರಿ ಅರಣ್ಯ ಪ್ರದೇಶದಿಂದ ಹೊರಬಂದ ಸಲಗ, ಸುತ್ತಮುತ್ತಲಿನ ರೈತರ ತೋಟಗಳಲ್ಲಿ ಸಂಚರಿಸಿ ಬೆಳೆಗಳಿಗೆ ಹಾನಿ ಉಂಟುಮಾಡಿದట్లు ಸ್ಥಳೀಯರು ತಿಳಿಸಿದ್ದಾರೆ. ರಾತ್ರಿಯಿಡೀ ತೋಟಗಳಲ್ಲಿ ತಿರುಗಾಡಿದ ಆನೆ, ಬೆಳಗಿನ ಜಾವ ಗ್ರಾಮದಲ್ಲಿ ಮಾನವರ ಓಡಾಟ ಹಾಗೂ ವಾಹನಗಳ ಶಬ್ದ ಹೆಚ್ಚಾಗುತ್ತಿದ್ದಂತೆ ಮತ್ತೆ ಕಾಡಿನತ್ತ ಹಿಂತಿರುಗಲು ಯತ್ನಿಸಿತು.

ಸಲಗ ಗ್ರಾಮಕ್ಕೆ ಬಂದಿರುವುದನ್ನು ಗಮನಿಸಿದ ರೈತರು ಹಾಗೂ ಗ್ರಾಮಸ್ಥರು ಸುರಕ್ಷತೆಗಾಗಿ ದೂರ ಸರಿದು, ಕೂಗಾಟದ ಮೂಲಕ ಅದನ್ನು ಅರಣ್ಯದತ್ತ ಓಡಿಸಲು ಪ್ರಯತ್ನಿಸಿದರು. ಈ ವೇಳೆ ಭಯಭೀತಗೊಂಡ ಆನೆ ವೇಗವಾಗಿ ಓಡುತ್ತಾ ರೈಲ್ವೆ ಹಳಿ ಭಾಗದತ್ತ ತಲುಪಿತು.

ಆದರೆ, ಹಿಂತಿರುಗುವ ದಾರಿಯಲ್ಲಿ ರೈಲ್ವೆ ಕಂಬಿ ತಡೆಗೋಡೆಯನ್ನು ದಾಟಿದ ಸ್ಥಳವನ್ನು ಗುರುತಿಸಲು ಸಾಧ್ಯವಾಗದೆ, ಹತ್ತಿರದ ಭಾಗದಲ್ಲಿ ತಡೆಗೋಡೆಯ ಕೆಳಗಿನಿಂದ ಒಳನುಗ್ಗಲು ಪ್ರಯತ್ನಿಸಿತು. ಈ ವೇಳೆ ತಡೆಗೋಡೆಗೆ ಸಿಲುಕಿಕೊಂಡು ಪೀಳುತ್ತಾ ಒದ್ದಾಡಿದ ದೃಶ್ಯ ಸ್ಥಳೀಯರಲ್ಲಿ ಆತಂಕ ಉಂಟುಮಾಡಿತು.

ಸ್ಥಳೀಯರು ನೀಡಿದ ಮಾಹಿತಿಯ ಮೇರೆಗೆ ತಕ್ಷಣವೇ ಆನೆ ಕಾವಲು ಪಡೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದರು. ಈ ನಡುವೆ ಗ್ರಾಮಸ್ಥರು ದೂರದಿಂದಲೇ ಕೂಗಾಟ ಮುಂದುವರಿಸಿ ಆನೆಯನ್ನು ಕಾಡಿನತ್ತ ಒತ್ತಾಯಿಸಿದರು. ಕೆಲಕಾಲ ಹೋರಾಟ ನಡೆಸಿದ ಸಲಗ, ಕೊನೆಗೆ ತಡೆಗೋಡೆಯೊಳಗೆ ಜಿಗಿದು, ಓಡುತ್ತಾ ಮೇವ ನರಸಿ ಉದ್ಯಾನ ವ್ಯಾಪ್ತಿಯ ಅರಣ್ಯದೊಳಗೆ ಮರಳಿ ಸೇರಿಕೊಂಡಿತು.

ಈ ಘಟನೆಯಲ್ಲಿ ಯಾರಿಗೂ ಗಾಯವಾಗಿಲ್ಲದಿದ್ದರೂ, ರೈತರ ತೋಟಗಳಿಗೆ ಹಾನಿ ಉಂಟಾಗಿದೆ ಎಂದು ತಿಳಿದುಬಂದಿದೆ. ಗ್ರಾಮಸ್ಥರಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಅರಣ್ಯ ಇಲಾಖೆ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ರೈಲ್ವೆ ತಡೆಗೋಡೆಗಳ ಸ್ಥಿತಿ ಹಾಗೂ ಆನೆಗಳ ಸಂಚಲನ ಮಾರ್ಗಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ

1 21 22 23 24 25 63
Page 23 of 63